ಜೈಪುರ: ಯಾವುದೇ ಕಾಯಿಲೆಗಳಿಂದ ಮುಕ್ತಿ ಹೊಂದಿ, ಮತ್ತೆ ಆರೋಗ್ಯಯುತ ಜೀವನ ಸಾಗಿಸಲು ಎಲ್ಲರೂ ಆಸ್ಪತ್ರೆಗೆ ತೆರಳುತ್ತೇವೆ. ಕಾಯಿಲೆಗಳನ್ನು ವಾಸಿ ಮಾಡುವ ಕಾರಣಕ್ಕಾಗಿ, ಮರುಜನ್ಮ ನೀಡುವ ಕಾರಣಕ್ಕಾಗಿ ವೈದ್ಯರನ್ನು ದೇವರಿಗೆ ಹೋಲಿಸಿದ್ದೇವೆ. ಆದರೆ, ರಾಜಸ್ಥಾನದ ಜೈಪುರದಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಆಪರೇಷನ್ ಮಾಡುವಾಗ ವ್ಯಕ್ತಿಯ ದೇಹದಿಂದ ಕತ್ತರಿ ತೆಗೆಯುವುದನ್ನು ಮರೆತ ಕಾರಣ, ಆಪರೇಷನ್ ಮಾಡಿಸಿಕೊಂಡ 12 ದಿನದ ಬಳಿಕ ಆತ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ಜೈಪುರದ ಫೋರ್ಟಿಸ್ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿಕೊಂಡ ಉಪೇಂದ್ರ ಶರ್ಮಾ (74) ಎಂಬುವರು ಮೃತಪಟ್ಟಿದ್ದಾರೆ. “ಉಪೇಂದ್ರ ಶರ್ಮಾ ಅವರ ದೇಹದಲ್ಲಿ ವೈದ್ಯರು ಕತ್ತರಿಯನ್ನು ಬಿಟ್ಟ ಕಾರಣ ಮೃತಪಟ್ಟಿದ್ದಾರೆ” ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಆದಾಗ್ಯೂ, ಆಸ್ಪತ್ರೆಯ ಆಡಳಿತ ಮಂಡಳಿಯು ಉಪೇಂದ್ರ ಶರ್ಮಾ ಕುಟುಂಬಸ್ಥರ ಆರೋಪವನ್ನು ಅಲ್ಲಗಳೆದಿದೆ. ಕೊನೆಗೆ ಕುಟುಂಬಸ್ಥರು ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಿಸಿದ್ದಾರೆ.
ಮಾನ್‌ಸರೋವರ ನಿವಾಸಿಯಾದ ಉಪೇಂದ್ರ ಶರ್ಮಾ ಅವರು ಮೇ 29ರಂದು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಕೂಡಲೇ ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇ 30ರಂದು ರಾತ್ರಿ 8.30ರ ಸುಮಾರಿಗೆ ಅವರನ್ನು ಆಪರೇಷನ್ ಥಿಯೇಟರ್‌ಗೆ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ತಡರಾತ್ರಿ ಅವರನ್ನು ಆಪರೇಷನ್ ಥಿಯೇಟರ್‌ನಿಂದ ಜನರಲ್ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. ಮೇ 31ರಂದು ಅವರನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಗಿದೆ. ಜೂನ್ 12ರಂದು ಉಪೇಂದ್ರ ಶರ್ಮಾ ಮೃತಪಟ್ಟಿದ್ದಾರೆ ಎಂಬುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: Medical Negligence: ವೈದ್ಯರ ನಿರ್ಲಕ್ಷ್ಯಕ್ಕೆ ಮೂರು ತಿಂಗಳ ಮಗು ಸಾವು? ಲಸಿಕೆ ಹಾಕಿ ಗಂಟೆಯೊಳಗೇ ಮರಣ!
ಕುಟುಂಬಸ್ಥರು ಹೇಳುವುದೇನು?
ಆಪರೇಷನ್ ಮಾಡಿಸಿಕೊಂಡು ಮನೆಗೆ ಬಂದ ಬಳಿಕ ಅವರ ಆರೋಗ್ಯ ಮತ್ತಷ್ಟು ಬಿಗಡಾಯಿಸಿತು. ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಎಲ್ಲವೂ ಸರಿಹೋಗುತ್ತದೆ ಎಂದು ವಾಪಸ್ ಕಳುಹಿಸಿದರು. ಆದರೆ, ಜೂನ್ 12ರಂದು ಉಪೇಂದ್ರ ಶರ್ಮಾ ಅವರು ಮೃತಪಟ್ಟರು. ಅಂತ್ಯಸಂಸ್ಕಾರದ ಬಳಿಕ ಅವರ ದೇಹದ ಚಿತಾಭಸ್ಮ ತೆಗೆದುಕೊಳ್ಳಲು ಹೋದಾಗ ಕತ್ತರಿ ಪತ್ತೆಯಾಗಿದೆ. ವೈದ್ಯರು ಆಪರೇಷನ್ ಬಳಿಕ ಕತ್ತರಿ ಹೊರತೆಗೆದಿಲ್ಲ. ಇದರಿಂದಾಗಿ ಅವರು ಮೃತಪಟ್ಟರು ಎಂಬುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