ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ತಿಂಗಳು ಬಾಕಿ ಇರುವಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಜಟಾಪಟಿ ಶುರುವಾಗಿದೆ. ಇದರ ಮಧ್ಯೆಯೇ, ಆರ್ಥಿಕ ಪ್ರಗತಿ ಕುರಿತು ಕೇಂದ್ರ ಸರ್ಕಾರವು ಶ್ವೇತಪತ್ರ ಹೊರಡಿಸಲು ಸಂಸತ್ ಬಜೆಟ್ ಅಧಿವೇಶನವನ್ನು ಒಂದು ದಿನ ಮುಂದೂಡಿದೆ ಎಂದು ತಿಳಿದುಬಂದಿದೆ. ಜನವರಿ 31ರಂದು ಆರಂಭವಾದ ಸಂಸತ್ ಬಜೆಟ್ ಅಧಿವೇಶನವು ಫೆಬ್ರವರಿ 9ರಂದು ಮುಗಿಯಬೇಕಿತ್ತು. ಆದರೆ, ಕಲಾಪವನ್ನು ಒಂದು ದಿನ ಮುಂದೂಡಲಾಗಿದೆ.
2014ಕ್ಕಿಂತ ಮೊದಲು ದೇಶದಲ್ಲಿ ಆರ್ಥಿಕ ಬೆಳವಣಿಗೆ ಎಷ್ಟಿತ್ತು ಹಾಗೂ 2014ರ ನಂತರ ಆರ್ಥಿಕ ಪ್ರಗತಿ ಎಷ್ಟಿದೆ ಎಂಬುದನ್ನು ಜನರ ಮುಂದಿಡುವ ದೃಷ್ಟಿಯಿಂದ ಶ್ವೇತಪತ್ರ ಹೊರಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಯುಪಿಎ ಅವಧಿಯಲ್ಲಿ ಆರ್ಥಿಕ ಏರುಗತಿ ಎಷ್ಟಿತ್ತು? ದೇಶದ ಆರ್ಥಿಕ ಸ್ಥಿತಿ ಹೇಗಿತ್ತು? ನರೇಂದ್ರ ಮೋದಿ ಆಡಳಿತದ ಕಳೆದ 10 ವರ್ಷದಲ್ಲಿ ದೇಶದ ಆರ್ಥಿಕತೆ ಯಾವ ರೀತಿ ಏಳಿಗೆ ಹೊಂದಿದೆ ಎಂಬುದರ ಹೋಲಿಕೆ, ಪರಾಮರ್ಶೆ ಸೇರಿ ಹಲವು ಅಂಶಗಳು ಶ್ವೇತಪತ್ರದಲ್ಲಿರಲಿವೆ ಎಂದು ಮೂಲಗಳು ತಿಳಿಸಿವೆ.
Budget Parliament session has been extended for one day , Now it will end on 10 feb . (According to sources ) #Budget2024
— Priyanshu (@pm07052023) February 6, 2024
ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇವೆ. ಬೆಲೆಯೇರಿಕೆ, ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ತೆರಿಗೆ ಪಾಲು ಹಂಚಿಕೆಯಲ್ಲಿ ತಾರತಮ್ಯ ಸೇರಿ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿಗೆ ಕಾಂಗ್ರೆಸ್ ಸೆಡ್ಡು ಹೊಡೆಯುತ್ತಿದೆ. ಇದಕ್ಕೆ ಪ್ರತಿಯಾಗಿ, ಕೇಂದ್ರ ಸರ್ಕಾರವು ಶ್ವೇತಪತ್ರವನ್ನೇ ಹೊರಡಿಸುವ ಮೂಲಕ, ಯುಪಿಎ ಸರ್ಕಾರದ ಅವಧಿಯಲ್ಲಿ ಆರ್ಥಿಕ ಪ್ರಗತಿ ಎಷ್ಟಿತ್ತು, ಈಗ ಎಷ್ಟು ಏಳಿಗೆ ಹೊಂದಿದೆ ಎಂಬುದನ್ನು ಜನರನ್ನು ಮುಂದಿಡಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಹಾಗಾಗಿ, ಸರ್ಕಾರದ ಶ್ವೇತಪತ್ರವೀಗ ಕುತೂಹಲ ಮೂಡಿಸಿದೆ.
2014ಕ್ಕಿಂತ ಮೊದಲಿನ ಸರ್ಕಾರವು ಆರ್ಥಿಕ ನಿರ್ವಹಣೆಯಲ್ಲಿ ಹೇಗೆ ಎಡವಿದೆ ಎಂಬುದರ ಕುರಿತು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿಯೇ ಶ್ವೇತಪತ್ರ ಹೊರಡಿಸಬೇಕಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದ ವೇಳೆಯೇ ಉಲ್ಲೇಖಿಸಿದ್ದರು. ಈಗ, ಯುಪಿಎ 1 ಹಾಗೂ 2ನೇ ಅವಧಿಯ ಆರ್ಥಿಕ ಪ್ರಗತಿಯ ಪರಾಮರ್ಶೆಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: ಪರೀಕ್ಷಾ ಅಕ್ರಮಕ್ಕೆ 10 ವರ್ಷ ಜೈಲು, ಕೋಟಿ ರೂ. ದಂಡ; ಮಹತ್ವದ ವಿಧೇಯಕ ಪಾಸ್
ಪರೀಕ್ಷಾ ಅಕ್ರಮ ತಡೆಯ ಬಿಲ್ ಪಾಸ್
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಕಲು, ಅಕ್ರಮ ತಡೆಗಾಗಿ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿದ ಸಾರ್ವಜನಿಕ ಪರೀಕ್ಷೆ (ಅಕ್ರಮಗಳ ತಡೆ) ವಿಧೇಯಕಕ್ಕೆ (Public Examinations (Prevention of Unfair Means) Bill-2024) ಅಂಗೀಕಾರ ದೊರೆತಿದೆ. ವಿಧೇಯಕಕ್ಕೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದ್ದು, ಬಳಿಕ ರಾಜ್ಯಸಭೆಯಲ್ಲಿ (Rajya Sabha) ಮಂಡಿಸಲಾಗುತ್ತದೆ. ರಾಜ್ಯಸಭೆಯಲ್ಲೂ ಅಂಗೀಕಾರ ದೊರೆತ ನಂತರ ರಾಷ್ಟ್ರಪತಿ ಸಹಿಗೆ ಕಳುಹಿಸಲಾಗುತ್ತದೆ. ರಾಷ್ಟ್ರಪತಿ ಅಂಗೀಕಾರದ ಬಳಿಕ ವಿಧೇಯಕವು ಕಾಯ್ದೆಯಾಗಿ ಜಾರಿಗೆ ಬರಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