ಪಟನಾ: ವಸ್ತ್ರವೆಂಬುದು ನಮ್ಮಿಚ್ಛೆಯೇ ಆಗಿದ್ದರೂ, ಎಲ್ಲ ಸನ್ನಿವೇಶದಲ್ಲೂ ಅದನ್ನು ಅನ್ವಯಿಸಿಕೊಳ್ಳಲು ಸಾಧ್ಯವಿಲ್ಲ. ಮದುವೆ ಮನೆಯಲ್ಲಿ ಗಿಡ್ಡ ಬಟ್ಟೆ ಧರಿಸಿ ಓಡಾಡುವುದು, ಶವಸಂಸ್ಕಾರಕ್ಕೆ ಹೋಗುವಾಗ ಅತ್ಯಂತ ಮಾಡರ್ನ್ ಉಡುಪು ಧರಿಸಿಕೊಂಡು ಹೋಗುವುದೆಲ್ಲ ಎಳ್ಳಷ್ಟೂ ಸೂಕ್ತವಲ್ಲ. ಹಾಗೇ, ಕಂಪನಿಗಳು, ಸರ್ಕಾರಿ ಕಚೇರಿಗಳು, ಕೋರ್ಟ್, ಪೊಲೀಸ್ ಸ್ಟೇಶನ್ ಹೀಗೆ ವಿವಿಧ ಸ್ಥಳಗಳು, ಸಂದರ್ಭದಲ್ಲಿ ಅದರದ್ದೇ ಆದ ವಸ್ತ್ರ ಸಂಹಿತೆ ಇರುತ್ತದೆ. ಅದನ್ನು ಪಾಲಿಸಲೇಬೇಕಾಗುತ್ತದೆ. ಹಾಗೊಮ್ಮೆ ಪಾಲಿಸದೆ ಇದ್ದರೆ ಈ ಐಎಎಸ್ ಅಧಿಕಾರಿಯಂತೆ ತಲೆ ತಗ್ಗಿಸಬೇಕಾದ ಪ್ರಸಂಗ ಬರಬಹುದು !
ಪಟನಾದ ಹೈಕೋರ್ಟ್‌ಗೆ ಹೋಗಿದ್ದ ಐಎಎಸ್ ಅಧಿಕಾರಿಯೊಬ್ಬರು ಅಲ್ಲಿನ ನ್ಯಾಯಮೂರ್ತಿಯವರಿಂದ ಸಿಕ್ಕಾಪಟೆ ಬೈಸಿಕೊಂಡಿದ್ದಾರೆ. ಕಾರಣ ಅವರು ಧರಿಸಿಕೊಂಡು ಹೋಗಿದ್ದ ಉಡುಪು. ಕೋರ್ಟ್‌ಗೆ ಹೋಗಬೇಕಾದರೆ ಯಾವ ರೀತಿಯ ವಸ್ತ್ರ ತೊಟ್ಟು ಹೋಗಬೇಕಿತ್ತೋ ಹಾಗೆ ಹೋಗದೆ ಸೂಕ್ತವಲ್ಲದ ಉಡುಪು ಧರಿಸಿ ಹೋಗಿದ್ದರು. ಅದನ್ನು ನೋಡಿದ ನ್ಯಾಯಮೂರ್ತಿ ಕೆಂಡಾಮಂಡಲರಾಗಿದ್ದಾರೆ. ʼನ್ಯಾಯಾಲಯದಲ್ಲಿ ಶಿಸ್ತಿರಬೇಕು. ಇಲ್ಲಿ ವಸ್ತ್ರಸಂಹಿತೆ ಇದೆ. ನೀವೇನ್ರೀ, ಸಿನಿಮಾಕ್ಕೆ ಹೋಗೋ ಥರ ಬಂದಿದ್ದೀರಲ್ಲ, ಇದೇನು ಸಿನಿಮಾ ಥಿಯೇಟರ್ ಅಂದುಕೊಂಡ್ರಾ?ʼ ಎಂದು ಎಲ್ಲರ ಎದುರು ಕಟುವಾಗಿಯೇ ಬೈದಿದ್ದಾರೆ. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ಬಿಜೆಪಿಯಿಂದ ದೂರ ನಡೆಯುತ್ತಾರ ನಿತೀಶ್?: ಬಿಹಾರದಲ್ಲಿ ಇಫ್ತಾರ್ʼ ರಾಜಕೀಯ
ಹೈಕೋರ್ಟ್ ಜಡ್ಜ್ ಬಳಿ ಛೀಮಾರಿ ಹಾಕಿಸಿಕೊಂಡ ಐಎಎಸ್ ಅಧಿಕಾರಿ ಹೆಸರು ಆನಂದ್ ಕಿಶೋರ್ ಎಂದಾಗಿದ್ದು, ಇವರು ಬಿಹಾರ ಸರ್ಕಾರಿ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ. ಮುಖ್ಯಮಂತ್ರಿ ನಿತೀಶ್ ಕುಮಾರ್ ಆಪ್ತರು ಎಂದೂ ಹೇಳಲಾಗಿದೆ. ಯಾವುದೋ ಒಂದು ವಿಷಯದ ವಿಚಾರಣೆಗಾಗಿ ಹೈಕೋರ್ಟ್‌ಗೆ ಆಗಮಿಸಿದ್ದ ಐಎಎಸ್ ಅಧಿಕಾರಿ ಬಿಳಿ ಶರ್ಟ್ ತೊಟ್ಟಿದ್ದರು. ಕಾಲರ್ ಬಟನ್ ಹಾಕಿರಲಿಲ್ಲ. ಬ್ಲೇಜರ್ ಧರಿಸಿರಲಿಲ್ಲ ಅದನ್ನು ನೋಡುತ್ತಿದ್ದಂತೆ ಜಡ್ಜ್ ಕಣ್ಣು ಕೆಂಪಾಗಿದೆ. ʼನೀವೇನ್ರೀ, ನಾಗರಿಕ ಸೇವಾ ತರಬೇತಿ ಪಡೆದಿಲ್ಲವಾʼ ಎಂದೂ ಕೇಳಿದ್ದಾರೆ. ನ್ಯಾಯಾಧೀಶರು ರೇಗಾಡುವ ಮಧ್ಯದಲ್ಲಿ, ʼನನಗೆ ವಸ್ತ್ರ ಸಂಹಿತೆ ಬಗ್ಗೆ ಗೊತ್ತಿರಲಿಲ್ಲ. ತಿಳಿಯದೆ ತಪ್ಪಾಗಿದೆʼ ಎಂದು ಇವರು ಹೇಳಿದ್ದಾರೆ. ಆದರೆ ಜಡ್ಜ್ ಮಾತ್ರ ಏನನ್ನೂ ಕೇಳಿಸಿಕೊಳ್ಳದೆ, ಒಂದೆ ಸಮ ಬೈದಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲೊಂದು KGF !: ಅನ್ವೇಷಣೆ ಮಾಡಲು ಸರ್ಕಾರ ಅನುಮತಿ