ಲಖನೌ: ಹೆಚ್ಚಿನ ಉದ್ಯೋಗಿಗಳು ರಜೆ ಬೇಕು ಎಂದಾಗ ಸುಳ್ಳು ಕಾರಣಗಳನ್ನು ನೀಡುತ್ತಾರೆ. ಕೆಲವೊಮ್ಮೆ ಸಂಬಂಧಿಕರು ತೀರಿಕೊಂಡರು, ಅನಾರೋಗ್ಯ ಎಂದು ಕೂಡ ಸುಳ್ಳು ಹೇಳಿ ರಜೆ ತೆಗೆದುಕೊಳ್ಳುವವರು ಇದ್ದಾರೆ. ಆದರೆ, ಉತ್ತರ ಪ್ರದೇಶದಲ್ಲಿ ಪೊಲೀಸ್ ಪೇದೆಯೊಬ್ಬರು, “ನಾನು ಕೆಲಸಕ್ಕೆ ಹಾಜರಾಗುತ್ತಿರುವ ಕಾರಣ ಹೆಂಡತಿ ಮುನಿಸಿಕೊಂಡಿದ್ದಾಳೆ, ದಯಮಾಡಿ ರಜೆ ಕೊಡಿ” ಎಂಬುದಾಗಿ ಮೇಲಧಿಕಾರಿಗೆ ಬರೆದ ರಜೆ ಪತ್ರದಲ್ಲಿ ಉಲ್ಲೇಖಿಸಿ (Honest Leave Application) ಪ್ರಾಮಾಣಿಕತೆ ಮೆರೆದಿದ್ದಾರೆ.
ಹೌದು, ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆ ನೌಟನ್ವ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಗೌರವ ಚೌಧರಿ ಎಂಬುವರು ಇತ್ತೀಚೆಗಷ್ಟೇ ಮದುವೆಯಾಗಿದ್ದು, ತುರ್ತು ಕರೆಯ ಮೇರೆಗೆ ಡ್ಯೂಟಿಗೆ ಹಾಜರಾದ ಕಾರಣ ಪತ್ನಿ ಮುನಿಸಿಕೊಂಡಿದ್ದಾರೆ. ಹಾಗಾಗಿ, ರಜೆ ಕೊಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. .
“ನನ್ನ ಸಂಬಂಧಿಯೊಬ್ಬರ ಜನ್ಮದಿನಕ್ಕೆ ಹಾಜರಿರುತ್ತೇನೆ ಎಂದು ಪತ್ನಿಗೆ ಹೇಳಿದ್ದೇನೆ. ಈಗ ರಜೆ ಸಿಗುತ್ತಿಲ್ಲ ಎಂದಿದ್ದಕ್ಕೆ ಪತ್ನಿ ಸಿಟ್ಟಾಗಿದ್ದಾಳೆ. ಕರೆ ಮಾಡಿದರೆ ತನ್ನ ತಾಯಿಗೆ ಫೋನ್ ಕೊಡುತ್ತಿದ್ದಾಳೆ. ಎಷ್ಟು ಸಲ ಕರೆ ಮಾಡಿದರೂ ಹೀಗೆಯೇ ಮಾಡುತ್ತಿದ್ದಾಳೆ. ಹಾಗಾಗಿ, ನನಗೆ ಒಂದು ವಾರ ರಜೆ ಕೊಡಿ” ಎಂದು ಮಹಾರಾಜಗಂಜ್ ಎಎಸ್‌ಪಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಎಸ್‌ಪಿ ಅವರು ರಜೆ ನೀಡಿದ್ದು, ಕೊನೆಗೂ ಚೌಧರಿ ಅವರು ಪತ್ನಿಯ ಮಡಿಲು ಸೇರಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | IND VS SL | ಶಮಿಯ ಮಂಕಡ್ ನಿರಾಕರಿಸಿ ಕ್ರೀಡಾ ಸ್ಫೂರ್ತಿ ಮೆರೆದ ರೋಹಿತ್ ಶರ್ಮಾ; ವಿಡಿಯೊ ವೈರಲ್