ನವದೆಹಲಿ: ನಿರ್ಧಾರ ಮಾಡುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನತೆ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸಲು ರಾಷ್ಟ್ರೀಯ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲು ಅಗತ್ಯವಿರುವ ಕನಿಷ್ಠ ವಯಸ್ಸನ್ನು 25 ವರ್ಷದಿಂದ 18 ವರ್ಷಕ್ಕೆ ಇಳಿಸಲು ಸಂಸದೀಯ ಸಮಿತಿಯು (parliamentary panel) ಶಿಫಾರಸು ಮಾಡಿದೆ. ಆದರೆ, ಸಮಿತಿಯ ಈ ಶಿಫಾರಸಿಗೆ ಕೇಂದ್ರ ಚುನಾವಣಾ ಆಯೋಗವು (Election Commission of India) ಅಸಮ್ಮತಿ ವ್ಯಕ್ತಪಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಭಾರತೀಯ ಜನತಾ ಪಕ್ಷದ ನೇತೃತ್ವದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯದ ಇಲಾಖೆ ಸಂಬಂಧಿತ ಸ್ಥಾಯಿ ಸಮಿತಿಯು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದ “ಚುನಾವಣಾ ಪ್ರಕ್ರಿಯೆಯ ನಿರ್ದಿಷ್ಟ ಅಂಶಗಳು ಮತ್ತು ಅವುಗಳ ಸುಧಾರಣೆ” ಕುರಿತ 132 ನೇ ವರದಿಯಲ್ಲಿ ಈ ಶಿಫಾರಸು ಮಾಡಲಾಗಿದೆ. ಬಿಜೆಪಿಯ ನಾಯಕ ಸುಶೀಲ್ ಕುಮಾರ್ ಮೋದಿ ಅವರು ಈ ಸಮಿತಿಯ ಮುಖ್ಯಸ್ಥರಾಗಿದ್ದಾರೆ.
ಚುನಾವಣೆಗಳಲ್ಲಿ ಉಮೇದುವಾರಿಕೆಗೆ ಕನಿಷ್ಠ ವಯಸ್ಸಿನ ಅಗತ್ಯವನ್ನು ಕಡಿಮೆ ಮಾಡುವುದರಿಂದ ಯುವಕರಿಗೆ ಪ್ರಜಾಪ್ರಭುತ್ವದಲ್ಲಿ ತೊಡಗಿಸಿಕೊಳ್ಳಲು ಸಮಾನ ಅವಕಾಶಗಳನ್ನು ಕಲ್ಪಿಸಬಹುದು. ಈ ದೃಷ್ಟಿಕೋನವು ಜಾಗತಿಕ ದೃಷ್ಟಿಕೋನಕ್ಕೆ ಸಮನಾಗಿದೆ. ಯುವಜನರಲ್ಲಿ ಹೆಚ್ಚುತ್ತಿರುವ ರಾಜಕೀಯ ಪ್ರಜ್ಞೆ ಮತ್ತು ಯುವ ಪ್ರಾತಿನಿಧ್ಯದ ಅನುಕೂಲಗಳಂತಹ ಅಪಾರ ಪ್ರಮಾಣದ ಪುರಾವೆಗಳಿಂದ ಇದು ಸಾಬೀತಾಗಿದೆ. ಕೆನಡಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ವಿವಿಧ ದೇಶಗಳ ವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ, ರಾಷ್ಟ್ರೀಯ ಚುನಾವಣೆಗಳಲ್ಲಿ ಉಮೇದುವಾರಿಕೆಗೆ ಕನಿಷ್ಠ ವಯಸ್ಸು 18 ವರ್ಷಕ್ಕೆ ಇಳಿಸುವುದರ ಬಗ್ಗೆ ಸಮಿತಿಯ ಉತ್ಸುಕವಾಗಿದೆ. ಈ ರಾಷ್ಟ್ರಗಳ ಉದಾಹರಣೆಗಳು ಯುವ ವ್ಯಕ್ತಿಗಳು ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ರಾಜಕೀಯ ಭಾಗವಹಿಸುವವರಾಗಿರಬಹುದು ಎಂದು ತೋರಿಸುತ್ತವೆ ಎಂದು ಸಮಿತಿ ತನ್ನ ಶಿಫಾರಸಿನಲ್ಲಿ ಹೇಳಿದೆ.
ಸಂವಿಧಾನದ ಪ್ರಕಾರ, ಲೋಕಸಭೆ ಅಥವಾ ರಾಜ್ಯ ಸಭೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಯ ಕನಿಷ್ಠ ವಯಸ್ಸ 25 ಆಗಿರಬೇಕು. ಹಾಗೆಯೇ, ರಾಜ್ಯಸಭೆಗೆ ಸ್ಪರ್ಧಿಸಲು ಕನಿಷ್ಠ 30 ವರ್ಷ ಆಗಿರಬೇಕು.
ಸಮಿತಿಯ ಶಿಫಾರಸಿಗೆ ಕೇಂದ್ರ ಚುನಾವಣೆ ಆಯೋಗವು ಅಷ್ಟೇನೂ ಉತ್ಸಾಹ ಹೊಂದಿಲ್ಲ ಎಂದು ಹೇಳಲಾಗುತ್ತಿದೆ. 18 ವರ್ಷದ ವ್ಯಕ್ತಿಗಳು ಅಗತ್ಯ ಅನುಭವ ಹಾಗೂ ಪ್ರಬುದ್ದತೆಯನ್ನು ಹೊಂದಿರುತ್ತಾರೆಂದು ನಿರೀಕ್ಷಿಸುವುದು ಅವಾಸ್ತವಿಕ ಎಂಬ ನಿಲುವು ಚುನಾವಣಾ ಆಯೋಗವು ಹೊಂದಿದೆ ಎನ್ನಲಾಗಿದೆ.