Site icon Vistara News

Parliament Session: ಸಂಸತ್ತಿನಲ್ಲಿ ಅದಾನಿ ಗಲಾಟೆ, ಕಲಾಪ ಮುಂದೂಡಿಕೆ; ಗಾಂಧಿ ಪ್ರತಿಮೆ ಎದುರು ಪ್ರತಿಪಕ್ಷಗಳ ಪ್ರತಿಭಟನೆ

Parliament Session: Lok Sabha, Rajya Sabha adjourned, opposition starts protesting

ನವದೆಹಲಿ: ಅದಾನಿ ಷೇರು ಅವ್ಯವಹಾರ ವಿಷಯವು ಸೋಮವಾರ ಸಂಸತ್ತಿನಲ್ಲಿ (Parliament Session) ಪ್ರತಿಧ್ವನಿಸಿತು. ಈ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷಗಳು ಆಗ್ರಹಿಸಿದವು. ಸರ್ಕಾರ ಸೊಪ್ಪು ಹಾಕದ್ದರಿಂದ ಮತ್ತೆ ಗಲಾಟೆ ಶುರುವಾಯಿತು. ವಿಶೇಷವಾಗಿ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಅದಾನಿ ಕಂಪನಿಗಳು ಷೇರು ವ್ಯವಹಾರ ಕುರಿತು ಚರ್ಚೆಗೆ ಪಟ್ಟು ಹಿಡಿದ್ದರಿಂದ ಕಲಾಪ ನಡೆಸುವುದು ದುಸ್ತರವಾಯಿತು. ಇದೇ ಕಾರಣಕ್ಕೆ ರಾಜ್ಯಸಭೆ ಚೇರ್ಮನ್ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು. ಅತ್ತ ಲೋಕಸಭೆಯಲ್ಲೂ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಕಲಾಪ ಮುಂದೂಡಿದ್ದರಿಂದ ರೊಚ್ಚಿಗೆದ್ದ ಪ್ರತಿಪಕ್ಷಗಳು ಸಂಸತ್ತಿನ ಹೊರಗಡೆ ಪ್ರತಿಭಟನೆ ನಡೆಸುತ್ತಿವೆ. ಕಲಾಪಕ್ಕೂ ಮೊದಲು 16 ಪ್ರತಿಪಕ್ಷಗಳ ನಾಯಕರು ರಾಜ್ಯಸಭೆ ಪ್ರತಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಸಭೆ ಸೇರಿ, ಚರ್ಚಿಸಿದರು. ಈ ಸಭೆಯಲ್ಲಿ ಕಾಂಗ್ರೆಸ್, ಡಿಎಕೆ, ಎನ್‌ಸಿಪಿ, ಬಿಆರ್‌ಎಸ್, ಜನತಾ ದಳ(ಯುನೈಟೆಡ್), ಸಮಾಜವಾದಿ ಪಾರ್ಟಿ, ಕಮ್ಯುನಿಸ್ಟ್ ಪಾರ್ಟಿ, ಜಿಎಂಎಂ ಸೇರಿ ಅನೇಕ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.

ಇದನ್ನೂ ಓದಿ: Adani Enterprises: ಅದಾನಿ ಷೇರು ಕುಸಿತ, ಆರ್ಥಿಕತೆ ಮೇಲೆ ಪರಿಣಾವಿಲ್ಲ ಎಂದ ವಿತ್ತ ಸಚಿವೆ

ಚರ್ಚೆಗೆ ಅವಕಾಶವನ್ನು ನಿರಾಕರಿಸಿ, ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ನಾಯಕರು, ಸಂಸತ್ತಿನ ಆವರಣದೊಳಗೇ ಇರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಅದಾನಿ ಷೇರು ವ್ಯವಹಾರ ಕುರಿತು ಜಂಟಿ ಸಂಸದೀಯ ಸಮಿತಿ ಅಥವಾ ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಪ್ರತಿಪಕ್ಷಗಳು ಬೇಡಿಕೆಯನ್ನು ಮುಂದಿಟ್ಟಿವೆ.

Exit mobile version