ಹೈದರಾಬಾದ್: ಹಾರುತ್ತಿರುವ ವಿಮಾನದಲ್ಲಿಯೇ ಸಿಬ್ಬಂದಿ ಹಾಗೂ ಪ್ರಯಾಣಿಕರ ಜತೆ ಅನುಚಿತ ವರ್ತನೆ ತೋರುವುದು, ಸಹ ಪ್ರಯಾಣಿಕರಿಗೆ ತೊಂದರೆ ಕೊಡುವ ಸರಣಿ ಮುಂದುವರಿದಿದೆ. ಹೈದರಾಬಾದ್‌ನಿಂದ ಬಿಹಾರದ ಪಟನಾಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ (IndiGo Flight) ಪ್ರಯಾಣಿಕನೊಬ್ಬ ಅನುಚಿತವಾಗಿ (Misbehaviour) ವರ್ತಿಸಿದ್ದಾನೆ. ಪಟನಾ ವಿಮಾನ ನಿಲ್ದಾಣ ತಲುಪುತ್ತಲೇ ವ್ಯಕ್ತಿಯನ್ನು ಬಂಧಿಸಲಾಗಿದೆ.
“ವಿಮಾನ ಹಾರುತ್ತಿರುವಾಗಲೇ ಏಕಾಏಕಿ ಎದ್ದ ವ್ಯಕ್ತಿಯು ಸಿಬ್ಬಂದಿ ಹಾಗೂ ಪ್ರಯಾಣಿಕರ ಜತೆ ಅನುಚಿತವಾಗಿ ವರ್ತಿಸಿದ್ದಾರೆ. ಎಷ್ಟು ಸಂಭಾಳಿಸಿದರೂ ಕೇಳದೆ ಶೌಚಾಲಯಕ್ಕೆ ತೆರಳಿ ಲಾಕ್ ಮಾಡಿಕೊಂಡಿದ್ದಾರೆ. ಎಷ್ಟು ಬಾಗಿಲು ಬಡಿದರೂ ಹೊರಗೆ ಬಂದಿಲ್ಲ. ಪಟನಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ ಅವರನ್ನು ಸಿಐಎಸ್‌ಎಫ್ ಸಿಬ್ಬಂದಿ ವಶಕ್ಕೆ ನೀಡಲಾಗಿದೆ” ಎಂದು ವಿಮಾನದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಪ್ರಯಾಣಿಕ ಮಾನಸಿಕ ಅಸ್ವಸ್ಥ
ವಿಮಾನದಲ್ಲಿ ದುರ್ವರ್ತನೆ ತೋರಿದ ವ್ಯಕ್ತಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ವಿಮಾನದ ಸಿಬ್ಬಂದಿಯು ಪ್ರಯಾಣಿಕನ ದಾಖಲೆಗಳನ್ನು ಪರಿಶೀಲಿಸಿದಾಗ, ವ್ಯಕ್ತಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಜತೆ ಸಂಬಂಧಿಕರೊಬ್ಬರು ಪ್ರಯಾಣಿಸುತ್ತಿದ್ದು, ಅವರು ಕೂಡ ವ್ಯಕ್ತಿಯ ಮಾನಸಿಕ ಸ್ಥಿತಿ ಬಗ್ಗೆ ಸಿಬ್ಬಂದಿಗೆ ಮನವರಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Air India: ವಿಮಾನದಲ್ಲಿ ಕಾಲು ಮೇಲೆ ಬಿಸಿ ನೀರು ಚೆಲ್ಲಿದರು! ಸಹಾಯ ಮಾಡದೇ ಸುಮ್ಮನಿದ್ದ ಸಿಬ್ಬಂದಿ
ವಿಮಾನದಲ್ಲಿ ಸಿಬ್ಬಂದಿ ಜತೆ ಪ್ರಯಾಣಿಕರು ಅನುಚಿತವಾಗಿ ವರ್ತಿಸುವ, ಜಗಳವಾಡುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಕೆಲ ತಿಂಗಳ ಹಿಂದಷ್ಟೇ, ಲಂಡನ್‌ನಿಂದ ಮುಂಬೈ ಏರ್ ಇಂಡಿಯಾ ವಿಮಾನದ ಪ್ರಯಾಣಿಕರೊಬ್ಬರು ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದರು. ಅವರ ಈ ಅಶಿಸ್ತಿನ ವರ್ತನೆಗಾಗಿ ಪ್ರಕರಣ ದಾಖಲಾಗಿತ್ತು. ಇನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಪ್ರಕರಣದಲ್ಲಿ ನಿಯಮಗಳನ್ನು ಅನುಸರಿಸಲು ವಿಫಲವಾದ ಕಾರಣ ಏರ್ ಇಂಡಿಯಾಗೆ ಸಂಸ್ಥೆಗೆ 30 ಲಕ್ಷ ರೂ. ದಂಡ ವಿಧಿಸಲಾಯಿತು. ನವೆಂಬರ್ 26 ರಂದು ನ್ಯೂಯಾರ್ಕ್-ದಿಲ್ಲಿ ವಿಮಾನದಲ್ಲಿ ಶಂಕರ್ ಮಿಶ್ರಾ ಎಂಬ ಪ್ರಯಾಣಿಕರು ಕುಡಿದ ಅಮಲಿನಲ್ಲಿ ವಯಸ್ಸಾದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು. ಈ ಪ್ರಕರಣ ಭಾರೀ ಸುದ್ದಿ ಮಾಡಿತ್ತು.