Site icon Vistara News

Parliament Monsoon Session: ಸಂಸತ್ ಕಲಾಪದ ಪ್ರತಿ ನಿಮಿಷಕ್ಕೆ 2.5 ಲಕ್ಷ ರೂ. ವೆಚ್ಚ!

Parliament

ನವದೆಹಲಿ: ಮಳೆಗಾಲದ ಸಂಸತ್ ಅಧಿವೇಶನ ಶುರುವಾಗಿ ಒಂದು ವಾರವಾಗುತ್ತಾ ಬಂತು(Parliament Monsoon Session). ಆದರೂ ಈವರೆಗೂ ಒಂದು ಗಂಟೆಯೂ ಕಲಾಪ ಸುಗಮವಾಗಿ ನಡೆದಿಲ್ಲ. ಮಣಿಪುರ ಹಿಂಸಾಚಾರ (Manipur Violence) ಕುರಿತು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಂದ ಹೇಳಿಕೆಗೆ ಆಗ್ರಹಿಸಿ ಪ್ರತಿಪಕ್ಷಗಳು (Opposition Parties) ಉಭಯ ಸದನಗಳಲ್ಲಿ ಗದ್ದಲ ಮಾಡಿದ್ದರಿಂದ ಕಲಾಪ ನಡೆಸಲು ಸಾಧ್ಯವಾಗಿಲ್ಲ. ಇತ್ತ ಸರ್ಕಾರ ಕೂಡ ಪ್ರಧಾನಿಯಿಂದ ಹೇಳಿಕೆ ಕೊಡಿಸಲು ಮುಂದಾಗದ್ದರಿಂದ ಇಡೀ ಕಲಾಪ ವ್ಯರ್ಥವಾಗುತ್ತಿದೆ. ಅಂದ ಹಾಗೆ, ಸಂಸತ್ ಕಲಾಪ ನಡೆಸಲು ಪ್ರತಿ ನಿಮಿಷಕ್ಕೆ ಸುಮಾರು 2.5 ಲಕ್ಷ ರೂ. ವೆಚ್ಚವಾಗುತ್ತಿದೆ. ಒಂದೊಮ್ಮೆ, ಕಲಾಪ ಫಲಪ್ರದವಾಗದೇ ಹೋದರೆ, ತೆರಿಗೆದಾರರ ಹಣ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತದೆ!

ಈ ಹಿಂದೆ, ಜನವರಿ ಮತ್ತು ಏಪ್ರಿಲ್ ತಿಂಗಳಲ್ಲಿ ಎರಡು ಹಂತದಲ್ಲಿ ನಡೆದ ಬಜೆಟ್ ಅಧಿವೇಶನ ಕೂಡ ಇದೇ ರೀತಿ ವ್ಯರ್ಥವಾಗಿತ್ತು. ಆಡಳಿತ ಮತ್ತ ಪ್ರತಿಪಕ್ಷಗಳ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಆಗಲೂ ಕಲಾಪ ನಡೆಸಲು ಸಾಧ್ಯವಾಗಲಿಲ್ಲ.

2012ರಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಯುಪಿಎ ಅಧಿಕಾರದಲ್ಲಿತ್ತು. ಆಗಲೂ ಇದೇ ರೀತಿ, ಮಳೆಗಾಲದ ಅಧಿವೇಶನವು ವಾಶ್ ಔಟ್ ಆಗಿತ್ತು. ಕಲ್ಲಿದ್ದಲು ಕ್ಷೇತ್ರ ಹಂಚಿಕೆ ಸಂಬಂಧ, ಈಗ ಆಡಳಿತ ಪಕ್ಷದಲ್ಲಿರುವ ಬಿಜೆಪಿ ಹಾಗೂ ಇತರ ಪಕ್ಷಗಳು ತೀವ್ರ ಗದ್ದಲ ಮಾಡಿದ್ದರಿಂದ ಕಲಾಪ ನಡೆಸಲು ಸಾಧ್ಯವಾಗಿರಲಿಲ್ಲ. ಈ ವೇಳೆ, ಅಂದಿನ ಸರ್ಕಾರವು ಅಧಿಕೃತ ಅಂಕಿ ಸಂಖ್ಯೆಗಳನ್ನು ಬಿಡುಗಡೆ ಮಾಡಿ, ಸಂಸತ್ ಅಧಿವೇಶನವನ್ನು ನಡೆಸಲು ಪ್ರತಿ ನಿಮಿಷಕ್ಕೆ 2.5 ಲಕ್ಷ ರೂ. ವೆಚ್ಚವಾಗುತ್ತದೆ ಎಂಬ ಮಾಹಿತಿಯನ್ನು ನೀಡಿತ್ತು. ಬಹುಶಃ ಈ ಮೊತ್ತ ಈಗ ಇನ್ನೂ ಹೆಚ್ಚಾಗಿರಬಹುದು.

ಸುಗಮ ಕಲಾಪದ ಹೊಣೆಯು ಪ್ರತಿಪಕ್ಷಗಳ ಮೇಲಿರುವಷ್ಟೇ ಆಡಳಿತದ ಪಕ್ಷದ ಮೇಲೂ ಇರುತ್ತದೆ. ಇನ್‌ಫ್ಯಾಕ್ಟ್, ಆಡಳಿತದ ಪಕ್ಷದ ಜವಾಬ್ದಾರಿಯೇ ಹೆಚ್ಚಿರುತ್ತದೆ. ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸುಗಮ ಕಲಾಪವನ್ನು ನಡೆಸುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಆದರೆ, ಭಾರತದಲ್ಲಿ ಪ್ರತಿಪಕ್ಷದಲ್ಲಿ ಕಳಿತುಕೊಂಡಾಗ ಮತ್ತು ಆಡಳಿತ ಪಕ್ಷದಲ್ಲಿ ಕುಳಿತುಕೊಂಡಾಗ ರಾಜಕೀಯ ಪಕ್ಷಗಳ ನಿಲುವುಗಳು ಬದಲಾಗುತ್ತವೆ.

ಈ ಸುದ್ದಿಯನ್ನೂ ಓದಿ: Lok Sabha: ಲೋಕಸಭೆಯಲ್ಲಿ ಸಹಕಾರಿ ಸೊಸೈಟಿಗಳ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ

ಈಗ ಆಡಳಿತ ನಡೆಸುತ್ತಿರುವ ಬಿಜೆಪಿ, ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಬಹಳಷ್ಟು ಬಾರಿ ಕಲಾಪಕ್ಕೆ ಅಡ್ಡಿಪಡಿಸಿತ್ತು. ಅಲ್ಲದೇ, ಸದನದೊಳಗೆ ಪ್ರತಿಭಟನೆ ಕೂಡ ನಡೆಸಿತ್ತು. ಪ್ರತಿಭಟನೆ ನಡೆಸುವುದು ಪ್ರತಿಪಕ್ಷಗಳ ಹಕ್ಕು ಎಂದು ವಾದಿಸಿತ್ತು. ಈಗ ಅದೇ ಬಿಜೆಪಿ ಆಡಳಿತದಲ್ಲಿದ್ದು, ಕಾಂಗ್ರೆಸ್ ಪ್ರತಿಪಕ್ಷದ ಸಾಲಿನಲ್ಲಿದೆ. ಈಗ ಎಲ್ಲ ತಿರುವು-ಮುರುವು. ಅಂತಿಮವಾಗಿ ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕಾಗಿ ತೆರಿಗೆದಾರರ ಹಣವನ್ನು ಪೋಲು ಮಾಡುತ್ತಿರುವುದು ಮಾತ್ರ ಸತ್ಯವಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version