ಮುಂಬೈ: ಸರ್ಕಾರಿ ಮತ್ತು ಖಾಸಗಿ ಸದೃಢ ಪಾಲುದಾರಿಕೆಯು ಭಾರತದ ಕ್ರೀಡೆಗಳ ಭವಿಷ್ಯ ನಿರ್ಧರಿಸಲಿದೆ ಎಂಬುದು ನನ್ನ ನಂಬಿಕೆಯಾಗಿದೆ ಎಂದು ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ನ ಸ್ಥಾಪಕ ಪಾರ್ಥ್ ಜಿಂದಾಲ್ (Paris Olympics 2024) ತಿಳಿಸಿದರು.
ಮುಂಬೈನಲ್ಲಿ ಜೆಎಸ್‌ಡಬ್ಲ್ಯು ಗ್ರೂಪ್, ಏಷ್ಯಾ ಸೊಸೈಟಿ ಇಂಡಿಯಾ ಸೆಂಟರ್ ಮತ್ತು ಮುಂಬೈನಲ್ಲಿರುವ ಫ್ರಾನ್ಸ್‌ನ ಕಾನ್ಸುಲೇಟ್ ಜನರಲ್ ವತಿಯಿಂದ ಆಯೋಜಿಸಿದ್ದ ತಜ್ಞರ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರ ಒದಗಿಸುವ ನೆರವು ಮತ್ತು ಹಣಕಾಸಿನ ಬೆಂಬಲ ಗಮನಾರ್ಹವಾಗಿದೆ. ಕ್ರೀಡೆಗೆ ಅಗತ್ಯವಾಗಿರುವ ಕ್ರೀಡಾ ವಿಜ್ಞಾನ, ಪೋಷಣೆ ಮತ್ತು ತಂತ್ರಜ್ಞಾನದಂತಹ ಅಗತ್ಯ ಸಂಗತಿಗಳನ್ನು ಖಾಸಗಿ ವಲಯವು ಒದಗಿಸುತ್ತಿದೆ. ಇದು ಸರ್ಕಾರದ ಪ್ರಯತ್ನಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದರು.
ಈ ಸಹಯೋಗವು ಹಿಂದಿನ ದಶಕದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (ಟಿಒಪಿಎಸ್), ಮಿಷನ್ ಒಲಿಂಪಿಕ್ ಸೆಲ್ ಮತ್ತು ಖೇಲೊ ಇಂಡಿಯಾದಂತಹ ಉಪಕ್ರಮಗಳು ಖಾಸಗಿ ವಲಯದ ಜತೆಗೆ ಸಮಾಲೋಚಿಸಿ ಅಭಿವೃದ್ಧಿಪಡಿಸಿದ ಇಂತಹ ಸಹಯೋಗದ ಫಲಶ್ರುತಿಗಳಾಗಿವೆ ಎಂದು ತಿಳಿಸಿದರು.
ಇದನ್ನೂ ಓದಿ: Sourav Ganguly : ಸೌರವ್ ಗಂಗೂಲಿಗೆ 52ನೇ ಜನ್ಮದಿನ; ದಾದಾನ ಅಭೂತಪೂರ್ವ ವೃತ್ತಿ ಜೀವನದ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರ
ಈ ಪ್ರಗತಿಯ ಹೊರತಾಗಿಯೂ, ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಂತಹ (ಐಐಎಸ್) ಕೆಲವು ಗಮನಾರ್ಹ ಸಂಸ್ಥೆಗಳನ್ನು ಹೊರತುಪಡಿಸಿ ಖಾಸಗಿ ವಲಯವು ಮೂಲತಃ ಈಗಾಗಲೇ ಅಸ್ತಿತ್ವದಲ್ಲಿರುವ ಸರ್ಕಾರಿ ಮೂಲಸೌಕರ್ಯದ ನೆರವಿನಿಂದ ಕಾರ್ಯನಿರ್ವಹಿಸುತ್ತದೆ. ಭಾರತದ ಕ್ರೀಡೆಗಳನ್ನು ನಿಜವಾಗಿಯೂ ಹೊಸ ಎತ್ತರಕ್ಕೆ ಕೊಂಡೊಯ್ಯಲು ನಮಗೆ ದೇಶದಾದ್ಯಂತ ಕನಿಷ್ಠ ಇಂತಹ 10 ಕೇಂದ್ರಗಳ ಅಗತ್ಯವಿದೆ. ಅದರಲ್ಲೂ ವಿಶೇಷವಾಗಿ ಪ್ರತಿಯೊಂದು ರಾಜ್ಯದಲ್ಲಿ ಇಂತಹ ಒಂದು ಕೇಂದ್ರ ಇರಬೇಕಾದ ಅಗತ್ಯ ಇದೆ. ಈ ಕೇಂದ್ರಗಳನ್ನು ನಿರ್ವಹಿಸಲು ಸರ್ಕಾರ ಈಗಾಗಲೇ ಖಾಸಗಿ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತಿದೆ, ಆದರೆ, ಇನ್ನೂ ಹೆಚ್ಚಿನ ಒಳಗೊಳ್ಳುವಿಕೆ ಅಗತ್ಯವಿದೆ ಎಂದರು.
