Site icon Vistara News

ಚಾಟಿಯ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ ಕ್ಷಮೆಯಾಚಿಸಿದ ಬಾಬಾ ರಾಮದೇವ್;‌ ಏನಿದು ಕೇಸ್?‌

baba ramdev

Patanjali tenders unconditional apology for ad after Supreme Court issues notice

ನವದೆಹಲಿ: ಪತಂಜಲಿ ಸಂಸ್ಥೆ ಮುಖ್ಯಸ್ಥ, ಯೋಗ ಗುರು ಬಾಬಾ ರಾಮದೇವ್‌ (Baba Ramdev) ಅವರು ಸುಪ್ರೀಂ ಕೋರ್ಟ್‌ (Supreme Court) ಎದುರು ಬೇಷರತ್‌ ಕ್ಷಮೆಯಾಚಿಸಿದ್ದಾರೆ. ಜನರ ದಾರಿತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಪತಂಜಲಿ ಆಯುರ್ವೇದ (Patanjali Ayurved) ಸಂಸ್ಥೆಯು ಸುಪ್ರೀಂ ಕೋರ್ಟ್‌ಗೆ ಕ್ಷಮೆಯಾಚಿಸಿದೆ. “ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನೇ ದಾಖಲಿಸಬಾರದು” ಎಂಬದಾಗಿ ಕೋರ್ಟ್‌ ನೋಟಿಸ್‌ ನೀಡಿದ ಬಳಿಕ ಪತಂಜಲಿ ಸಂಸ್ಥೆಯು ಎಚ್ಚೆತ್ತುಕೊಂಡಿದೆ.

ರೋಗಗಳ ನಿವಾರಣೆ ಕುರಿತು ಪತಂಜಲಿ ಸಂಸ್ಥೆಯು ಜನರ ದಾರಿತಪ್ಪಿಸುವ ರೀತಿ ಜಾಹೀರಾತು ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿ ಸಂಸ್ಥೆ ಸಹ ಸಂಸ್ಥಾಪಕ ಬಾಬಾ ರಾಮದೇವ್‌ ಹಾಗೂ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ಬಾಬಾ ರಾಮದೇವ್‌ ಆಪ್ತ ಆಚಾರ್ಯ ಬಾಲಕೃಷ್ಣ ಅವರ ವಿರುದ್ಧ ಸುಪ್ರೀಂ ಕೋರ್ಟ್‌ ನ್ಯಾಯಾಂಗ ನಿಂದನೆ ನೋಟಿಸ್‌ ಹೊರಡಿಸಿತ್ತು. ಇಷ್ಟಾದರೂ, ಬಾಬಾ ರಾಮದೇವ್‌ ಆಗಲಿ, ಆಚಾರ ಬಾಲಕೃಷ್ಣ ಆಗಲಿ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದ ಕೆಂಡಾಮಂಡಲವಾದ ಸುಪ್ರೀಂ ಕೋರ್ಟ್‌, ಏಪ್ರಿಲ್‌ 2ರಂದು ಇಬ್ಬರೂ ಕೋರ್ಟ್‌ಗೆ ಖುದ್ದಾಗಿ ಹಾಜರಾಗಬೇಕು ಎಂದು ಸೂಚಿಸಿತ್ತು. ಹಾಗೆಯೇ, ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆಯನ್ನೇಕೆ ಆರಂಭಿಸಬಾರದು ಎಂದು ಕುಟುಕಿತ್ತು.

ಸುಪ್ರೀಂ ಕೋರ್ಟ್ ಖಡಕ್‌ ಎಚ್ಚರಿಕೆಯ ಬಳಿಕ ಆಚಾರ್ಯ ಬಾಲಕೃಷ್ಣ ಅವರು ಸುಪ್ರೀಂ ಕೋರ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. “ದೇಶದ ಕಾನೂನಿನ ಬಗ್ಗೆ ಪತಂಜಲಿ ಸಂಸ್ಥೆಗೆ ಅಪಾರವಾದ ಗೌರವವಿದೆ. ಕೋರ್ಟ್‌ಗೆ ಕಂಪನಿಯು ಬೇಷರತ್‌ ಕ್ಷಮೆಯಾಚಿಸುತ್ತದೆ. ಮುಂದಿನ ದಿನಗಳಲ್ಲಿ ಪತಂಜಲಿ ಸಂಸ್ಥೆ ನೀಡುವ ಜಾಹೀರಾತುಗಳು ಕಾನೂನಿನ ಅನ್ವಯವಾಗಿಯೇ ಇರುತ್ತವೆ. ಪತಂಜಲಿ ಸಂಸ್ಥೆಯ ಉತ್ಪನ್ನಗಳನ್ನು ಸೇವಿಸುವ ಮೂಲಕ ದೇಶದ ಜನ ಆರೋಗ್ಯದಿಂದ ಇರಲಿ ಎಂಬುದಷ್ಟೇ ನಮ್ಮ ಜಾಹೀರಾತಿನ ಉದ್ದೇಶವಾಗಿತ್ತು” ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Patanjali Advertising Case: ವಿಚಾರಣೆಗೆ ಖುದ್ದು ಹಾಜರಾಗುವಂತೆ ಬಾಬಾ ರಾಮ್‌ದೇವ್‌ಗೆ ಸೂಚಿಸಿದ ಸುಪ್ರೀಂ ಕೋರ್ಟ್‌

ಏನಿದು ಪ್ರಕರಣ?

ಪತಂಜಲಿ ಸಂಸ್ಥೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘವು (IMA) ಅರ್ಜಿ ಸಲ್ಲಿಸಿದೆ. ಪತಂಜಲಿ ಸಂಸ್ಥೆಯು ಕೊರೊನಾ ನಿರೋಧಕ ಲಸಿಕೆ ಹಾಗೂ ಆಧುನಿಕ ಔಷಧ ಪದ್ಧತಿ ಬಗ್ಗೆ ಸುಳ್ಳು ಅಭಿಯಾನ ಆರಂಭಿಸಿದೆ. ಅಷ್ಟೇ ಅಲ್ಲ, ಅಲೋಪಥಿ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಜನರ ದಾರಿ ತಪ್ಪಿಸುವ ರೀತಿ ಪತಂಜಲಿ ಸಂಸ್ಥೆಯು ಜಾಹೀರಾತುಗಳನ್ನು ನೀಡುತ್ತಿದೆ. ಇದು ಡ್ರಗ್ಸ್‌ ಆ್ಯಂಡ್‌ ಮ್ಯಾಜಿಕ್‌ ರೆಮೆಡೀಸ್‌ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಐಎಂಎ ಅರ್ಜಿ ಸಲ್ಲಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಅಹ್ಸಾನುದ್ದೀನ್‌ ಅಮಾನುಲ್ಲಾ ಅವರು ಬಾಬಾ ರಾಮದೇವ್‌ ಹಾಗೂ ಆಚಾರ್ಯ ಬಾಲಕೃಷ್ಣ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version