Site icon Vistara News

Patanjali Advertising Case: ವಿಚಾರಣೆಗೆ ಖುದ್ದು ಹಾಜರಾಗುವಂತೆ ಬಾಬಾ ರಾಮ್‌ದೇವ್‌ಗೆ ಸೂಚಿಸಿದ ಸುಪ್ರೀಂ ಕೋರ್ಟ್‌

baba ramdev

Patanjali tenders unconditional apology for ad after Supreme Court issues notice

ನವದೆಹಲಿ: ಪತಂಜಲಿ ಜಾಹೀರಾತು ಕೇಸ್‌ (Patanjali Advertising Case)ನಲ್ಲಿ ಯೋಗಪಟು ಬಾಬಾ ರಾಮ್‌ ದೇವ್‌ (Ramdev) ಅವರಿಗೆ ಹಿನ್ನಡೆಯಾಗಿದೆ. ಪತಂಜಲಿ ಉತ್ಪನ್ನಗಳನ್ನು ಉಪಯೋಗಿಸುವುದರಿಂದ ಆರೋಗ್ಯ ಲಾಭಗಳಿಗೆ ಎಂಬ ಜಾಹೀರಾತಿನ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ (Supreme Court) ಮಂಗಳವಾರ (ಮಾರ್ಚ್‌ 19) ಬಾಬಾ ರಾಮ್‌ ದೇವ್‌ ಮತ್ತು ಪತಂಜಲಿ ಆಯುರ್ವೇದ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ (Acharya Balkrishna) ಅವರಿಗೆ ಸಮನ್ಸ್‌ ಜಾರಿ ಮಾಡಿ ಖುದ್ದು ಹಾಜರಾಗುವಂತೆ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ನ್ಯಾಯಪೀಠವು, ಈಗಾಗಲೇ ನ್ಯಾಯಾಲಯ ನೀಡಿರುವ ನೋಟಿಸ್‌ಗೆ ಇಬ್ಬರೂ ಉತ್ತರಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ರಾಮದೇವ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಏಕೆ ಪ್ರಾರಂಭಿಸಬಾರದು ಎಂಬುದಕ್ಕೆ ಕಾರಣ ನೀಡುವಂತೆಯೂ ನ್ಯಾಯಪೀಠ ನೋಟಿಸ್‌ನಲ್ಲಿ ಸೂಚಿಸಿದೆ.

ವ್ಯಾಕ್ಸಿನೇಷನ್ ಡ್ರೈವ್ ಮತ್ತು ಆಧುನಿಕ ಔಷಧಗಳ ವಿರುದ್ಧ ರಾಮ್‌ದೇವ್‌ ಅವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (Indian Medical Association) ಮನವಿ ಸಲ್ಲಿಸಿತ್ತು. ಅಲ್ಲದೆ ಪತಂಜಲಿಯ ದಾರಿ ತಪ್ಪಿಸುವ ಜಾಹೀರಾತುಗಳನ್ನು ನಿರ್ಬಂಧಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ಜತೆಗೆ ಪತಂಜಲಿಯು ಅಲೋಪಥಿಕ್ ಔಷಧಗಳ ವಿರುದ್ಧವೂ ಮಾಡುತ್ತಿರುವ ಅಪ್ರಚಾರವನ್ನು ವೈದ್ಯರ ಸಂಘವು ಪ್ರಶ್ನಿಸಿತ್ತು. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಂಡು ವಿಚಾರಣೆ ನಡೆಸಿದೆ.

ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಪತಂಜಲಿಯ ಸಹ ಮಾಲೀಕರು. ಬಾಲಕೃಷ್ಣ ಅವರು ಕಂಪನಿಯ ಸಿಇಒ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಫೆಬ್ರವರಿ 27ರಂದು ಸುಪ್ರೀಂ ಕೋರ್ಟ್ ಪತಂಜಲಿ ಆಯುರ್ವೇದದ ಔಷಧಿಗಳ ಜಾಹೀರಾತುಗಳಿಗೆ ಮಧ್ಯಂತರ ನಿಷೇಧ ಹೇರಿತ್ತು. ಡ್ರಗ್ಸ್ ಮತ್ತು ಮ್ಯಾಜಿಕ್ ಪರಿಹಾರಗಳ (Objectionable Advertisements) ಕಾಯ್ದೆ ಅಡಿಯಲ್ಲಿ, ನಿರ್ದಿಷ್ಟಪಡಿಸಿದ ಕಾಯಿಲೆಗಳಿಗೆ ತಮ್ಮ ಔಷಧಿಗಳು ಚಿಕಿತ್ಸೆ ನೀಡುತ್ತವೆ ಎಂದು ಕಂಪನಿಯು ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಹಿಂದಿನ ವಿಚಾರಣೆಯ ಸಮಯದಲ್ಲಿ ಈ ವಿಷಯದ ಬಗ್ಗೆ ʼಕಣ್ಣು ಮುಚ್ಚಿ ಕುಳಿತಿದ್ದಕ್ಕಾಗಿʼ ನ್ಯಾಯಾಲಯವು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

ಖಾರವಾಗಿ ಪ್ರತಿಕ್ರಿಯಿಸಿದ್ದ ರಾಮ್‌ದೇವ್‌

ಆಧುನಿಕ ಔಷಧಗಳ ವಿರುದ್ಧ ತಪ್ಪು ದಾರಿಗೆಳೆಯುವ ಜಾಹೀರಾತುಗಳು ಮತ್ತು ಟೀಕೆಗಳ ಕುರಿತು ಸುಪ್ರೀಂ ಕೋರ್ಟ್‌ನ ವಾಗ್ದಂಡನೆಗೆ ಕಳೆದ ವರ್ಷ ನವೆಂಬರ್‌ನಲ್ಲಿ ಪ್ರತಿಕ್ರಿಯಿಸಿದ್ದ ರಾಮ್‌ದೇವ್, ವೈದ್ಯರ ಗುಂಪೊಂದು ಭಾರತದ ಯೋಗ, ಆಯುರ್ವೇದದ ವಿರುದ್ಧ “ಅಪ್ರಚಾರ” ನಡೆಸುತ್ತಿದೆ ಎಂದು ಆರೋಪಿಸಿದ್ದರು. ಜತೆಗ ತಮ್ಮ ಕಂಪನಿ ಪತಂಜಲಿ ಆಯುರ್ವೇದದ ಬಗ್ಗೆ ಸುಳ್ಳುಗಳನ್ನು ಹರಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: Baba Ramdev | ಉತ್ತರಾಖಂಡದಲ್ಲಿ ಪತಂಜಲಿಯ 5 ಔಷಧಗಳ ಮೇಲಿನ ನಿಷೇಧ ಹಿಂಪಡೆದ ಸರ್ಕಾರ

ʼʼಕೆಲವು ವೈದ್ಯರು ಗುಂಪು ರಚಿಸಿಕೊಂಡಿದ್ದಾರೆ ಮತ್ತು ನಿರಂತರವಾಗಿ ಯೋಗ, ಆರ್ಯುವೇದ ಇತ್ಯಾದಿ ಭಾರತೀಯ ವೈದ್ಯ ಪದ್ಧತಿಗಳ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ. ಒಂದು ನಾವು ಸುಳ್ಳು ಹೇಳಿದ್ದರೆ 1,000 ಕೋಟಿ ರೂಪಾಯಿ ದಂಡ ವಿಧಿಸಿ. ಅಷ್ಟೇ ಅಲ್ಲ ನಾವು ನೇಣಿಗೇರಲೂ ಕೂಡ ಸಿದ್ಧ. ಆದರೆ ಒಂದು ವೇಳೆ ನಾವು ಹೇಳುವುದು ಸುಳ್ಳು ಅಲ್ಲ ಅನ್ನುವುದಾದರೆ, ನಿಜವಾಗಿಯೂ ಅಪಪ್ರಚಾರ ಮಾಡುತ್ತಿರುವವರನ್ನು ಶಿಕ್ಷೆಗೊಳಪಡಿಸಿ. ಕಳೆದ ಐದು ವರ್ಷಗಳಿಂದ ರಾಮದೇವ್ ಮತ್ತು ಪತಂಜಲಿಯನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ಮಾಡಲಾಗುತ್ತಿದೆʼʼ ಎಂದು ಕಿಡಿ ಕಾರಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version