ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಉದ್ಘಾಟನೆಗೊಂಡ ನೂತನ, ಅತ್ಯಾಧುನಿಕ ಸಂಸತ್ ಭವನದಲ್ಲಿ ಗುರುವಾರದಿಂದ (July 20) ಮೊದಲ ಮುಂಗಾರು ಅಧಿವೇಶನ ಆರಂಭವಾಗಲಿದೆ. ಬೆಲೆಯೇರಿಕೆ, ಮಣಿಪುರ ಹಿಂಸಾಚಾರ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಮತ್ತೊಂದೆಡೆ, ಅಧಿವೇಶನದ ವೇಳೆ 31 ವಿಧೇಯಕಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಸನ್ನದ್ಧವಾಗಿದೆ.
ಜುಲೈ 20ರಿಂದ ಆಗಸ್ಟ್ 11ರವರೆಗೆ 23 ದಿನ ಸಂಸತ್ ಅಧಿವೇಶನ ನಡೆಯಲಿದ್ದು, ಒಟ್ಟು 17 ಕಲಾಪಗಳು ನಡೆಯಲಿವೆ. ಅಧಿವೇಶನದ ಹಿನ್ನೆಲೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಜುಲೈ 19ರಂದು ಸರ್ವಪಕ್ಷಗಳ ಸಭೆ ನಡೆಯಲಿದ್ದು, ವಿಧೇಯಕಗಳ ಕುರಿತು ಚರ್ಚೆ, ಸದನ ಫಲಪ್ರದವಾಗಲು ಸಹಕಾರ ನೀಡಬೇಕು ಎಂದು ಕೋರಿದ್ದಾರೆ.
ಮಂಡನೆಯಾಗಲಿರುವ ವಿಧೇಯಕಗಳು
Just in: List of 31 bills to be taken up during the #MonsoonSession of the parliament. Delhi ordinance listed on top! pic.twitter.com/nbl6jX08Ft
— Kritsween Walia (@kritsween) July 19, 2023
ಸೆಡ್ಡು ಹೊಡೆಯಲು ಪ್ರತಿಪಕ್ಷಗಳು ಸಜ್ಜು
ಮುಂಗಾರು ಅಧಿವೇಶನದ ವೇಳೆ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಅದರಲ್ಲೂ, ಮಣಿಪುರ ಹಿಂಸಾಚಾರ, ಬೆಲೆಯೇರಿಕೆ ಸೇರಿ ಹಲವು ವಿಷಯಗಳು ಪ್ರತಿಪಕ್ಷಗಳ ಮುಂದಿವೆ. ಅದರಲ್ಲೂ, ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಜತೆಗೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಸಜ್ಜಾಗಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: PTCL Act: ದಲಿತರಿಗೆ ಭೂಮಿ ಪರಭಾರೆ ಆಗಬೇಕು ಎನ್ನುವುದರಲ್ಲಿ ರಾಜಿ ಇಲ್ಲ: ಈ ಅಧಿವೇಶನದಲ್ಲೇ ಪಿಟಿಸಿಎಲ್ ತಿದ್ದುಪಡಿ ಎಂದ ಸಿಎಂ
ಪ್ರಮುಖ ವಿಧೇಯಕಗಳು ಯಾವವು?
ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ನರೇಂದ್ರ ಮೋದಿ ಸೇರಿ ಕೇಂದ್ರದ ಹಲವು ನಾಯಕರು ಮಾತನಾಡಿದ ಕಾರಣ ಈ ಬಾರಿಯ ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆ ವಿಧೇಯಕ ಮಂಡಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಯುಸಿಸಿ ಮಸೂದೆಯು ಕೇಂದ್ರ ಸರ್ಕಾರದ ಪಟ್ಟಿಯಲ್ಲಿಲ್ಲ. ಇನ್ನು ಅರಣ್ಯ ಸಂರಕ್ಷಣಾ ವಿಧೇಯಕ, ರಾಷ್ಟ್ರೀಯ ಸಹಕಾರಿ ವಿಶ್ವವಿದ್ಯಾಲಯ ವಿಧೇಯಕ, ಡಿಜಿಟಿಲ್ ವೈಯಕ್ತಿಕ ಡೇಟಾ ರಕ್ಷಣೆ ವಿಧೇಯಕ, ರೈಲ್ವೆ ತಿದ್ದುಪಡಿ ವಿಧೇಯಕ ಸೇರಿ 31 ವಿಧೇಯಕಗಳನ್ನು ಸರ್ಕಾರ ಮಂಡಿಸಲಿದೆ.