ಭಾರತದ ಕ್ರೀಡೆಗಳಲ್ಲಿ ಎರಡು ಪ್ರಮುಖ ಸವಾಲುಗಳಿವೆ. ಅವುಗಳೆಂದರೆ, ಖಾಸಗಿ ವಲಯದ ಭಾಗವಹಿಸುವಿಕೆ ತೃಪ್ತಿದಾಯಕ ಮಟ್ಟದಲ್ಲಿ ಇಲ್ಲದಿರುವುದು ಮತ್ತು ಕ್ರೀಡಾ ಒಕ್ಕೂಟಗಳ ಒಳಗೆ ಇರುವ ನಿರಂತರ ಸಮಸ್ಯೆಗಳು. ಕ್ರೀಡಾ ಫೆಡರೇಷನ್‌ಗಳು ನಿರಂತರವಾಗಿ ರಾಜಕೀಯ ಹಸ್ತಕ್ಷೇಪದಿಂದ ಬಳಲುತ್ತಿದ್ದರೂ, ಪ್ರತಿ ವರ್ಷ ಅಲ್ಲಲ್ಲಿ ಕೆಲ ಸುಧಾರಣೆಗಳು ಕಣ್ಣಿಗೆ ಬೀಳುತ್ತವೆ. ಪ್ಯಾರಿಸ್ ಒಲಿಂಪಿಕ್ಸ್ ಸಮೀಪಿಸುತ್ತಿರುವಾಗ, ಸರ್ಕಾರ ಮತ್ತು ಖಾಸಗಿ ವಲಯದ ನಡುವಣ ಸಹಯೋಗದ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಈ ಮೊದಲಿಗಿಂತ ಹೆಚ್ಚಿನ ಸಹಯೋಗ ಕಂಡುಬರುತ್ತಿದೆ. ಇದರ ಫಲಶ್ರುತಿ ಬಗ್ಗೆ ನಾನು ಹೆಚ್ಚು ಆಶಾವಾದಿಯಾಗಿದ್ದೇನೆ.
ನಮ್ಮ ಕ್ರೀಡಾ ಪಯಣದ ಒಂದು ಮಹತ್ವದ ಬೆಳವಣಿಗೆ ಏನೆಂದರೆ, ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವ ಕ್ರೀಡಾ ತಾರೆಯರು ಪ್ರವರ್ಧಮಾನಕ್ಕೆ ಬರುತ್ತಿರುವುದು ಗಮನಿಸಬೇಕಾದ ಸಂಗತಿಯಾಗಿದೆ. 2008ರಲ್ಲಿ ಮೂವರು ಕ್ರೀಡಾ ತಾರೆಯರು ಗಮನ ಸೆಳೆದರೆ, 2012 ರಲ್ಲಿ ಇನ್ನೂ ಆರು ಕ್ರೀಡಾ ತಾರೆಯರು ಹೊಸದಾಗಿ ಹೊರಹೊಮ್ಮಿದ್ದಾರೆ. ನಂತರ 2016ರಲ್ಲಿ ಇಬ್ಬರು ಬೆಳಕಿಗೆ ಬಂದಿದ್ದಾರೆ. ಟೋಕಿಯೊದಲ್ಲಿ, ನಮ್ಮ ಹಾಕಿ ತಂಡ ಮತ್ತು ಇತರ ಆರು ಪದಕ ವಿಜೇತರು, ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ನೀರಜ್ ಚೋಪ್ರಾ ಅವರ ಜತೆಗೆ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: Kalki 2898 AD: ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ ಮಾಡಿದ ʻಕಲ್ಕಿ 2898 ಎಡಿʼಸಿನಿಮಾ!
