ಹೊಸದಿಲ್ಲಿ: ನಿನ್ನೆ ಸಂಸತ್ ಅಧಿವೇಶನ(Parliament Sessions)ದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಜವಾಹರ ಲಾಲ್ ನೆಹರು ಅವರಿಂದ ಹಿಡಿದು ಸೀತಾರಾಮ್ ಕೇಸರಿ ಅವರ ತನಕ ಉದಾಹರಣೆ, ನಿದರ್ಶನ, ಕತೆಗಳು, ಉಪಕತೆಗಳ ಮೂಲಕ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದ ನರೇಂದ್ರ ಮೋದಿ, ರಾಹುಲ್ ಗಾಂಧಿ (Rahul Gandhi), ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಈ ವೇಳೆ ನರೇಂದ್ರ ಮೋದಿ ಅವರನ್ನು ಪ್ರತಿಪಕ್ಷದ ಸಂಸದರು ಪದೇ ಪದೇ ಅಡ್ಡಿಪಡಿಸಿ ಸದನದ ಬಾವಿಯಲ್ಲಿ ಪ್ರತಿಭಟನೆ ನಡೆಸಿದರು. ಆ ಸಂದರ್ಭದಲ್ಲಿ ತಮ್ಮ ಮಾತಿಗೆ ಅಡ್ಡಿಯಾಗುತ್ತಿದ್ದ ಪ್ರತಿ ಪಕ್ಷ ಸಂಸದರಿಗೆ ಮೋದಿ ಒಂದು ಲೋಟ ನೀರು ಕೊಟ್ಟಿರುವ ಘಟನೆಯೂ ನಿನ್ನೆ ನಡೆದಿತ್ತು. ಇದೀಗ ಈ ವಿಡಿಯೋ ಸಮಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದೆ.
ನೀಟ್ ಅಕ್ರಮ, ಮಣಪುರ ಹಿಂಸಾಚಾರ ಮೊದಲ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ನಾಯಕರು ಸದನದ ಬಾವಿಳಿದು ಪ್ರತಿಭಟನೆ ನಡೆಸಿದ್ದರು. ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಒಂದು ಕ್ಷಣದಲ್ಲಿ ಪ್ರತಿಪಕ್ಷ ನಾಯಕರ ವರ್ತನೆ ಮಿತಿಮೀರುತ್ತಿದ್ದಂತೆ ಪ್ರಧಾನಿ ಮೋದಿ ತಮ್ಮ ಟೇಬಲ್ ಮೇಲಿದ್ದ ಒಂದು ಲೋಟ ನೀರನ್ನು ಅವರಿಗೆ ನೀಡಿದ್ದಾರೆ. ವಿರೋಧ ಪಕ್ಷದ ಸಂಸದರೊಬ್ಬರು ಅದನ್ನು ಸ್ವೀಕರಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದ್ದು, ಇದನ್ನು ಪ್ರಧಾನಿಯವರ ಸದ್ಭಾವನೆ ಮತ್ತು ಸಂಯಮದ ಸಂಕೇತವೆಂದು ಎಂದು ನೆಟ್ಟಿಗರು ಕರೆದಿದ್ದಾರೆ. ಅನೇಕರು ಪ್ರಧಾನಿಯ “ಬಾಸ್ ನಡೆ” ಯನ್ನು ಶ್ಲಾಘಿಸಿದರು.
PM Modi gave a glass of drinking water to an opposition MP who was shouting slogans against him in the well pic.twitter.com/I4tzWzcXNg
— Rishi Bagree (@rishibagree) July 2, 2024
ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಮೋದಿ ತಮ್ಮ ಭಾಷಣಕ್ಕೆ ಅಡ್ಡಿಪಡಿಸುವ ವಿರೋಧ ಪಕ್ಷದ ಸಂಸದರಿಗೆ ನೀರು ಕುಡಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಭಾಷಣದ ಕೊನೆಯಲ್ಲಿ, “ನನ್ನ ದನಿ ಇನ್ನೂ ಗಟ್ಟಿ ಇದೆ. ಸಂಕಲ್ಪವೂ ಅಷ್ಟೇ ದೃಢವಾಗಿದೆ. ಈ ಮೋದಿ ಯಾರಿಗೂ ಹೆದರುವುದಿಲ್ಲ” ಎಂದು ಅಬ್ಬರಿಸಿದ ಪ್ರಧಾನಿ, ನಾನು ಕಾಂಗ್ರೆಸ್‌ನವರಿಗೆ ಜಾಣತನ ಕೊಡಲಿ ಎಂಬುದಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಬಾಲಬುದ್ಧಿಯ ನಾಯಕನಿಗೂ ಬುದ್ಧಿ ಕೊಡಲಿ. ರಾಷ್ಟ್ರಪತಿಯವರ ಭಾಷಣಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಹಾಗೆಯೇ, ಇಷ್ಟು ಹೊತ್ತು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿಯೂ ಧನ್ಯವಾದ ತಿಳಿಸುತ್ತೇನೆ. ಯಾರು ಎಷ್ಟೇ ಗಲಾಟೆ ಮಾಡಿದರೂ ನನ್ನ ಧ್ವನಿಯನ್ನು, ಸತ್ಯದ ಧ್ವನಿಯನ್ನು ಅಡಗಿಸಲು ಆಗುವುದಿಲ್ಲ. ನಾನು ಇದುವರೆಗೆ ಸತ್ಯದ ಅನುಭವವನ್ನು ಅನುಭವಿಸಿದ್ದೇನೆ ಎಂದು ಹೇಳಿದರು.
