ನವದೆಹಲಿ: ಕೆಲವೇ ಕ್ಷಣಗಳಲ್ಲಿ ಸಂಸತ್‌ನಲ್ಲಿ ಐದು ದಿನಗಳ ವಿಶೇಷ ಅಧಿವೇಶನ (Special Parliament Session) ಆರಂಭವಾಗಲಿದೆ. ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಕೇವಲ ಐದು ದಿನಗಳವರೆಗೆ ಅಧಿವೇಶನ ನಡೆಯುವ ಕಾರಣ, ಪ್ರತಿಪಕ್ಷಗಳು ಶಾಂತಿಯುತವಾಗಿ ವರ್ತಿಸಬೇಕು. ಶಾಂತಿ ಕಾಪಾಡುವ ಮೂಲಕ ಯಶಸ್ವಿ ಕಲಾಪಗಳಿಗೆ ಅನುವು ಮಾಡಿಕೊಡಬೇಕು. ಇದೊಂದು ಐತಿಹಾಸಿಕ ಅಧಿವೇಶನ” ಎಂದು ಮನವಿ ಮಾಡಿದರು.
ಲೋಕಸಭೆಯಲ್ಲಿ ಮೋದಿ ಮಾತು
ವಿಶೇಷ ಸಂಸತ್ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮೋದಿ ಅವರು ಲೋಕಸಭೆಯಲ್ಲಿ ಮಾತನಾಡಲಿದ್ದಾರೆ. ಮಂಗಳವಾರ (ಸೆಪ್ಟೆಂಬರ್ 19) ನೂತನ ಸಂಸತ್ ಭವನದಲ್ಲಿ ಅಧಿವೇಶನ ಆರಂಭವಾಗುವ ಕಾರಣ ಹಳೆಯ ಸಂಸತ್ ಭವನದಲ್ಲಿ ಮೋದಿ ಮಾಡುವ ಕೊನೆಯ ಭಾಷಣ ಇದಾಗಿರಲಿದೆ. ಹಾಗಾಗಿ, 75 ವರ್ಷದ ಇತಿಹಾಸದ ಕುರಿತು ಮೋದಿ ಮಾತನಾಡಲಿದ್ದಾರೆ ಎನ್ನಲಾಗಿದೆ.
#WATCH | PM Narendra Modi says, "…This session of the Parliament is short but going by the time, it is huge. This is a session of historic decisions. A speciality of this session is that the journey of 75 years is starting from a new destination…Now, while taking forward the… pic.twitter.com/suOuM2pnyH
— ANI (@ANI) September 18, 2023
ಸೋಮವಾರ ಹಳೆಯ ಸಂಸತ್ ಭವನದಲ್ಲಿಯೇ ವಿಶೇಷ ಅಧಿವೇಶನ ಆರಂಭವಾಗಲಿದೆ. ಆದರೆ, ಮಂಗಳವಾರ (ಸೆಪ್ಟೆಂಬರ್ 19) ನೂತನ ಸಂಸತ್ ಭವನದಲ್ಲಿ ಕಲಾಪಗಳು ಶುರುವಾಗಲಿವೆ. ಇದೇ ಮೊದಲ ಬಾರಿಗೆ ಹೊಸ ಸಂಸತ್ ಭವನದಲ್ಲಿ ಅಧಿವೇಶನ ನಡೆಯುತ್ತಿದೆ. ಇನ್ನು ನೂತನ ಸಂಸತ್ ಭವನದ ಸಿಬ್ಬಂದಿಗೆ ಹೊಸ ಸಮಸ್ತ್ರವನ್ನೂ ಕೇಂದ್ರ ಸರ್ಕಾರ ನೀಡಲಿದೆ.
ಇದನ್ನೂ ಓದಿ: Special Parliament Session: ಇಂದಿನಿಂದ ಸಂಸತ್ ವಿಶೇಷ ಅಧಿವೇಶನ; ಕಾದಿದೆಯಾ ಅಚ್ಚರಿ?
ಸೆಪ್ಟೆಂಬರ್ 20ರಿಂದ ಸಾಮಾನ್ಯ ಸರ್ಕಾರಿ ಕೆಲಸಗಳು ನೂತನ ಸಂಸತ್ ಭವನದಲ್ಲಿ ಪ್ರಾರಂಭವಾಗೊಳ್ಳಲಿವೆ. ಸಂಸತ್ತಿನ ಪಯಣ, ಸಾಧನೆಗಳು, ನೆನಪು ಮತ್ತು ಕಲಿಕೆ ಕುರಿತ ಚರ್ಚೆಯು ಮೊದಲ ದಿನದ ಅಧಿವೇಶನದಲ್ಲಿ ನಡೆಯಲಿದೆ. ಸಂಸತ್ತಿನ 75 ವರ್ಷಗಳ ಪ್ರಯಾಣದ ಕುರಿತು ಸರ್ಕಾರ ಅಧಿವೇಶನದ ಮೊದಲ ದಿನದಂದು ಚರ್ಚೆ ನಡೆಸಲಿದೆ. ಸೆಪ್ಟೆಂಬರ್ 19 ರಂದು ಹಳೆಯ ಸಂಸತ್ತಿನಲ್ಲಿ ಸಂಸದರ ಫೋಟೊ ಸೆಷನ್ ಕೂಡ ಇರಲಿದೆ. ಅದಾದ ಬಳಿಕ ಬೆಳಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಮುಗಿದ ಬಳಿಕ ಹೊಸ ಸಂಸತ್ತಿಗೆ ಸಂಸದರು ಪ್ರವೇಶಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮಂಡಿಸುವ ವಿಧೇಯಕಗಳು ಯಾವವು?
ವಿಶೇಷ ಅಧಿವೇಶನದಲ್ಲಿ 2023ರ ವಕೀಲರ ತಿದ್ದುಪಡಿ ವಿಧೇಯಕ ಹಾಗೂ 2023ರ ನಿಯತಕಾಲಿಕಗಳ ಮುದ್ರಣ ಮತ್ತು ನೋಂದಣಿ ವಿಧೇಯಕವನ್ನು ಮಂಡಿಸಲಾಗುತ್ತಿದೆ. ಈ ಎರಡೂ ವಿಧೇಯಕಗಳು ಈ ಹಿಂದೆ ಆಗಸ್ಟ್ 3ರಂದು ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿವೆ. ಮತ್ತೊಂದೆಡೆ, ರಾಜ್ಯಸಭಾ ಸಂಸದರು 2023ರ ಪೋಸ್ಟ್ ಆಫೀಸ್ ವಿಧೇಯಕ ಮತ್ತು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ವಿಧೇಯಕವನ್ನು ಚರ್ಚಿಸಲಿದ್ದಾರೆ. ಈ ಎರಡೂ ವಿಧೇಯಕಗಳನ್ನು ಆಗಸ್ಟ್ 10ರಂದು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ.