Site icon Vistara News

IndiGo Flight: ಡ್ರಗ್ಸ್‌ ನಶೆಯಲ್ಲಿ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ ವ್ಯಕ್ತಿ; ಬಂಧನ

Indigo Passenger

Passenger aboard IndiGo flight tries to open emergency exit door mid air, arrested

ನವದೆಹಲಿ: ಇತ್ತೀಚೆಗೆ ವಿಮಾನಗಳಲ್ಲಿ ಅನುಚಿತವಾಗಿ ವರ್ತಿಸುತ್ತಿರುವ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗುತ್ತಿದೆ. ಸಹ ಪ್ರಯಾಣಿಕರ ಮೇಲೆ ಹಲ್ಲೆ, ಅವರಿಗೆ ತೊಂದರೆ ಕೊಡುವುದು, ವಿಮಾನದ ಸಿಬ್ಬಂದಿ ಜತೆ ದುರ್ವರ್ತನೆ ತೋರುವುದು ಸೇರಿ ಹಲವು ರೀತಿಯ ಪ್ರಕರಣಗಳು ಸುದ್ದಿಯಾಗುತ್ತಿವೆ. ಇದರ ಬೆನ್ನಲ್ಲೇ, ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ವಿಮಾನದ ತುರ್ತು ನಿರ್ಗಮನ ದ್ವಾರ (Emergency Exit Door) ತೆರೆಯಲು ಯತ್ನಿಸಿದ್ದಾನೆ. ಮಾದಕವಸ್ತು ವ್ಯಸನಿಯಾಗಿರುವ ಈತ ನಶೆಯಲ್ಲಿ ಹೀಗೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಆದಾಗ್ಯೂ, ಈತನನ್ನು ಬಂಧಿಸಲಾಗಿದೆ.

ಗುವಾಹಟಿಯಿಂದ ಅಗರ್ತಲಕ್ಕೆ ತೆರಳುತ್ತಿದ್ದ 6ಇ-457 ವಿಮಾನದಲ್ಲಿ ವಿಶ್ವಜಿತ್‌ ದೇವನಾಥ್‌ ಎಂಬ ವ್ಯಕ್ತಿಯು ಏಕಾಏಕಿ ಎದ್ದು ಎಮರ್ಜನ್ಸಿ ಎಕ್ಸಿಟ್‌ ಡೋರ್‌ ತೆಗೆಯಲು ಯತ್ನಿಸಿದ್ದಾನೆ. ಇದನ್ನು ಕಂಡ ಪ್ರಯಾಣಿಕರೊಬ್ಬರು ಆತನನ್ನು ತಡೆಯಲು ಯತ್ನಿಸಿದ್ದಾರೆ. ಇಷ್ಟಾದರೂ ವಿಶ್ವಜಿತ್‌ ದೇವನಾಥ್‌, ತುರ್ತು ನಿರ್ಗಮನ ದ್ವಾರ ತೆರೆಯಲು ಪ್ರಯತ್ನ ಮುಂದುವರಿಸಿದ್ದಾನೆ. ಕೂಡಲೇ ವಿಮಾನದ ಸಿಬ್ಬಂದಿ ಹಾಗೂ ಹಲವು ಪ್ರಯಾಣಿಕರು ಆತನನ್ನು ತಡೆದಿದ್ದಾರೆ.

ಸುಮಾರು 180 ಪ್ರಯಾಣಿಕರಿದ್ದ ವಿಮಾನದಲ್ಲಿ ಏಕಾಏಕಿ ವ್ಯಕ್ತಿಯು ತುರ್ತು ನಿರ್ಗಮನ ದ್ವಾರ ತೆಗೆಯಲು ಯತ್ನಿಸಿದ ಘಟನೆ ನಡೆದ ಕಾರಣ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಮಾನವು ಅಗರ್ತಲ ತಲುಪುತ್ತಲೇ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಅಧಿಕಾರಿಗಳು ವ್ಯಕ್ತಿಯನ್ನು ಬಂಧಿಸಿದ್ದಾರೆ. “ವಿಮಾನದಲ್ಲಿ ಅನುಚಿತವಾಗಿ ವರ್ತಿಸಿದ ಆರೋಪಿಯನ್ನು ನಿಯಮಗಳ ಪ್ರಕಾರ ಸಿಐಎಸ್‌ಎಫ್‌ ಸಿಬ್ಬಂದಿಗೆ ನೀಡಲಾಗಿದೆ” ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: IndiGo Flights: ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನ ಸೇರಿ ಇಂಡಿಗೋದ 2 ವಿಮಾನಗಳ ಎಂಜಿನ್‌ ದೋಷ, ಪ್ರಯಾಣಿಕರಿಗೆ ಆತಂಕ

ವಿಮಾನದಲ್ಲಿ ಸಿಬ್ಬಂದಿ ಜತೆ ಪ್ರಯಾಣಿಕರು ಅನುಚಿತವಾಗಿ ವರ್ತಿಸುವ, ಜಗಳವಾಡುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಕೆಲ ತಿಂಗಳ ಹಿಂದಷ್ಟೇ, ಲಂಡನ್‌ನಿಂದ ಮುಂಬೈ ಏರ್ ಇಂಡಿಯಾ ವಿಮಾನದ ಪ್ರಯಾಣಿಕರೊಬ್ಬರು ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದರು. ಅವರ ಈ ಅಶಿಸ್ತಿನ ವರ್ತನೆಗಾಗಿ ಪ್ರಕರಣ ದಾಖಲಾಗಿತ್ತು. ಇನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಪ್ರಕರಣದಲ್ಲಿ ನಿಯಮಗಳನ್ನು ಅನುಸರಿಸಲು ವಿಫಲವಾದ ಕಾರಣ ಏರ್ ಇಂಡಿಯಾಗೆ ಸಂಸ್ಥೆಗೆ 30 ಲಕ್ಷ ರೂ. ದಂಡ ವಿಧಿಸಲಾಯಿತು. ಕಳೆದ ವರ್ಷದ ನವೆಂಬರ್ 26 ರಂದು ನ್ಯೂಯಾರ್ಕ್-ದಿಲ್ಲಿ ವಿಮಾನದಲ್ಲಿ ಶಂಕರ್ ಮಿಶ್ರಾ ಎಂಬ ಪ್ರಯಾಣಿಕರು ಕುಡಿದ ಅಮಲಿನಲ್ಲಿ ವಯಸ್ಸಾದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು. ಈ ಪ್ರಕರಣ ಭಾರೀ ಸುದ್ದಿ ಮಾಡಿತ್ತು.

Exit mobile version