ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಿರ್ಮಿಸಿರುವ ನೂತನ ಸಂಸತ್ ಭವನಕ್ಕೆ (New Parliament Building) ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಆದರೆ, ಇದುವರೆಗೆ ಸಂಸತ್ ಕಲಾಪಗಳು ನೂತನ ಸಂಸತ್ ಭವನದಲ್ಲಿ ನಡೆದಿರಲಿಲ್ಲ. ಆದರೀಗ ನೂತನ ಸಂಸತ್ ಭವನದಲ್ಲಿ ಕಲಾಪ (Special Parliament Session) ಆರಂಭಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಗಣೇಶ ಚತುರ್ಥಿಯ (ಸೆಪ್ಟೆಂಬರ್ 19) ಶುಭದಿನದಂದೇ ಹೊಸ ಸಂಸತ್‌ನಲ್ಲಿ ಕಲಾಪ ನಡೆಯಲಿವೆ ಎಂದು ವರದಿಯೊಂದು ತಿಳಿಸಿದೆ.
ಹೌದು, ಸೆಪ್ಟೆಂಬರ್ 18ರಿಂದ 22ರವರೆಗೆ ಸಂಸತ್ ವಿಶೇಷ ಅಧಿವೇಶನ ನಡೆಯಲಿದೆ. ಒಂದು ದೇಶ, ಒಂದು ಚುನಾವಣೆ ದೃಷ್ಟಿಯಿಂದ ವಿಧೇಯಕ ಮಂಡನೆ ಸೇರಿ ಹಲವು ಅಜೆಂಡಾಗಳು ಕೇಂದ್ರ ಸರ್ಕಾರದ ಮುಂದಿವೆ. ಸೆಪ್ಟೆಂಬರ್ 18ರಂದು ಹಳೆಯ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ಆರಂಭವಾಗಲಿದೆ. ಆರಂಭವಾದ ಮರುದಿನ ಅಂದರೆ ಸೆಪ್ಟೆಂಬರ್ 19ರಂದೇ ನೂತನ ಸಂಸತ್ ಭವನದಲ್ಲಿ ಮೊದಲ ಅಧಿವೇಶನ ಆರಂಭವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
24 ಪಕ್ಷಗಳು ಭಾಗಿ ಎಂದ ಸೋನಿಯಾ ಗಾಂಧಿ
ಸಂಸತ್ ವಿಶೇಷ ಅಧಿವೇಶನ ಕರೆದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ಪತ್ರ ಬರೆದಿದ್ದಾರೆ. “ವಿಶೇಷ ಅಧಿವೇಶನದಲ್ಲಿ ಇಂಡಿಯಾ ಒಕ್ಕೂಟದ 24 ಪಕ್ಷಗಳು ಭಾಗಿಯಾಗಲಿವೆ. ಅಧಿವೇಶನಲ್ಲಿ ದೇಶದ ಹಿತಚಿಂತನೆಯ ವಿಷಯಗಳ ಕುರಿತು ಚರ್ಚೆ ಮಾಡಲು ಅವಕಾಶ ನೀಡಬೇಕು” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Parliament Session: ಸಂಸತ್ ವಿಶೇಷ ಅಧಿವೇಶನ ಕರೆದ ಕೇಂದ್ರ; ಏಕರೂಪ ನಾಗರಿಕ ಸಂಹಿತೆ ಜಾರಿ?
ಹೇಗಿದೆ ನೂತನ ಸಂಸತ್ ಭವನ?
ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ನೂತನ ಸಂಸತ್ ಕಟ್ಟಡ ನಿರ್ಮಿಸಲಾಗಿದೆ. ಈ ನೂತನ ಕಟ್ಟಡ 65 ಸಾವಿರ ಚದರ ಮೀಟರ್ ಪ್ರದೇಶಕ್ಕೆ ವ್ಯಾಪಿಸಿದೆ. ಲೋಕಸಭೆ ಮತ್ತು ರಾಜ್ಯ ಸಭೆ ಕಾರ್ಯ-ಕಲಾಪಗಳಿಗಾಗಿ ಎರಡು ದೊಡ್ಡ-ವಿಶಾಲವಾದ ಸಭಾಂಗಣಗಳನ್ನು ಹೊಂದಿದೆ. ಒಂದು ಗ್ರಂಥಾಲಯ, ಸಂಸದರ ಕಚೇರಿಗಳು, ಸಭೆಗಳಿಗಾಗಿ ಸಮಿತಿ ರೂಮ್ಗಳು ಮತ್ತಿತರ ಸೌಕರ್ಯಗಳನ್ನು ಹೊಂದಿರಲಿದೆ. ಲೋಕಸಭೆ ಕಲಾಪ ನಡೆಯುವ ಹಾಲ್ಗಳಲ್ಲಿ 888 ಸಂಸದರು ಮತ್ತು ರಾಜ್ಯ ಸಭೆ ಕಲಾಪ ನಡೆಯುವಲ್ಲಿ 384 ಸಂಸದರು ಕುಳಿತುಕೊಳ್ಳಬಹುದಾಗಿದೆ. ಅಂದಹಾಗೆ, ಲೋಕಸಭೆ ಹಾಲ್ಅನ್ನು ರಾಷ್ಟ್ರಪಕ್ಷಿ ನವಿಲು ಮತ್ತು ರಾಜ್ಯಸಭೆಯನ್ನು ಕಮಲದ ಹೂವಿನ ಥೀಮ್ನಲ್ಲಿ ನಿರ್ಮಿಸಲಾಗಿದೆ.