Site icon Vistara News

Patanjali Case: ಪತಂಜಲಿ ಕೇಸ್‌; ಜಾಹೀರಾತು ಮೂಲಕ ಕ್ಷಮೆ ಕೋರಿದ ಬಾಬಾ ರಾಮ್‌ದೇವ್‌

Patanjali

Uttarakhand suspends licenses of 14 Patanjali products; criminal complaint filed against Baba Ramdev

ನವದೆಹಲಿ: ತಪ್ಪುದಾರಿಗೆಳೆಯುವ ಜಾಹೀರಾತು (Advertisements) ಪ್ರಕರಣದಲ್ಲಿ ಪತಂಜಲಿ ಆಯುರ್ವೇದ (Patanjali Ayurved) ಸಂಸ್ಥೆ ಹಾಗೂ ಅದರ ಸಂಸ್ಥಾಪಕರಾದ ಬಾಬಾ ರಾಮ್‌ದೇವ್‌ (Baba Ramdev) ಅವರಿಗೆ ಸುಪ್ರೀಂ ಕೋರ್ಟ್‌ (Supreme Court) ಚಾಟಿ ಬೀಸಿದೆ. ಕ್ಷಮೆಯಾಚನೆಯ ಜಾಹೀರಾತು ಪ್ರಕಟಿಸಬೇಕು ಎಂದು ಸೂಚಿಸಿದೆ. ಅದರಂತೆ ಯೋಗ ಗುರು ಬಾಬಾ ರಾಮ್‌ದೇವ್‌ ಮತ್ತು ಅವರ ಸಹಾಯಕ ಬಾಲಕೃಷ್ಣ ಇಂದು (ಏಪ್ರಿಲ್‌ 24) ಪತ್ರಿಕೆಗಳಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸುವ ಜಾಹೀರಾತು ಪ್ರಕಟಿಸಿದ್ದಾರೆ. ಪತಂಜಲಿ ನಿನ್ನೆ ಕೂಡ ಕ್ಷಮೆಯಾಚಿಸಿ ಜಾಹೀರಾತು ನೀಡಿತ್ತು. ಆದರೆ ಅದರ ಗಾತ್ರವು ಅದರ ಔಷಧಗಳ ದಾರಿತಪ್ಪಿಸುವ ಜಾಹೀರಾತುಗಳಷ್ಟು ದೊಡ್ಡದಾಗಿದೆಯೇ ಎಂದು ನ್ಯಾಯಾಲಯ ಕೇಳಿತ್ತು.

ಇಂದು ಬೆಳಿಗ್ಗೆ ಪ್ರಕಟವಾದ ಜಾಹೀರಾತು ಪತ್ರಿಕೆಯ ಪುಟದ ನಾಲ್ಕನೇ ಒಂದು ಭಾಗವನ್ನು ಒಳಗೊಂಡಿದೆ ಮತ್ತು ʼಬೇಷರತ್ತಾದ ಸಾರ್ವಜನಿಕ ಕ್ಷಮೆಯಾಚನೆʼ ಎಂಬ ಶೀರ್ಷಿಕೆಯನ್ನು ಹೊಂದಿದೆ. ಭಾರತದ ಸುಪ್ರೀಂ ಕೋರ್ಟ್‌ ನಿರ್ದೇಶನಗಳು / ಆದೇಶಗಳ ಅನುಸರಣೆ ಅಥವಾ ಅವಿಧೇಯತೆಗಾಗಿ ಬೇಷರತ್ತಾಗಿ ಕ್ಷಮೆಯಾಚಿಸುವುದಾಗಿ ರಾಮ್‌ದೇವ್‌ ಮತ್ತು ಬಾಲಕೃಷ್ಣ ಅವರು ವೈಯಕ್ತಿಕವಾಗಿ ಮತ್ತು ಪತಂಜಲಿ ಆಯುರ್ವೇದ ಸಂಸ್ಥೆ ಪರವಾಗಿ ಹೇಳಿಕೆ ನೀಡಿದ್ದಾರೆ.

ಅಲ್ಲದೆ ʼʼ2023ರ ನವೆಂಬರ್‌ 22ರಂದು ನಡೆಸಿದ ಸಭೆ / ಪತ್ರಿಕಾಗೋಷ್ಠಿಗಾಗಿ ನಾವು ಬೇಷರತ್ತಾಗಿ ಕ್ಷಮೆಯಾಚಿಸುತ್ತೇವೆ. ನಮ್ಮ ಜಾಹೀರಾತುಗಳನ್ನು ಪ್ರಕಟಿಸುವಲ್ಲಿ ಮಾಡಿದ ತಪ್ಪಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಮತ್ತು ಅಂತಹ ತಪ್ಪುಗಳು ಪುನರಾವರ್ತನೆಯಾಗುವುದಿಲ್ಲʼʼ ಎಂದೂ ಅವರು ಜಾಹೀರಾತಿನಲ್ಲಿ ತಿಳಿಸಿದ್ದಾರೆ. ʼʼಗೌರವಾನ್ವಿತ ನ್ಯಾಯಾಲಯದ ನಿರ್ದೇಶನಗಳು ಮತ್ತು ಸೂಚನೆಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಪಾಲಿಸಲು ನಾವು ಬದ್ಧರಾಗಿದ್ದೇವೆ. ನ್ಯಾಯಾಲಯದ ಘನತೆಯನ್ನು ಎತ್ತಿಹಿಡಿಯಲು ಮತ್ತು ನ್ಯಾಯಾಲಯ / ಸಂಬಂಧಿತ ಪ್ರಾಧಿಕಾರಗಳ ಅನ್ವಯವಾಗುವ ಕಾನೂನುಗಳು ಮತ್ತು ನಿರ್ದೇಶನಗಳನ್ನು ಅನುಸರಿಸುತ್ತೇವೆʼʼ ಎಂದೂ ಹೇಳಿದ್ದಾರೆ.

