Site icon Vistara News

Special Parliament Session: ಇಂದಿನಿಂದ ಸಂಸತ್‌ ವಿಶೇಷ ಅಧಿವೇಶನ; ಕಾದಿದೆಯಾ ಅಚ್ಚರಿ?

Parliament

ನವದೆಹಲಿ: ಸೋಮವಾರದಿಂದ (ಸೆಪ್ಟೆಂಬರ್‌ 18) ಸಂಸತ್ತಿನ ವಿಶೇಷ ಅಧಿವೇಶನ (Special Parliament Session) ಆರಂಭವಾಗಲಿದ್ದು, ಐದು ದಿನ ಕಲಾಪಗಳು ನಡೆಯಲಿವೆ. ಒಂದು ರಾಷ್ಟ್ರ, ಒಂದು ಚುನಾವಣೆ, ಇಂಡಿಯಾ ಎಂಬ ಹೆಸರನ್ನು ಭಾರತ ಎಂಬುದಾಗಿ ಬದಲಿಸುವ ವಿಧೇಯಕ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ವಕೀಲರ ತಿದ್ದುಪಡಿ ವಿಧೇಯಕ ಸೇರಿ ನಾಲ್ಕು ವಿಧೇಯಕಗಳನ್ನು ಮಂಡಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸೆಪ್ಟೆಂಬರ್‌ 22ರವರೆಗೆ ಸಂಸತ್‌ ವಿಶೇಷ ಅಧಿವೇಶನ ನಡೆಯಲಿದ್ದು, ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಮಣಿಪುರ ಹಿಂಸಾಚಾರ, ಅದಾನಿ ಪ್ರಕರಣ, ಬೆಲೆಯೇರಿಕೆ ಸೇರಿ ಹಲವು ವಿಷಯಗಳ ಮೂಲಕ ಸರ್ಕಾರವನ್ನು ಪೇಚಿಗೆ ಸಿಲುಕಿಸಲು ಪ್ರತಿಪಕ್ಷಗಳು ರಣತಂತ್ರ ರೂಪಿಸಿವೆ ಎಂದು ತಿಳಿದುಬಂದಿದೆ.

ಹೊಸ ಸಂಸತ್‌ ಭವನದಲ್ಲಿ ಮೊದಲ ಅಧಿವೇಶನ

ಸೋಮವಾರ ಹಳೆಯ ಸಂಸತ್‌ ಭವನದಲ್ಲಿಯೇ ವಿಶೇಷ ಅಧಿವೇಶನ ಆರಂಭವಾಗಲಿದೆ. ಆದರೆ, ಮಂಗಳವಾರ (ಸೆಪ್ಟೆಂಬರ್‌ 19) ನೂತನ ಸಂಸತ್‌ ಭವನದಲ್ಲಿ ಕಲಾಪಗಳು ಶುರುವಾಗಲಿವೆ. ಇದೇ ಮೊದಲ ಬಾರಿಗೆ ಹೊಸ ಸಂಸತ್‌ ಭವನದಲ್ಲಿ ಅಧಿವೇಶನ ನಡೆಯುತ್ತಿದೆ. ಇನ್ನು ನೂತನ ಸಂಸತ್‌ ಭವನದ ಸಿಬ್ಬಂದಿಗೆ ಹೊಸ ಸಮಸ್ತ್ರವನ್ನೂ ಕೇಂದ್ರ ಸರ್ಕಾರ ನೀಡಲಿದೆ.

ಸೆಪ್ಟೆಂಬರ್ 20ರಿಂದ ಸಾಮಾನ್ಯ ಸರ್ಕಾರಿ ಕೆಲಸಗಳು ನೂತನ ಸಂಸತ್ ಭವನದಲ್ಲಿ ಪ್ರಾರಂಭವಾಗೊಳ್ಳಲಿವೆ. ಸಂಸತ್ತಿನ ಪಯಣ, ಸಾಧನೆಗಳು, ನೆನಪು ಮತ್ತು ಕಲಿಕೆ ಕುರಿತ ಚರ್ಚೆಯು ಮೊದಲ ದಿನದ ಅಧಿವೇಶನದಲ್ಲಿ ನಡೆಯಲಿದೆ. ಸಂಸತ್ತಿನ 75 ವರ್ಷಗಳ ಪ್ರಯಾಣದ ಕುರಿತು ಸರ್ಕಾರ ಅಧಿವೇಶನದ ಮೊದಲ ದಿನದಂದು ಚರ್ಚೆ ನಡೆಸಲಿದೆ. ಸೆಪ್ಟೆಂಬರ್ 19 ರಂದು ಹಳೆಯ ಸಂಸತ್ತಿನಲ್ಲಿ ಸಂಸದರ ಫೋಟೊ ಸೆಷನ್‌ ಕೂಡ ಇರಲಿದೆ. ಅದಾದ ಬಳಿಕ ಬೆಳಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಮುಗಿದ ಬಳಿಕ ಹೊಸ ಸಂಸತ್ತಿಗೆ ಸಂಸದರು ಪ್ರವೇಶಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮಂಡಿಸುವ ವಿಧೇಯಕಗಳು ಯಾವವು?

ವಿಶೇಷ ಅಧಿವೇಶನದಲ್ಲಿ 2023ರ ವಕೀಲರ ತಿದ್ದುಪಡಿ ವಿಧೇಯಕ ಹಾಗೂ 2023ರ ನಿಯತಕಾಲಿಕಗಳ ಮುದ್ರಣ ಮತ್ತು ನೋಂದಣಿ ವಿಧೇಯಕವನ್ನು ಮಂಡಿಸಲಾಗುತ್ತಿದೆ. ಈ ಎರಡೂ ವಿಧೇಯಕಗಳು ಈ ಹಿಂದೆ ಆಗಸ್ಟ್ 3ರಂದು ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿವೆ. ಮತ್ತೊಂದೆಡೆ, ರಾಜ್ಯಸಭಾ ಸಂಸದರು 2023ರ ಪೋಸ್ಟ್ ಆಫೀಸ್ ವಿಧೇಯಕ ಮತ್ತು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ವಿಧೇಯಕವನ್ನು ಚರ್ಚಿಸಲಿದ್ದಾರೆ. ಈ ಎರಡೂ ವಿಧೇಯಕಗಳನ್ನು ಆಗಸ್ಟ್ 10ರಂದು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ.

ಇದನ್ನೂ ಓದಿ: Special Parliament Session: ವಿಶೇಷ ಅಧಿವೇಶನ; ಸಂಸದರಿಗೆ 3 ಸಾಲಿನ ವಿಪ್‌ ಜಾರಿಗೊಳಿಸಿದ ಬಿಜೆಪಿ

ಸರ್ಕಾರವು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಪ್ರಸ್ತಾಪಿಸುವ ಬಗ್ಗೆ ಊಹಾಪೋಹಗಳಿದ್ದರೂ, ಈಗ ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವ ತಾತ್ಕಾಲಿಕ ಕಾರ್ಯಸೂಚಿಯಲ್ಲಿ ಆ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ವಿಶೇಷ ಸಂಸತ್ ಅಧಿವೇಶನದಲ್ಲಿ ಇಂಡಿಯಾ ಪದದ ಬದಲಿಗೆ ಭಾರತ ಪದವನ್ನು ಬಳಸುವ ಸಂಬಂಧ ಕೇಂದ್ರ ಸರ್ಕಾರವು ವಿಧೇಯಕ ಮಂಡಿಸಲಿದೆ ಎಂಬ ಊಹಾಪೋಹಗಳೂ ಕೂಡ ಇವೆ.

Exit mobile version