Site icon Vistara News

Patalkot Train: ರೈಲಿನಲ್ಲಿ ಬೆಂಕಿ; ಮಾಜಿ ಯೋಧ ನೂರಾರು ಜನರ ಪ್ರಾಣ ಉಳಿಸಿದ್ದು ಹೇಗೆ?

Patalkot Train Fire Incident

Patalkot Train Fire Accident: How gateman, an ex-Army officer, detected smoke and saved lives

ಲಖನೌ: ಪಂಜಾಬ್‌ನ ಫೀರೋಜ್‌ಪುರದಿಂದ ಮಧ್ಯಪ್ರದೇಶದ ಸಿಯೋನಿಗೆ ತೆರಳುತ್ತಿದ್ದ ಪಾತಾಳ್‌ಕೋಟ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ (Patalkot Train) ಬುಧವಾರ (ಅಕ್ಟೋಬರ್‌ 26) ಅಗ್ನಿ ದುರಂತ (Fire Accident) ಸಂಭವಿಸಿದೆ. ರೈಲಿನ ಎರಡು ಬೋಗಿಗಳು ಸುಟ್ಟು ಕರಕಲಾಗಿದ್ದು, ಸುಮಾರು 11 ಜನ ಗಾಯಗೊಂಡಿದ್ದಾರೆ. ಆದರೆ, ಏಕಾಏಕಿ ಅಗ್ನಿ ದುರಂತ ಸಂಭವಿಸಿದಾಗ ಮಾಜಿ ಸೇನಾಧಿಕಾರಿ, ಗೇಟ್‌ಮ್ಯಾನ್‌ ಯಶಪಾಲ್‌ ಸಿಂಗ್‌ (Yashpal Singh) ಅವರು ಸಮಯಪ್ರಜ್ಞೆ ಮೆರೆದ ಕಾರಣ ನೂರಾರು ಜನರ ಪ್ರಾಣ ಉಳಿದಿದೆ.

ಹೌದು, ಪಾತಾಳ್‌ಕೋಟ್‌ ಎಕ್ಸ್‌ಪ್ರೆಸ್‌ ರೈಲು ಬುಧವಾರ ಮಧ್ಯಾಹ್ನ 3.35ರ ಸುಮಾರಿಗೆ ಭಂಡಾಯಿ ರೈಲು ನಿಲ್ದಾಣ ದಾಟಿ ತೆರಳುತ್ತಿತ್ತು. ಇನ್ನೇನು 10 ನಿಮಿಷದಲ್ಲಿ ಆಗ್ರಾ ರೈಲು ನಿಲ್ದಾಣ ತಲುಪುವುದಿತ್ತು. ಇದೇ ವೇಳೆ ಬೋಗಿಯೊಂದರಲ್ಲಿ ಬೆಂಕಿ ಕಾಣಿಸಿದೆ. ಕೂಡಲೇ ಅಗ್ನಿ ದುರಂತದ ಅಪಾಯ ಅರಿತ ಯಶಪಾಲ್‌ ಸಿಂಗ್‌ ಅವರು ತೆಗೆದುಕೊಂಡ ನಿರ್ಧಾರಗಳು ಈಗ ಮೆಚ್ಚುಗೆಗೆ ಪಾತ್ರವಾಗಿವೆ.

ಹೊತ್ತಿ ಉರಿದ ರೈಲಿನ ಬೋಗಿಗಳು

ರೈಲಿನ ಬೋಗಿಯಲ್ಲಿ ಹೊಗೆ ಕಾಣಿಸಿಕೊಳ್ಳುತ್ತಲೇ ಅಪಾಯದ ತೀವ್ರತೆ ಅರಿತ ಯಶಪಾಲ್‌ ಸಿಂಗ್‌ ಅವರು ಭಂಡಾಯಿ ರೈಲು ನಿಲ್ದಾಣದ ಡೆಪ್ಯುಟಿ ಸ್ಟೇಷನ್‌ ಸೂಪರಿಂಟೆಂಡೆಂಟ್‌ ಆಗಿರುವ ಹರಿದಾಸ್‌ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹರಿದಾಸ್‌ ಅವರು ಕಂಟ್ರೋಲ್‌ ರೂಮ್‌ಗೆ ಮಾಹಿತಿ ತಿಳಿಸಿದ್ದಾರೆ. ಇದಾದ ಬಳಿಕ ಕಂಟ್ರೋಲ್‌ ರೂಮ್‌ ಸಿಬ್ಬಂದಿಯು ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಎಲ್ಲ ರೈಲುಗಳಿಗೆ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಿದ್ದಾರೆ.

ಇದನ್ನೂ ಓದಿ: Fire in Train: ಕೇರಳದ ರೈಲಿನಲ್ಲಿ ಬೆಂಕಿ ಹಚ್ಚಿದ ದುಷ್ಕರ್ಮಿಯ ಗುರುತು ಪತ್ತೆ, ಎನ್‌ಐಎ ಭೇಟಿ

ಸುಮಾರು 3.37ರ ವೇಳೆಗೆ ರೈಲು ನಿಂತಿದೆ. ಇದಾದ 10 ನಿಮಿಷದಲ್ಲಿಯೇ ಆಂಬುಲೆನ್ಸ್‌, ಅಗ್ನಿಶಾಮಕ ಸಿಬ್ಬಂದಿಯು ರೈಲು ನಿಂತ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಇಷ್ಟಾದರೂ ಎರಡು ಬೋಗಿಗಳು ಸುಟ್ಟಿದ್ದು, 11 ಮಂದಿಗೆ ಗಾಯಗಳಾಗಿವೆ. ಹಾಗೊಂದು ವೇಳೆ ಯಶಪಾಲ್‌ ಸಿಂಗ್‌ ಅವರು ಸಮಯಪ್ರಜ್ಞೆ ಮೆರೆದಿರದಿದ್ದರೆ ನೂರಾರು ಜನರ ಪ್ರಾಣಕ್ಕೇ ಕುತ್ತು ಬರುತ್ತಿತ್ತು ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೇ ತಿಳಿಸಿದ್ದಾರೆ. ಹಾಗೆಯೇ, 2021ರಿಂದಲೂ ಭಂಡಾಯಿ ರೈಲು ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಶಪಾಲ್‌ ಸಿಂಗ್‌ ಅವರ ಸಮಯಪ್ರಜ್ಞೆಯನ್ನು ಕೊಂಡಾಡಿದ್ದಾರೆ.

Exit mobile version