ನಿನ್ನೆ ಪ್ರಕಟವಾದ ಜಾಹೀರಾತಿನಲ್ಲಿ ರಾಮ್‌ದೇವ್‌ ಮತ್ತು ಬಾಲಕೃಷ್ಣ ಅವರ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿರಲಿಲ್ಲ. ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಎ. ಅಮಾನುಲ್ಲಾ ಅವರನ್ನೊಳಗೊಂಡ ನ್ಯಾಯಪೀಠವು ಕ್ಷಮೆಯಾಚನೆಯನ್ನು ಪ್ರಮುಖವಾಗಿ ಪ್ರಕಟಿಸಲಾಗಿದೆಯೇ ಎಂದು ಕೇಳಿತ್ತು. “ಕ್ಷಮೆಯಾಚನೆಯನ್ನು ಪ್ರಮುಖವಾಗಿ ಪ್ರಕಟಿಸಲಾಗಿದೆಯೇ? ನಿಮ್ಮ ಹಿಂದಿನ ಜಾಹೀರಾತುಗಳ ಗಾತ್ರದಲ್ಲಿದಲ್ಲಿದೆಯೇ?” ಎಂದು ನ್ಯಾಯಮೂರ್ತಿ ಕೊಹ್ಲಿ ಪ್ರಶ್ನಿಸಿದ್ದರು.

ರಾಮದೇವ್ ಮತ್ತು ಬಾಲಕೃಷ್ಣ ಅವರ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, 10 ಲಕ್ಷ ರೂ.ಗಳ ವೆಚ್ಚದಲ್ಲಿ 67 ಪತ್ರಿಕೆಗಳಲ್ಲಿ ಕ್ಷಮೆಯಾಚನೆಯನ್ನು ಪ್ರಕಟಿಸಲಾಗಿದೆ ಎಂದು ತಿಳಿಸಿದ್ದರು. ಇದರಿಂದ ಸಮಾಧಾನಗೊಳ್ಳದ ನ್ಯಾಯಮೂರ್ತಿ ಕೊಹ್ಲಿ ಅವರು, “ದಯವಿಟ್ಟು ಪ್ರಕಟವಾದ ಜಾಹೀರಾತುಗಳನ್ನು ತೋರಿಸಿ. ನಾವು ನಿಜವಾದ ಗಾತ್ರವನ್ನು ನೋಡಲು ಬಯಸುತ್ತೇವೆ. ನೀವು ಜಾಹೀರಾತನ್ನು ನೀಡಿದಾಗ ನಾವು ಅದನ್ನು ಸೂಕ್ಷ್ಮದರ್ಶಕದಿಂದ ನೋಡಬೇಕೆ?ʼʼ ಎಂದು ಕೇಳಿದ್ದರು. ಈ ವಿಷಯದ ಮುಂದಿನ ವಿಚಾರಣೆ ಏಪ್ರಿಲ್ 30ರಂದು ಮತ್ತೆ ನಡೆಯಲಿದ್ದು, ರಾಮ್ ದೇವ್ ಮತ್ತು ಬಾಲಕೃಷ್ಣ ಅವರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: Patanjali Case: ಜಾಹೀರಾತು ಗಾತ್ರದಲ್ಲೇ ಕ್ಷಮಾಪಣೆ ಕೇಳಿ: ಬಾಬಾ ರಾಮ್‌ದೇವ್‌ ಬೆವರಿಳಿಸಿದ ಸುಪ್ರೀಂ ಕೋರ್ಟ್‌

ಈ ಹಿಂದೆ ಪತಂಜಲಿ ಸಂಸ್ಥಾಪಕರಾದ ಯೋಗ ಗುರು ರಾಮ್‌ದೇವ್ ಮತ್ತು ಅವರ ಸಹಾಯಕ ಬಾಲಕೃಷ್ಣ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳನ್ನು ಕಂಪೆನಿಗಳು ಉತ್ಪನ್ನಗಳು ಗುಣಪಡಿಸುತ್ತವೆ ಎಂದು ಸಾರುವ ಜಾಹೀರಾತುಗಳನ್ನು ಪ್ರಕಟಿಸಿದ್ದರು. ಇದನ್ನು ಪ್ರಶ್ನಿಸಿ ವೈದ್ಯಕೀಯ ಸಂಘ ಕೋರ್ಟ್‌ಗೆ ಹೋಗಿತ್ತು. ನ್ಯಾಯಾಲಯವು ಈ ಹಿಂದೆ ರಾಮ್‌ದೇವ್ ಮತ್ತು ಬಾಲಕೃಷ್ಣ ಸಲ್ಲಿಸಿದ್ದ ಕ್ಷಮೆ ಅರ್ಜಿಯನ್ನು ತಿರಸ್ಕರಿಸಿತ್ತು. “ಅದು ಹೃದಯಪೂರ್ವಕವಾಗಿಲ್ಲ” ಎಂದು ಪೀಠ ಹೇಳಿತ್ತು. ಏಪ್ರಿಲ್ 16ರಂದು ನಡೆದ ವಿಚಾರಣೆಯಲ್ಲಿ, ಇಬ್ಬರೂ ನೇರವಾಗಿ ಹಾಜರಾಗಲು ಮತ್ತು ಕ್ಷಮೆಯಾಚಿಸಲು ಆದೇಶಿಸಿತ್ತು.

Exit mobile version