ಬಾಕ್ಸಿಂಗ್‌ನಲ್ಲಿ ವಿಜೇಂದರ್ ಸಿಂಗ್ ಅಥವಾ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಅವರಂತೆ ಪ್ರತಿಯೊಬ್ಬ ಕ್ರೀಡಾ ತಾರೆ ತಮ್ಮ ತಮ್ಮ ಕ್ರೀಡೆಗಳಲ್ಲಿ ಕನಸುಗಳು ಮತ್ತು ಸಾಧ್ಯತೆಗಳನ್ನು ಬೆಳಗಿಸುತ್ತಾರೆ. ಜಾವೆಲಿನ್‌ನಲ್ಲಿ ನೀರಜ್ ಚೋಪ್ರಾ ಅವರ ಸಾಧನೆಗಳು, ಅವರ ವಿಶಿಷ್ಟ ಸಾಧನೆಯು ಭವಿಷ್ಯದ ಚಾಂಪಿಯನ್‌ಗಳಿಗೆ ದಾರಿ ಮಾಡಿಕೊಟ್ಟಿದೆ. ಈಗ, ಭಾರತದ ಪುರುಷರ ತಂಡದಲ್ಲಿ ಮೂವರು ಜಾವೆಲಿನ್ ಎಸೆತಗಾರರು ಪ್ಯಾರಿಸ್‌ಗೆ ಹೋಗುತ್ತಿದ್ದಾರೆ. ಇದು ನಮ್ಮ ಬದಲಾಗುತ್ತಿರುವ ಅಥ್ಲೆಟಿಕ್ ಪರಾಕ್ರಮಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಮಾತನಾಡಿ, ಒಲಿಂಪಿಕ್ ಕನಸು ಕೇವಲ ಒಬ್ಬ ಕ್ರೀಡಾಪಟುವಿನ ಕನಸು ಆಗಿರದೆ, ಅದು ಅವನ ಇಡೀ ಕುಟುಂಬದ ಕನಸಾಗಿರುತ್ತದೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಅಥ್ಲೀಟ್‌ನ ಜೀವನವನ್ನು ಮಾತ್ರವಲ್ಲದೆ ಅವನ ಕುಟುಂಬ, ಸಮಾಜ ಮತ್ತು ಹಳ್ಳಿಯ ಜೀವನವನ್ನೂ ಬದಲಾಯಿಸುತ್ತದೆ. ನಾನು ಪದಕ ಪಡೆದ ನಂತರ ಗಮನಾರ್ಹ ಬದಲಾವಣೆಗಳು ಕಂಡು ಬಂದವು. ನಾನು ತರಬೇತಿ ಪಡೆದ ರೋಹ್ಟಕ್‌ನ ಛೋಟು ರಾಮ್ ಕ್ರೀಡಾಂಗಣವು ತಗಡಿನ ಚಾವಣಿಯಿಂದ ವಾತಾನುಕೂಲಿ ಸಭಾಂಗಣವಾಗಿ ಬದಲಾಯಿತು. ನಾನು ಹುಟ್ಟಿ ಬೆಳೆದ ನನ್ನ ಹಳ್ಳಿಯಲ್ಲಿ ಒಂದು ಕ್ರೀಡಾಂಗಣವನ್ನು ನನ್ನ ಹೆಸರಿನಲ್ಲಿ ನಿರ್ಮಿಸಲಾಯಿತು.
ಒಲಿಂಪಿಕ್ ಪದಕವು ವಿಶೇಷವಾಗಿ ಮಕ್ಕಳಿಗೆ ಉತ್ತಮ ತರಬೇತಿ ನೀಡುವುದು ಸೇರಿದಂತೆ ಹಲವಾರು ಅವಕಾಶಗಳನ್ನು ಸೃಷ್ಟಿಸುತ್ತದೆ. ಮಕ್ಕಳಿಗೆ ಉತ್ತಮ ತರಬೇತಿ ಸೌಲಭ್ಯಗಳು ದೊರೆಯುತ್ತವೆ ಎಂದು ಹೇಳಿದರು.
ಹರಿಯಾಣದಲ್ಲಿ ಕುಸ್ತಿಯ ಬಗೆಗಿನ ಅಭಿಮಾನ ಈಗ ಬಹಳಷ್ಟು ಹೆಚ್ಚಿದೆ. ಪ್ರತಿ ಹತ್ತು ನಿಮಿಷದ ಪ್ರಯಾಣದ ನಂತರ ಒಂದು ಕ್ರೀಡಾಂಗಣ ನಿಮಗೆ ಎದುರಾಗುತ್ತದೆ. ಪ್ರತಿಯೊಂದು ಕ್ರೀಡಾಂಗಣದಲ್ಲಿ ಬಾಲಕಿಯರು ಕುಸ್ತಿ ತರಬೇತಿ ಪಡೆಯುತ್ತಿರುವುದನ್ನು ಕಾಣಬಹುದು.
