ನವದೆಹಲಿ: 2011ರಿಂದ ಈವರೆಗೆ ಸುಮಾರು 16 ಲಕ್ಷ ಜನರು ಭಾರತೀಯ ಪೌರತ್ವವನ್ನು (Indian Citizenship) ತ್ಯಜಿಸಿದ್ದಾರೆ. ಈ ಪೈಕಿ ಕಳೆದ ವರ್ಷ 2,25,60 ಜನರು ತೊರೆದಿದ್ದರೆ, 2020ರಲ್ಲಿ ಅತಿ ಕಡಿಮೆ ಎಂದರೆ 85,256 ಜನರು ಪೌರತ್ವ ಬಿಟ್ಟುಕೊಟ್ಟಿದ್ದಾರೆ ಎಂದರು ಸರ್ಕಾರದ ಅಂಕಿ ಸಂಖ್ಯೆಗಳು ತಿಳಿಸಿವೆ. ಬಹುತೇಕರು ಉದ್ಯೋಗ ಕಾರಣಕ್ಕಾಗಿ ದೇಶವನ್ನು ಬಿಟ್ಟು ಬೇರೆ ದೇಶಗಳ ಪೌರತ್ವವನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಅಮೆರಿಕ ಹಾಗೂ ಯುಎಇ ಪೌರತ್ವವನ್ನು ಹೆಚ್ಚಿನ ಭಾರತೀಯರು ಪಡೆದುಕೊಳ್ಳುತ್ತಿದ್ದಾರೆಂದು ಮೂಲಗಳು ತಿಳಿಸಿವೆ(Parliament Budget Session).
ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ವಿದೇಶಾಂಗ ಸಚಿವ ಎಶ್ ಜೈಶಂಕರ್ ಅವರು ವರ್ಷವಾರು ಎಷ್ಟು ಜನರು ಪೌರತ್ವವನ್ನು ತೊರೆದಿದ್ದಾರೆಂಬ ಮಾಹಿತಿಯನ್ನು ನೀಡಿದ್ದಾರೆ. 2015ರಲ್ಲಿ 1,31,489, 2016ರಲ್ಲಿ 1,41,603 ಮತ್ತು 2017ರಲ್ಲಿ 1,33,049 ಜನರು ಭಾರತೀಯ ಪೌರತ್ವವನ್ನು ತೊರೆದಿದ್ದಾರೆಂದು ಅವರು ಮಾಹಿತಿ ನೀಡಿದ್ದಾರೆ.
ಇದೇ ವೇಳೆ, 2018ರಲ್ಲಿ 1,34,561 ಮಂದಿ, 2019ರಲ್ಲಿ 1,44,017 ಹಾಗೂ 2021ರಲ್ಲಿ 1,63,370 ಜನರು ಭಾರತೀಯ ಪೌರತ್ವವನ್ನು ಬಿಟ್ಟುಕೊಟ್ಟಿದ್ದಾರೆ. ಹಾಗೆಯೇ, 2011ರಲ್ಲಿ 1,22,819, 2012ರಲ್ಲಿ 1,20,923, 2013 ರಲ್ಲಿ 1,31,405 ಮತ್ತು 2014 ರಲ್ಲಿ 1,29,328 ಜನರು ಕೂಡ ಇದೇ ಹಾದಿಯನ್ನು ತುಳಿದಿದ್ದಾರೆಂದು ಜೈಶಂಕರ್ ಅವರು ಸಂಸತ್ತಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ: Explainer: ಭಾರತೀಯರ ಫೇವರಿಟ್ ಆಗುವತ್ತ ಯುಎಇ, ಏನಿದರ ವಿಶೇಷ?
ಕಳೆದ ಮೂರು ವರ್ಷಗಳಲ್ಲಿ ಐದು ಭಾರತೀಯ ಪ್ರಜೆಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪೌರತ್ವವನ್ನು ಪಡೆದಿದ್ದಾರೆ. ಇದೇ ವೇಳೆ, ಭಾರತೀಯರು ಪೌರತ್ವ ಪಡೆದ 135 ದೇಶಗಳ ಪಟ್ಟಿಯನ್ನು ಅವರು ಸಹ ಒದಗಿಸಿದ್ದಾರೆ.