ಪ್ರತಿಪಕ್ಷಗಳ ಆಗ್ರಹದ ಮಧ್ಯೆಯೇ ನರೇಂದ್ರ ಮೋದಿ ಅವರು ನೀಟ್ ಅಕ್ರಮದ ಕುರಿತು ಮಾತನಾಡಿದರು. “ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಗಂಭೀರ ವಿಷಯವಾಗಿದೆ. ಇದು ನಮಗೂ ಆತಂಕ ತಂದಿದೆ. ಆದರೆ, ದೇಶದ ಯುವಕ-ಯುವತಿಯರಿಗೆ ನಮ್ಮ ಸರ್ಕಾರ ಒಂದು ಭರವಸೆ ನೀಡುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಭವಿಷ್ಯಕ್ಕೆ ತೊಂದರೆಯಾಗಲು ನಾವು ಬಿಡುವುದಿಲ್ಲ. ನೀಟ್ ವಿಷಯದಲ್ಲಿ ಅಕ್ರಮ ಎಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದೆ. ಇದಕ್ಕಾಗಿ ಮುಂದಿನ ದಿನಗಳಲ್ಲೂ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈಗಾಗಲೇ ಹಲವು ಕ್ರಮ ತೆಗೆದುಕೊಳ್ಳಲಾಗಿದೆ. ಹಾಗಾಗಿ, ದೇಶದ ಯುವಕ-ಯುವತಿಯರು ಯೋಚಿಸಬೇಕಾದ ಅವಶ್ಯಕತೆ ಇಲ್ಲ” ಎಂದು ಹೇಳಿದರು.
ಲೋಕಸಭೆ ಚುನಾವಣೆ ಗೆಲುವಿನ ಕುರಿತು ಕೂಡ ನರೇಂದ್ರ ಮೋದಿ ಮಾತನಾಡಿದರು. “ದೇಶದಲ್ಲಿ ಮೂರನೇ ಬಾರಿಗೆ ಆಡಳಿತಕ್ಕೆ ಬರುವುದು ಸುಲಭವಲ್ಲ. ಜನರ ಪರವಾದ ಆಡಳಿತವನ್ನೇ ತಪಸ್ಸಿನ ರೀತಿ ಮಾಡಿದ ಕಾರಣದಿಂದಾಗಿ ನಮಗೆ ದೇಶದ ಜನ ಮೂರನೇ ಬಾರಿಗೆ ಅವಕಾಶ ನೀಡಿದ್ದಾರೆ. ಕಳೆದ 60 ವರ್ಷಗಳಲ್ಲಿಯೇ ದೇಶದ ಜನರು ಯಾರನ್ನೂ ಮೂರನೇ ಬಾರಿಗೆ ಆಯ್ಕೆ ಮಾಡಿಲ್ಲ. ನಮ್ಮ ಮೇಲಿನ ಭರವಸೆ, ನಂಬಿಕೆಯಿಂದಲೇ ಮೂರನೇ ಬಾರಿಗೆ ಗೆಲ್ಲಿಸಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ:Sudha Murty: ಕರ್ನಾಟಕ ಸೇರಿ ದೇಶದ ಪ್ರವಾಸೋದ್ಯಮಕ್ಕೆ ಒತ್ತು ನೀಡಿ; ರಾಜ್ಯಸಭೆಯಲ್ಲಿ ಸುಧಾಮೂರ್ತಿ ಮೊದಲ ಭಾಷಣ!