ಹೆಣ್ಣುಮಕ್ಕಳು ಕುಸ್ತಿಯಾಡಲು ಸಾಧ್ಯವಿಲ್ಲ ಎಂದು ಜನರು ನಂಬುತ್ತಿದ್ದ ಒಂದು ಕಾಲವಿತ್ತು. ಆದರೆ, ಇಂದು ಅಂತಹ ಮನಸ್ಥಿತಿ ಬದಲಾಗಿದೆ. ಮೊದಲ ಬಾರಿಗೆ, ಐವರು ಹೆಣ್ಣುಮಕ್ಕಳು ಕುಸ್ತಿಗಾಗಿ ಒಲಿಂಪಿಕ್ಸ್‌ಗೆ ಹೋಗುತ್ತಿದ್ದಾರೆ. ಒಂದು ಕಾಲದಲ್ಲಿ ದಮನಕ್ಕೊಳಗಾಗಿದ್ದ ಹೆಣ್ಣುಮಕ್ಕಳು ಈಗ ದಿಟ್ಟತನದಿಂದ ಮುನ್ನುಗ್ಗಿ ಕುಸ್ತಿಯಲ್ಲಿ ಮಿಂಚುತ್ತಿದ್ದಾರೆ ಎಂದ ಅವರು, ನಾನು ಪದಕ ಗೆದ್ದ ನಂತರ, ಯಾರೊಬ್ಬರೂ ಕೇವಲ ಉದ್ಯೋಗ ಅಥವಾ ಲಾಭದ ಬಗ್ಗೆ ಯೋಚಿಸುತ್ತಾ ಕುಸ್ತಿಗೆ ಪ್ರವೇಶಿಸುವುದಿಲ್ಲ. ಅವರು ಈಗ ಒಲಿಂಪಿಕ್ ಪದಕ ಗೆಲ್ಲುವ ಗುರಿಯೊಂದಿಗೆ ತಮ್ಮ ಕುಸ್ತಿ ಅಭ್ಯಾಸ ಪ್ರಾರಂಭಿಸುತ್ತಾರೆ. ಹೆಣ್ಣುಮಕ್ಕಳ ಮನಸ್ಥಿತಿಯಲ್ಲಿನ ಈ ಬದಲಾವಣೆಯು ನಂಬಲಾಗದಷ್ಟು ಸ್ಪೂರ್ತಿದಾಯಕವಾಗಿದೆ ಎಂದು ಅವರು ತಿಳಿಸಿದರು.
ಭಾರತದ ಜಿಮ್ನ್ಯಾಸ್ಟಿಕ್ ಪಟು ದೀಪಾ ಕರ್ಮಾಕರ್ ಮಾತನಾಡಿ, ಯಾವುದೇ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆಯುವುದು ಯಾವುದೇ ಕ್ರೀಡಾಪಟುವಿನ ಸಾಧನೆ ಹಾದಿಯಲ್ಲಿನ ಕೆಟ್ಟ ಗಳಿಗೆಯಾಗಿರುತ್ತದೆ. ನನಗೆ ಮಾತ್ರವಲ್ಲ, ನಾಲ್ಕನೇ ಸ್ಥಾನ ತಲುಪುವ ಯಾವುದೇ ಕ್ರೀಡಾಪಟುವಿಗೆ ಅದು ನಿರಂತರವಾಗಿ ದುಃಸ್ವಪ್ನವಾಗಿ ಕಾಡುತ್ತಲೇ ಇರುತ್ತದೆ. ನಿದ್ದೆಯೇ ಬರುವುದಿಲ್ಲ. ಒಲಿಂಪಿಕ್ಸ್ ನೋಡುತ್ತ ಬಂದಿರುವ ನನಗೆ ಅಲ್ಲಿ ನಾಲ್ಕನೇ ಸ್ಥಾನಕ್ಕೆ ಬರುವ ಕ್ರೀಡಾಪಟುಗಳು ರೋದಿಸುವುದನ್ನು ಕಾಣುತ್ತಲೇ ಬಂದಿರುವೆ.
