ನವ ದೆಹಲಿ: ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ (Bharat Jodo Yatra) ನಿಮಿತ್ತ ಸೋನಿಯಾ ಗಾಂಧಿ ಅಳಿಯ, ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಪೋಸ್ಟರ್ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಪೋಸ್ಟರ್ ನೋಡಿದ ಬಿಜೆಪಿ ‘ಇದು ಭಾರತ್ ಜೋಡೋ ಯಾತ್ರೆ ಅಲ್ಲ, ಇದೊಂದು ಪರಿವಾರ್ ಜೋಡೋ ಯಾತ್ರೆ’ ಎಂದು ಟೀಕಿಸಿದೆ.
ಇಂದಿನಿಂದ ಪ್ರಾರಂಭವಾಗಲಿರುವ ಭಾರತ್ ಜೋಡೋ ಯಾತ್ರೆ 150 ದಿನಗಳ ಕಾಲ ನಡೆಯಲಿದೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ದೇಶದ ಅನೇಕ ಕಡೆಗಳಲ್ಲಿ ವಿವಿಧ ಪೋಸ್ಟರ್ಗಳನ್ನು, ರಾಹುಲ್ ಗಾಂಧಿ ಬ್ಯಾನರ್ಗಳನ್ನು ಹಾಕುತ್ತಿದ್ದಾರೆ. ಅದರಲ್ಲೊಂದು ಪೋಸ್ಟರ್ನಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ರಾಜೀವ್ ಗಾಂಧಿ, ಪ್ರಿಯಾಂಕಾ ಗಾಂಧಿ ಫೋಟೋದ ಜತೆಗೆ ರಾಬರ್ಟ್ ವಾದ್ರಾ ಫೋಟೋವೂ ಇದೆ. ಅದೇ ಪೋಸ್ಟರ್ನ್ನು ರಾಬರ್ಟ್ ವಾದ್ರಾ ಶೇರ್ ಮಾಡಿಕೊಂಡು ಭಾರತ್ ಜೋಡೋ ಎಂದು ಕ್ಯಾಪ್ಷನ್ ಬರೆದು, ರಾಷ್ಟ್ರಧ್ವಜದ ಮತ್ತು ಕೈಜೋಡಿಸಿ ನಮಸ್ಕರಿಸುತ್ತಿರುವ ಇಮೋಜಿ ಹಾಕಿದ್ದಾರೆ. ಆದರೆ ಇದರಲ್ಲಿ ಎಲ್ಲವೂ ಗಾಂಧಿ ಕುಟುಂಬದವರ ಫೋಟೋಗಳೇ ಇರುವುದರಿಂದ ಬಿಜೆಪಿಯವರು ತೀವ್ರವಾಗಿ ಟೀಕಿಸಿದ್ದಾರೆ. ಇದು ಭಾರತ್ ಜೋಡೋ ಅಲ್ಲ, ಪರಿವಾರ ಜೋಡೋ ಮತ್ತು ಭ್ರಷ್ಟಾಚಾರ ಜೋಡೋ ಎಂದು ವ್ಯಂಗ್ಯವಾಡಿದ್ದಾರೆ.
ರಾಬರ್ಟ್ ವಾದ್ರಾ ಸಕ್ರಿಯವಾಗಿ ರಾಜಕೀಯಕ್ಕೇನೂ ಬಂದಿಲ್ಲ. ಆದರೆ ರಾಜಕಾರಣಕ್ಕೆ ಪ್ರವೇಶಿಸುವ ಬಗ್ಗೆ ಜೂನ್ ತಿಂಗಳಲ್ಲಿ ಸುಳಿವು ಕೊಟ್ಟಿದ್ದರು. ಸೋನಿಯಾ ಗಾಂಧಿಯವರನ್ನು ನ್ಯಾಷನಲ್ ಹೆರಾಲ್ಡ್ ಕೇಸ್ನಲ್ಲಿ ಇಡಿ ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ಮಾತನಾಡಿದ್ದ ರಾಬರ್ಟ್ ವಾದ್ರಾ, ‘ಈ ದೇಶದಲ್ಲಿ ಬದಲಾವಣೆಯ ಅಗತ್ಯವಿದೆ. ನಾನು ದೇಶದಲ್ಲಿ ಬದಲಾವಣೆ ತರುತ್ತೇನೆ ಎಂದು ಜನರು ನನ್ನ ಮೇಲೆ ನಂಬಿಕೆ ಇಟ್ಟರೆ, ಖಂಡಿತ ರಾಜಕಾರಣಕ್ಕೆ ಪ್ರವೇಶಿಸುತ್ತೇನೆ’ ಎಂದು ಹೇಳಿದ್ದರು. ಇದೀಗ ಭಾರತ್ ಜೋಡೋ ಯಾತ್ರೆಯ ಪೋಸ್ಟರ್ನಲ್ಲಿ ಕೂಡ ಅವರ ಫೋಟೋ ಇರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Bharat Jodo Yatra | ಯಾವೆಲ್ಲ ಪ್ರದೇಶಗಳಲ್ಲಿ ಹಾದು ಹೋಗಲಿದೆ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ?