Site icon Vistara News

Sujit Patwardhan | ‘ಪರಿಸರ ಸ್ನೇಹಿ ನಗರ’ ಕನಸು ಕಂಡಿದ್ದ ಖ್ಯಾತ ಪರಿಸರವಾದಿ ಸುಜಿತ್‌ ಪಟವರ್ಧನ್‌ ಇನ್ನಿಲ್ಲ

Sujit Patwardhan

ಪುಣೆ: ದೇಶದ ನಗರಗಳು ಪರಿಸರ ಸ್ನೇಹಿಯಾಗಿರಬೇಕು ಎಂಬ ಮಹೊನ್ನತ ಕನಸು ಕಂಡಿದ್ದ ಹಾಗೂ ಆ ದಿಸೆಯಲ್ಲಿ ಹೋರಾಟ, ಚಳವಳಿ, ಆಂದೋಲನ ನಡೆಸಿದ ಖ್ಯಾತ ಪರಿಸರವಾದಿ, ಪರಿಸರ ಹೋರಾಟಗಾರ ಸುಜಿತ್‌ ಪಟವರ್ಧನ್‌ (77) (Sujit Patwardhan) ನಿಧನರಾಗಿದ್ದಾರೆ. ಯಕೃತ್ತಿನ (Liver) ಸಮಸ್ಯೆಯಿಂದ ಬಳಲುತ್ತಿದ್ದ ಅವರು ಹಲವು ದಿನಗಳಿಂದ ಪುಣೆಯ ಜೋಶಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಪುಣೆ ನಿವಾಸಿಯಾಗಿದ್ದ ಅವರು 1980ರಲ್ಲಿಯೇ ನಗರದಲ್ಲಿ ಉಂಟಾಗುತ್ತಿರುವ ಪರಿಸರ ಮಾಲಿನ್ಯದ ವಿರುದ್ಧ ಹೋರಾಡಲು, ಜನ ಜಾಗೃತಿ ಮೂಡಿಸಲು ‘ಪರಿಸರ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು. ನಗರಗಳು ‘ಆಟೋಮೊಬೈಲ್‌ ಕೇಂದ್ರಿತ’ ಆಗಿರದೆ ‘ಸಾರ್ವಜನಿಕ ಕೇಂದ್ರಿತ’ ಆಗಿರಬೇಕು ಎಂಬುದು ಅವರ ಆಶಯವಾಗಿತ್ತು. ಜನರು ವಾಕಿಂಗ್‌, ಸೈಕ್ಲಿಂಗ್‌ ಅಥವಾ ಸಾರ್ವಜನಿಕ ಸಾರಿಗೆಗಳನ್ನು ಹೆಚ್ಚಾಗಿ ಬಳಸಬೇಕು ಎಂಬ ಆಶಯ ಹೊಂದಿದ್ದರು. ಇವರು ನಗರ ಸಾರಿಗೆ ತಜ್ಞರೂ ಎನಿಸಿದ್ದರು.

ವಿದೇಶದಲ್ಲಿ ಇವರ ಆಶಯ ಅನುಸರಣೆ

ಸುಜಿತ್‌ ಪಟವರ್ಧನ್‌ ಅವರ ಪರಿಸರ ಕಳಕಳಿಯು ವಿದೇಶದಲ್ಲೂ ಪರಿಣಾಮ ಬೀರಿದೆ. ಲ್ಯಾಟಿನ್‌ ಅಮೆರಿಕ ಹಾಗೂ ಯುರೋಪ್‌ನ ಹಲವು ರಾಷ್ಟ್ರಗಳಲ್ಲಿ ಇವರ ಆಶಯದಂತೆ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಲಾಗುತ್ತಿದೆ. ಹಾಗೆಯೇ, ದೇಶದಲ್ಲಿ ಆರಂಭವಾದ ‘ನರ್ಮದಾ ಬಚಾವೋ ಆಂದೋಲನ’ಕ್ಕೆ (Narmada Bachao Andolan) ಭಾರಿ ಬೆಂಬಲ, ನದಿಗಳ ಉಳಿವು, ನಗರಗಳಲ್ಲಿ ರಸ್ತೆ, ಮೇಲ್ಸೇತುವೆಗಳ ವಿಸ್ತರಣೆಗೆ ಇವರ ವಿರೋಧವಿತ್ತು.

ನದಿಗಳ ಉಳಿವು, ಬೆಟ್ಟಗಳಲ್ಲಿ ಗಣಿಗಾರಿಕೆ, ಅರಣ್ಯ ನಾಶದ ವಿರುದ್ಧ ಇವರು ಹಲವಾರು ಹೋರಾಟ ನಡೆಸಿದ್ದರು. ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ದಿಸೆಯಲ್ಲೂ ಇವರು ಕಾರ್ಯನಿರ್ವಹಿಸಿದ್ದಾರೆ. ಮಹಾಬಲೇಶ್ವರ ಪಾರಂಪರಿಕ ಸಮಿತಿ ಸದಸ್ಯರೂ ಆಗಿದ್ದ ಇವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪಟವರ್ಧನ್‌ ಅವರ ನಿಧನಕ್ಕೆ ನೂರಾರು ಪರಿಸರ ಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ | ಆಧುನಿಕ ಭಗೀರಥ ಕೆರೆ ಕಾಮೇಗೌಡರು ಇನ್ನಿಲ್ಲ

Exit mobile version