Site icon Vistara News

Winter Session: ಡಿಸೆಂಬರ್ 4ರಿಂದ 22ರವರೆಗೆ ಚಳಿಗಾಲದ ಸಂಸತ್ ಅಧಿವೇಶನ

Parliament Winter session will held from December 4 to 22

ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha election) ಕೆಲವೇ ತಿಂಗಳು ಬಾಕಿ ಉಳಿದಿರುವಾಗಲೇ ಚಳಿಗಾಲದ ಸಂಸತ್ ಅಧಿವೇಶನವು ಡಿಸೆಂಬರ್ 4ರಿಂದ ಡಿಸೆಂಬರ್ 22ರವರೆಗೆ ಹೊಸ ಸಂಸತ್ ಭವನದಲ್ಲಿ ನಡೆಯಲಿದೆ. ಈ ಕುರಿತಾದ ಮಾಹಿತಿಯನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಹಂಚಿಕೊಂಡಿದ್ದಾರೆ. “ಅಮೃತ್ ಕಾಲ್ ಅಧಿವೇಶನದಲ್ಲಿ ಶಾಸಕಾಂಗ ವ್ಯವಹಾರ ಮತ್ತು ಇತರ ವಿಷಯಗಳ ಬಗ್ಗೆ ಚರ್ಚೆಗಳನ್ನು ಜನರು ಎದುರು ನೋಡುತ್ತಿದ್ದಾರೆ” ಎಂದು ಸಚಿವ ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿದ್ದಾರೆ.

ಭಾರತೀಯ ದಂಡ ಸಂಹಿತೆ (IPC), ಕ್ರಿಮಿನಲ್ ಪ್ರೊಸೀಜರ್ ಕೋಡ್ (CRPC) ಮತ್ತು ಸಾಕ್ಷ್ಯ ಕಾಯ್ದೆಯನ್ನು ಬದಲಿಸಲು ಬಯಸುವ ಮೂರು ಪ್ರಮುಖ ಮಸೂದೆಗಳನ್ನು ಅಧಿವೇಶನದಲ್ಲಿ ಪರಿಗಣನೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಯು ಇತ್ತೀಚೆಗೆ ಮೂರು ವರದಿಗಳನ್ನು ಅಂಗೀಕರಿಸಿದೆ. ಹಾಗಾಗಿ, ಈ ಬಗ್ಗೆ ಹೆಚ್ಚಿನ ನಿರೀಕ್ಷೆಗಳು ಗರಿಗದರಿವೆ.

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ವಿರುದ್ಧದ “ಪ್ರಶ್ನೆಗಾಗಿ ಲಂಚ” ಆರೋಪಗಳ ಕುರಿತು ನೈತಿಕ ಸಮಿತಿಯ ವರದಿಯನ್ನು ಲೋಕಸಭೆಯಲ್ಲಿ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ. ಕ್ರಿಸ್‌ಮಸ್‌ಗೂ ಮುನ್ನವೇ ಚಳಿಗಾಲದ ಅಧಿವೇಶನ ಮುಕ್ತಾಯಗೊಳ್ಳಲಿದ್ದು, ಈ ವರ್ಷದ ಸಂಸತ್ತಿನ ಕೊನೆಯ ಅಧಿವೇಶನವಾಗಲಿದೆ.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಐದು ದಿನಗಳ ವಿಶೇಷ ಸಂಸತ್ ಅಧಿವೇಶನವನ್ನು ಕರೆದಿತ್ತು. ವಿಶೇಷ ಅಧಿವೇಶನವನ್ನು ಹೊಸ ಸಂಸತ್ ಭವನದಲ್ಲಿ ನಡೆಸಲಾಯಿತು, ಇದರಲ್ಲಿ ಸರ್ಕಾರವು ಹಳೆಯ ಸಂಸತ್ ಭವನದ 75 ವರ್ಷಗಳ ಇತಿಹಾಸವನ್ನು ಚರ್ಚಿಸಿತು. ಸಂಸತ್ತಿನ ಕಾರ್ಯಕ್ರಮಗಳಿಗೆ ಹೆಚ್ಚುವರಿ ಸ್ಥಳವನ್ನು ಒದಗಿಸಲು ಅದನ್ನು ಮರುಹೊಂದಿಸಲಾಗುವುದು ಮತ್ತು ಹಳೆಯ ಕಟ್ಟಡದ ಒಂದು ಭಾಗವನ್ನು ಪರಿವರ್ತಿಸಲಾಗುವುದು. ಸಾಂಪ್ರದಾಯಿಕ ರಚನೆಯ ಇತಿಹಾಸವನ್ನು ಸಂರಕ್ಷಿಸಲು ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗುತ್ತಿದೆ.

ಸಂಸತ್ತಿನ ಉಭಯ ಸದನಗಳಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೂ ಐದು ದಿನಗಳ ವಿಶೇಷ ಅಧಿವೇಶನ ಸಾಕ್ಷಿಯಾಯಿತು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಈ ವಿಧೇಕದ ಮೂಲಕ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸಲಾಗುತ್ತದೆ.

ಈ ಸುದ್ದಿಯನ್ನೂ ಓದಿ: Pralhad Joshi: ಪ್ರಲ್ಹಾದ್‌ ಜೋಶಿ ಬ್ರೆಜಿಲ್‌ ಪ್ರವಾಸ; ಉಭಯ ದೇಶಗಳ ಸಂಬಂಧ ವೃದ್ಧಿಗೆ ಆದ್ಯತೆ

Exit mobile version