ನವದೆಹಲಿ: ದೇಶದಲ್ಲಿ ಚುನಾವಣಾ ಬಾಂಡ್‌ಗಳ (Electoral Bonds) ಮೂಲಕ ರಾಜಕೀಯ ಪಕ್ಷಗಳು ಸಂಗ್ರಹಿಸಿರುವ ದೇಣಿಗೆ ಕುರಿತು ಎಸ್‌ಬಿಐ (SBI) ನೀಡಿರುವ ಮಾಹಿತಿಯು ಸಂಚಲನ ಮೂಡಿಸಿದೆ. ಅನಾಮಧೇಯವಾಗಿ ಸಂಗ್ರಹಿಸುವ ಹಣದ ಕುರಿತು ಮಾಹಿತಿ ಬಹಿರಂಗವಾಗುತ್ತಲೇ ರಾಜಕೀಯ ಪಕ್ಷಗಳ ಮಧ್ಯೆಯೇ ಆರೋಪ-ಪ್ರತ್ಯಾರೋಪಗಳು ವ್ಯಕ್ತವಾಗಿವೆ. ಸಾರ್ವಜನಿಕ ವಲಯದಲ್ಲೂ ಟೀಕೆಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಚುನಾವಣಾ ಬಾಂಡ್‌ಗಳ ಮೂಲಕ ಕೆಲ ರಾಜಕೀಯ ಪಕ್ಷಗಳು (Political Parties) ಒಂದು ರೂಪಾಯಿ ಕೂಡ ದೇಣಿಗೆ ಪಡೆದಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ.
ಯಾವ ಪಕ್ಷಗಳು ಪಡೆದಿಲ್ಲ?
ಉತ್ತರ ಪ್ರದೇಶದಲ್ಲಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವು (BSP) ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದಿಲ್ಲ ಎಂದು ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಿದೆ. ಅಷ್ಟೇ ಅಲ್ಲ, ಮೇಘಾಲಯದ ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ, ಸಿಪಿಐ, ಸಿಪಿಐ (ಎಂ), ಸಿಪಿಐ-ಎಂಎಲ್, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್, ಎಐಎಂಐಎಂ, ಡಿಎಂಡಿಕೆ, ತಮಿಳ್ ಮಾನಿಲಾ ಕಾಂಗ್ರೆಸ್, ಈಎಯುಡಿಎಫ್ ಪಕ್ಷಗಳು ಕೂಡ ತಮ್ಮ ಪಕ್ಷಗಳು ಎಲೆಕ್ಟೋರಲ್ ಬಾಂಡ್‌ಗಳ ಮೂಲಕ ದೇಣಿಗೆಯನ್ನು ಸ್ವೀಕರಿಸಿಲ್ಲ ಎಂದು ಮಾಹಿತಿ ನೀಡಿವೆ.
ಎಸ್‌ಬಿಐ ನೀಡಿದ ಅಂಕಿ-ಅಂಶಗಳ ಪ್ರಕಾರ, ಆಡಳಿತಾರೂಢ ಬಿಜೆಪಿಯು 2018ರಲ್ಲಿ ಬಾಂಡ್‌ಗಳನ್ನು ಪರಿಚಯಿಸಿದಾಗಿನಿಂದ ಒಟ್ಟಾರೆಯಾಗಿ 6,986.5 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಸ್ವೀಕರಿಸಿದೆ. ತೃಣಮೂಲ ಕಾಂಗ್ರೆಸ್ ಎರಡನೇ ಅತಿ ದೊಡ್ಡ ಸ್ವೀಕೃತದಾರ- ರೂ. 1,397 ಕೋಟಿ. ನಂತರ ಕಾಂಗ್ರೆಸ್- ರೂ. 1,334 ಕೋಟಿ. ಬಿಆರ್‌ಎಸ್- 1,322 ಕೋಟಿ ರೂ. ಮತ್ತು ಒಡಿಶಾದ ಆಡಳಿತ ಪಕ್ಷ ಬಿಜೆಡಿ ₹944.5 ಕೋಟಿ. ಡಿಎಂಕೆ ದೇಣಿಗೆ ಪಡೆದವರಲ್ಲಿ ಆರನೇ ಅತಿ ದೊಡ್ಡ ಪಕ್ಷವಾಗಿದೆ.
ಇದನ್ನೂ ಓದಿ: Electoral Bonds: ಚುನಾವಣಾ ಬಾಂಡ್‌ಗಳ ಕುರಿತು ಹೆಚ್ಚಿನ ಮಾಹಿತಿ ಬಹಿರಂಗ; ಇದರಲ್ಲಿ ಏನಿದೆ?
ಚುನಾವಣಾ ಬಾಂಡ್‌ಗಳ ಯುನಿಕ್ ನಂಬರ್ ಸೇರಿ ಎಲ್ಲ ಮಾಹಿತಿಯನ್ನೂ ಎಸ್‌ಬಿಐ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ (ಮಾರ್ಚ್ 18) ಆದೇಶಿಸಿದೆ. “ಮಾರ್ಚ್ 21ರ ಸಂಜೆ 5 ಗಂಟೆಯೊಳಗೆ ಎಲ್ಲ ಮಾಹಿತಿ ಇರುವ ಅಫಿಡವಿಟ್‌ಅನ್ನು ಎಸ್‌ಬಿಐ ಸಲ್ಲಿಸಬೇಕು. ಎಸ್‌ಬಿಐ ಕೆಲ ಆಯ್ದ ಮಾಹಿತಿಯನ್ನು ಮಾತ್ರ ನೀಡಿದೆ. ಆದರೆ, ಚುನಾವಣಾ ಬಾಂಡ್‌ಗಳ ಕುರಿತು ಎಲ್ಲ ಮಾಹಿತಿಯನ್ನು ಒದಗಿಸಬೇಕು. ಮುಂದಿನ ಮೂರು ದಿನಗಳಲ್ಲಿ ನೀಡಲೇಬೇಕು” ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