Site icon Vistara News

Monsoon Session | ಸಂಸದರ ಮನವಿ ಮೇರೆಗೇ ಅಧಿವೇಶನ ಮೊಟಕು: ಪ್ರತಿಪಕ್ಷಗಳಿಗೆ ಪ್ರಲ್ಹಾದ್‌ ಜೋಶಿ ಪ್ರತ್ಯುತ್ತರ

Monsoon Session

ನವ ದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ (Monsoon Session) ನಿಗದಿತ ಅವಧಿಗೂ ಮುನ್ನವೇ ಮುಕ್ತಾಯಗೊಂಡಿರುವುದು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಅಧಿವೇಶನವನ್ನು ಸಂಸದರ ಒತ್ತಾಯದ ಮೇರೆಗೆ ಅಂತ್ಯಗೊಳಿಸಲಾಗಿದೆಯೇ ಹೊರತು ಇದರಲ್ಲಿ ಸರ್ಕಾರದ ಪಾತ್ರವೇನೂ ಇಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಪ್ರಲ್ಹಾದ್‌ ಜೋಶಿ

ವೇಳಾಪಟ್ಟಿಯ ಪ್ರಕಾರ ಆಗಸ್ಟ್‌ 12ರವರೆಗೆ ಲೋಕಸಭೆ ಮತ್ತು ರಾಜ್ಯಸಭೆಯ ಅಧಿವೇಶನ ನಡೆಯಬೇಕಾಗಿತ್ತು. ಆದರೆ ಆಗಸ್ಟ್‌ 8ರಂದೇ, ಅಂದರೆ ಸೋಮವಾರವೇ ಕಲಾಪಕ್ಕೆ ತೆರೆ ಎಳೆಯಲಾಗಿದೆ.

ʼಇದು ಅತ್ಯಂತ ನಿರಾಸೆ ಮೂಡಿಸಿದ ಬೆಳವಣಿಗೆʼ ಎಂದು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕರು, ಸರ್ಕಾರಕ್ಕೆ ಅಧಿವೇಶನವನ್ನು ನಿಗದಿತ ವೇಳಾಪಟ್ಟಿ ಪ್ರಕಾರ ನಡೆಸುವ ಕಳಕಳಿಯೇ ಇರಲಿಲ್ಲ ಎಂದು ಟೀಕಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಪಕ್ಷದ ನಾಯಕ ಜೈರಾಮ್‌ ರಮೇಶ್‌ ಮತ್ತು ಲೋಕಸಭೆಯಲ್ಲಿನ ಕಾಂಗ್ರೆಸ್‌ನ ಉಪನಾಯಕ ಗೌರವ್‌ ಗೋಗಿ “”ಪ್ರತಿಪಕ್ಷದ ಸಂಸದರು ಕೊನೆಯ ದಿನದವರೆಗೂ ಕಲಾಪ ನಡೆಸಲು, ವಿವಿಧ ವಿಧೇಯಕಗಳ ಮೇಲೆ ಚರ್ಚೆ ನಡೆಸಲು ಉತ್ಸುಕರಾಗಿದ್ದರು. ಆದರೆ ಸರ್ಕಾರ ನಾಲ್ಕು ದಿನ ಮೊದಲೇ ಅಧಿವೇಶನವನ್ನು ಕೊನೆಗೊಳಿಸಿ, ತನಗೆ ಜನರ ಸಮಸ್ಯೆಗಳ ಕುರಿತು ಚರ್ಚಿಸುವ ಮನಸ್ಸಿಲ್ಲ ಎಂದು ತೋರಿಸಿದೆʼʼ ಎಂದು ಕಿಡಿಕಾರಿದ್ದರು.

ಇದಕ್ಕೆ ಟ್ವಿಟರ್‌ನಲ್ಲಿ ಪ್ರತ್ಯುತ್ತರ ನೀಡಿರುವ ಪ್ರಲ್ಹಾದ್‌ ಜೋಶಿ “ಕಾಂಗ್ರೆಸ್‌ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಅವರು ಹೇಳಿರುವಂತೆ ನಾಲ್ಕು ದಿನ ಮುಂಚಿತವಾಗಿ ಅಧಿವೇಶನವನ್ನು ಕೊನೆಗಾಣಿಸಲಾಗಿಲ್ಲ. ನಿಗದಿತ ವೇಳಾಪಟ್ಟಿಗಿಂತ ಎರಡು ದಿನ ಮೊದಲು ಅಂತ್ಯಗೊಂಡಿದೆ. ಈ ನಿರ್ಧಾರವನ್ನು ಪ್ರತಿಪಕ್ಷದವರೂ ಸೇರಿದಂತೆ ಸಂಸದರ ಮನವಿಯ ಮೇರೆಗೇ ತೆಗೆದುಕೊಳ್ಳಲಾಗಿದೆʼʼ ಎಂದು ಸ್ಪಷ್ಟಪಡಿಸಿದ್ದಾರೆ.

ಈಗ ಪ್ರತಿಪಕ್ಷಗಳ ನಾಯಕರು ಅಧಿವೇಶನದಲ್ಲಿ ಚರ್ಚೆ ನಡೆಯಬೇಕಿತ್ತು ಎಂದು ಹೇಳಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಆದರೆ ಅವುಗಳ ಉದ್ದೇಶ ಚರ್ಚೆಗೆ ಅಡ್ಡಿಪಡಿಸುವುದು ಮತ್ತು ಸಭಾತ್ಯಾಗ ಮಾಡುವುದೇ ಆಗಿತ್ತು. ಶೂನ್ಯ ವೇಳೆಯಲ್ಲಿ ಬೇರೆ ಬೇರೆ ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶವಿದ್ದರೂ, ಬೆಲೆ ಏರಿಕೆಯ ವಿಷಯವನ್ನು ಇಟ್ಟುಕೊಂಡು ಅಧಿವೇಶನ ಆರಂಭವಾದಾಗಿನಿಂದಲೂ ಕಲಾಪಕ್ಕೆ ಅಡ್ಡಿಪಡಿಸಲಾಯಿತು. ಇದರ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಸಭಾತ್ಯಾಗ ಕೂಡ ಮಾಡಿದವು ಎಂದು ತಿರುಗೇಟು ನೀಡಿದ್ದಾರೆ.

“”1975ರಲ್ಲಿ ತುರ್ತು ಪರಿಸ್ಥಿತಿ ಜಾರಿಗೆ ತಂದು ಪ್ರಜಾಪ್ರಭುತ್ವದ ಆಶಯಗಳಿಗೇ ಕೊಡಲಿ ಏಟು ನೀಡಿದ್ದ ಕಾಂಗ್ರೆಸ್‌ ಇಡೀ ದೇಶ ಒಂದು ಕುಟುಂಬದ ಹಿಡಿತದಲ್ಲಿರಬೇಕೆಂದು ಬಯಸಿತ್ತು. ಇಂದು ಅದೇ ಪಕ್ಷ ಪ್ರಜಾಪ್ರಭುತ್ವದ ಕುರಿತು ಮಾತನಾಡುತ್ತಿದೆ. ಇಂದೂ ಕೂಡ ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿನಲ್ಲಿ ರಾಷ್ಟ್ರೀಯ ವಿಷಯಗಳ ಕುರಿತು ಚರ್ಚೆ ನಡೆಯಲು ಅವಕಾಶ ನೀಡದೆ ಅಡ್ಡಿ ಪಡಿಸುತ್ತಿದೆ. ಇತ್ತೀಚಿನ ಕಲಾಪದ ಅವಧಿಯಲ್ಲಿ ಶೇ. 50ರಷ್ಟು ಅವಧಿಯಲ್ಲಿ ಚರ್ಚೆ ನಡೆಸದೆ ಕೇವಲ ಗದ್ದಲವೆಬ್ಬಿಸಿ, ಸಮಯವನ್ನು ವ್ಯರ್ಥಮಾಡಲಾಗಿದೆʼʼ ಎಂದು ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

“”ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಬಗ್ಗೆ ಜನರು ಏನೆಂದುಕೊಂಡಿದ್ದಾರೆ ಎಂಬುದು ಬಹಿರಂಗವಾಗಿದೆ. ಕುಟುಂಬವೊಂದರ ವಿರುದ್ಧದ ಭ್ರಷ್ಟಾಚಾರದ ವಿಷಯವನ್ನು ಮುಂದಿಟ್ಟುಕೊಂಡು ಕಲಾಪವನ್ನು ಹಾಳುಗೆಡವಲಾಯಿತು. ಕಾಂಗ್ರೆಸ್‌ ಸಂಸದರಿಗೆ ಸಾರ್ವಜನಿಕರ ಹಿತಾಸಕ್ತಿಗಿಂತ ಒಂದು ಕುಟುಂಬದ ಹಿತವನ್ನು ರಕ್ಷಿಸುವುದೇ ದೊಡ್ಡ ವಿಷಯವಾಗಿತ್ತುʼʼ ಎಂದು ಅವರು ಕುಟುಕಿದ್ದಾರೆ.

“”ವಿದ್ಯುತ್‌ ತಿದ್ದುಪಡಿ ವಿಧೇಯಕ-2022ಯನ್ನು ಪರಿಶೀಲಿಸಲು ಸಂಸದೀಯ ಸ್ಥಾಯಿ ಸಮಿತಿಗೆ ಒಪ್ಪಿಸಲು ಸರ್ಕಾರ ನಿರ್ಧರಿಸಿದ್ದರೂ ಈ ಬಗ್ಗೆ ಸುಳ್ಳು ವದಂತಿಗಳನ್ನು ಹರಡಿ, ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್‌ ನಾಯಕರು ಪ್ರಚಾರ ಗಿಟ್ಟಿಸಿಕೊಂಡರು. ಇದೇ ರೀತಿಯಾಗಿ ಸ್ಪರ್ಧಾತ್ಮಕತೆ ತಿದ್ದುಪಡಿ ವಿಧೇಯಕ-2022 ಕುರಿತೂ ಕಾಂಗ್ರೆಸ್‌ ನಾಯಕರು ಸುಳ್ಳು ಹೇಳಿದ್ದಾರೆʼʼ ಎಂದು ಸರಣಿ ಟ್ವೀಟ್‌ನಲ್ಲಿ ವಿವರಿಸಿರುವ ಪ್ರಹ್ಲಾದ್‌ ಜೋಶಿ, “”32 ವಿಧೇಯಕಗಳನ್ನು ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎಂದು ಸಂಸದರಿಗೆ ಮಾಹಿತಿ ನೀಡಲಾಗಿತ್ತು. ಅರ್ಥಪೂರ್ಣ ಚರ್ಚೆ ನಡೆಯಲಿ ಎಂಬ ಉದ್ದೇಶದಿಂದ ಸಂಸದರೊಂದಿಗೆ ಈ ಮಾಹಿತಿ ಹಂಚಿಕೊಳ್ಳಲಾಗಿತ್ತು. ಇದು ಒಳ್ಳೆಯ ಅಥವಾ ಕೆಟ್ಟ ತೀರ್ಮಾನವೇʼʼ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸಂಸದರೇ ತೀರ್ಮಾನಿಸಲಿದೆ ಎಂದಿದ್ದಾರೆ.

ಇದನ್ನೂ ಓದಿ| ಸಂಸತ್‌ ಭವನದ ಸಂಕೀರ್ಣದಲ್ಲಿ ಕರಪತ್ರ ಹಂಚುವಂತೆಯೂ ಇಲ್ಲ; ಇನ್ನೊಂದು ಹೊಸ ಆದೇಶ

Exit mobile version