ನಾಲ್ಕನೇ ಸ್ಥಾನವು, ನಾಲ್ಕನೇ ಸ್ಥಾನವಾಗಿಯೇ ಇರುತ್ತದೆ. ಏಕೆಂದರೆ ನೀವು ಅದನ್ನು ಬದಲಾಯಿಸಲು ಸಾಧ್ಯವೇ ಇಲ್ಲ. ಯಾವುದೇ ಪದಕ ಗೆಲ್ಲುವ ಕ್ರೀಡಾಪಟು ಸದಾ ಕಾಲವು ಪದಕ ಗೆದ್ದ ಕ್ರೀಡಾಪಟು ಆಗಿಯೇ ಉಳಿಯುತ್ತಾನೆ. ಹೀಗಾಗಿ ಉತ್ತಮ ಸಾಧನೆ ಮಾಡಲು ಏನು ಮಾಡಬೇಕು ಎನ್ನುವುದನ್ನು ಇಲ್ಲಿ ಚಿಂತಿಸಲು ಇದು ಹೆಚ್ಚು ಸೂಕ್ತವಾಗಿದೆ. ನಾಲ್ಕನೇ ಸ್ಥಾನ ತಲುಪಿರುವ ಕ್ರೀಡಾಪಟುಗಳು ಮಾತ್ರ ಅದರ ನೋವನ್ನು ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ತ್ರಿಪುರಾ ರಾಜ್ಯದಲ್ಲಿನ ಜಿಮ್ನ್ಯಾಸ್ಟಿಕ್ಸ್ ಸಂಸ್ಕೃತಿಯ ಕುರಿತು ಮಾತನಾಡಿದ ದೀಪಾ ಕರ್ಮಾಕರ್, “2016 ರ ರಿಯೊ ಒಲಿಂಪಿಕ್ಸ್ ನಂತರ, ತ್ರಿಪುರಾದಲ್ಲಿ ಬಹಳಷ್ಟು ಸಂಗತಿಗಳು ಬದಲಾಗಿವೆ. ಜಿಮ್ನ್ಯಾಸ್ಟಿಕ್‌ಗೆ ಹೋಗಬಾರದು ಎಂಬ ಮನಸ್ಥಿತಿಯು ಸ್ಥಳೀಯರಲ್ಲಿ ಮನೆ ಮಾಡಿತ್ತು. ಈಗ ತ್ರಿಪುರಾದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಉದಾಹರಣೆಗೆ ಹೇಳುವುದಾದರೆ, ಮೂಲಸೌಕರ್ಯಗಳು ಸುಧಾರಣೆಗೊಂಡಿವೆ. ನೀವು ನೋಡುವ ವಾಲ್ಟ್‌ಗೆ ನಿಮಗೆ ಅತಿ ಹೆಚ್ಚಿನ ಫೋಮ್ ಪಿಟ್ಸ್‌ಗಳು ಬೇಕಾಗುತ್ತವೆ. ಇವುಗಳು ಮೊದಲು ತ್ರಿಪುರಾದಲ್ಲಿ ಇದ್ದಿರಲಿಲ್ಲ. 2016ರ ಒಲಿಂಪಿಕ್ಸ್ ನಂತರ ಫೋಮ್ ಪಿಟ್ಸ್‌ಗಳನ್ನು ನಿರ್ಮಿಸಿದರು.
ಇದನ್ನೂ ಓದಿ: Kundapura Kannada: ಅರಮನೆ ಮೈದಾನದಲ್ಲಿ ಈ ಬಾರಿ `ವಿಶ್ವ ಕುಂದಾಪುರ ಕನ್ನಡ ಹಬ್ಬ’; ಕಾರ್ಯಕ್ರಮದ ವಿವರ ಪಟ್ಟಿ ಇಲ್ಲಿದೆ!
ಇದರಿಂದ ಮಕ್ಕಳಲ್ಲಿ ಜಿಮ್ನ್ಯಾಸ್ಟಿಕ್ ಬಗೆಗಿನ ಆಸಕ್ತಿಯ ಮಟ್ಟವು ಗಮನಾರ್ಹವಾಗಿ ಹೆಚ್ಚಾಯಿತು. ಈಗ ಅದು ಸರ್ಕಾರಿ ಅಥವಾ ಖಾಸಗಿಯಾಗಿರಲಿ ಜಿಮ್ನ್ಯಾಸ್ಟಿಕ್ ತರಬೇತಿ ಕೇಂದ್ರಗಳ ಸಂಖ್ಯೆಯು ಗಮನಾರ್ಹವಾಗಿ ಹೆಚ್ಚಿದೆ. ನನ್ನ ಪ್ರಕಾರ, 2016 ರ ರಿಯೊ ಒಲಿಂಪಿಕ್ಸ್ ನಂತರ, ಬಹಳಷ್ಟು ಜನರ ಮನಸ್ಥಿತಿಯು ಮೊದಲೆಂದೂ ಕಾಣದ ರೀತಿಯಲ್ಲಿ ಬದಲಾಗಿರುವುದು ಬಹಳ ಮುಖ್ಯವಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.