Site icon Vistara News

Pawan Kalyan: ಎನ್‌ಡಿಎ ತೊರೆಯಲ್ಲ! ಉಲ್ಟಾ ಹೊಡೆದ ನಟ, ಜನಸೇನಾ ನಾಯಕ ಪವನ್ ಕಲ್ಯಾಣ್

Pawan Kalyan

ವಿಶಾಖಪಟ್ಟಣಂ, ಆಂಧ್ರ ಪ್ರದೇಶ: ಭಾರತೀಯ ಜನತಾ ಪಾರ್ಟಿಯ (BJP) ನೇತೃತ್ವದ ಎನ್‌ಡಿಎ (NDA) ತೊರೆಯುವುದಾಗಿ ಹೇಳಿದ್ದ ಜನಸೇನಾ ಪಕ್ಷದ (Janasena Party) ನಾಯಕ ಹಾಗೂ ನಟ ಪವನ್ ಕಲ್ಯಾಣ್ (Pawan Kalyan) ಈಗ ಉಲ್ಟಾ ಹೊಡೆದಿದ್ದಾರೆ. ಎನ್‌ಡಿಎ ತೊರೆಯುತ್ತಿಲ್ಲ. ಆದರೆ, ತೆಲುಗು ದೇಶಂ ಪಕ್ಷಕ್ಕೆ (Telugu Desham Party – TDP) ಬೆಂಬಲವನ್ನು ಮುಂದುವರಿಸುತ್ತೇವೆ ಎಂದು ಜನಸೇನಾ ಪಕ್ಷವು ಸ್ಪಷ್ಟಪಡಿಸಿದೆ. ಆಂಧ್ರ ಪ್ರದೇಶದ (Andhra Pradesh) ಕೃಷ್ಣಾ ಜಿಲ್ಲೆಯಲ್ಲಿ (Krishna District) ಮಾತನಾಡುತ್ತ ಪವನ್ ಕಲ್ಯಾಣ್ ಅವರು, ಎನ್‌ಡಿಎ ತೊರೆಯುವುದಾಗಿ ಹೇಳಿಲ್ಲ ಎಂದು ಜನಸೇನಾ ಪಕ್ಷ ಹೇಳಿದೆ.

ನಾನು ಎನ್‌ಡಿಎದಲ್ಲಿದ್ದರೂ, ಟಿಡಿಪಿ ಈಗ ದುರ್ಬಲವಾಗಿರುವುದರಿಂದ ಬೆಂಬಲಿಸುತ್ತೇನೆ ಎಂದು ಪವನ್ ಕಲ್ಯಾಣ್ ಹೇಳಿದ್ದರು. ಅದರರ್ಥ, ಅವರು ಎನ್‌ಡಿಎ ತೊರೆಯುತ್ತಾರೆ ಎಂದಲ್ಲ. ಎನ್‌ಡಿಎ ಭಾಗವಾಗಿದ್ದಾಗ್ಯೂ ಕಲ್ಯಾಣ್ ಅವರು ಟಿಡಿಪಿಗೆ ಬೆಂಬಲವನ್ನು ಮುಂದುವರಿಸಲಿದ್ದಾರೆ ಎಂದು ಜನಸೇನಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಕ್ತಾರ ಬೋಳಿಶೆಟ್ಟಿ ಸತ್ಯನಾರಾಯಣ ಅವರು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಜತೆಗೇ ನಾವಿದ್ದೇವೆ ಎಂದು ನಾವು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ. ಹಾಗೆಯೇ ನಾವು ಡಿಟಿಪಿಗೂ ಬೆಂಬಲ ನೀಡುವುದನ್ನು ಮುಂದುವರಿಸುತ್ತೇವೆ. ಆಂಧ್ರ ಪ್ರದೇಶದಿಂದ ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಲು ಟಿಡಿಪಿಯೊಂದಿಗೆ ನಾವಿದ್ದೇವೆ ಎಂದು ಸತ್ಯನಾರಾಯಣ ಹೇಳಿದರು.

ಪವನ್ ಕಲ್ಯಾಣ್ ಹೇಳಿದ್ದೇನು?

ಟಿಡಿಪಿ ಬಲಶಾಲಿ ಪಕ್ಷವಾಗಿದೆ. ಉತ್ತಮ ಆಡಳಿತಕ್ಕಾಗಿ, ರಾಜ್ಯದ ಅಭಿವೃದ್ದಿಗಾಗಿ ಆಂಧ್ರ ಪ್ರದೇಶಕ್ಕೆ ತೆಲುಗು ದೇಶಂ ಪಕ್ಷದ ಅಗತ್ಯವಿದೆ. ಸದ್ಯ, ಟಿಡಿಪಿ ಸಂಘರ್ಷವನ್ನು ಎದುರಿಸುತ್ತಿದೆ. ಟಿಡಿಪಿಗೆ ಜನಸೈನಿಕರ ಬಿಸಿ ರಕ್ತದ ಯುವಕರ ಅಗತ್ಯವಿದೆ. ನಾವು ಅವರಿಗೆ ಸಪೋರ್ಟ್ ಮಾಡುತ್ತೇವೆ. ಒಂದು ವೇಳೆ, ಟಿಡಿಪಿ ಮತ್ತ ಜನಸೇನಾ ಮೈತ್ರಿ ಮಾಡಿಕೊಂಡರೆ ರಾಜ್ಯದಲ್ಲಿ ವೈಎಸ್‌ಆರ್‌ಸಿಪಿ ಮುಳುಗಿ ಹೋಗಲಿದೆ ಎಂದು ಬುಧವಾರ ಕೃಷ್ಣ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದು ಸಾರ್ವಜನಿಕ ಸಭೆಯಲ್ಲಿ ಪವನ್ ಕಲ್ಯಾಣ್ ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Pawan Kalyan: ಎಐಎಡಿಎಂಕೆ ಬಳಿಕ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಎರಡನೇ ಹೊಡೆತ, ಎನ್‌ಡಿಎ ತೊರೆದ ಪವನ್ ಕಲ್ಯಾಣ್

ಸ್ಕಿಲ್ ಡೆವಲಪ್‌ಮೆಂಟ್ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಪೊಲೀಸರು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿ, ರಾಜಮುಂಡ್ರೆ ಸೆಂಟ್ರಲ್‌ ಜೈಲಿನಲ್ಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14ರಂದು ರಾಜಮುಂಡ್ರೆ ಜೈಲಿಗೆ ಪವನ್ ಕಲ್ಯಾಣ್ ಅವರು ಭೇಟಿ ನೀಡಿ, ಚಂದ್ರಬಾಬು ನಾಯ್ಡು ಅವರ ಜತೆ ಮಾತುಕತೆ ನಡೆಸಿದ್ದರು.

ಇದಕ್ಕೂ ಮೊದಲು, ಜುಲೈ 18ರಂದು ದಿಲ್ಲಿಯಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಪಾಲ್ಗೊಂಡಿದ್ದರು. ಈ ಮಧ್ಯೆ, ಆಂಧ್ರ ಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ ಸೋಲಿಸಲು ಜನಸೇನಾ, ಟಿಡಿಪಿ ಮತ್ತು ಬಿಜೆಪಿ ಕೂಟ ರಚನೆಯ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಆದರೆ, ಈ ಕುರಿತು ಬಿಜೆಪಿ ಯಾವುದೇ ಪ್ರತಿಕ್ರಿಯೆಯನ್ನು ಇನ್ನೂ ನೀಡಿಲ್ಲ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version