Site icon Vistara News

Pawan Kalyan: ಎಐಎಡಿಎಂಕೆ ಬಳಿಕ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಎರಡನೇ ಹೊಡೆತ, ಎನ್‌ಡಿಎ ತೊರೆದ ಪವನ್ ಕಲ್ಯಾಣ್

Pawan Kalyan with chandrababu naidu

ಹೈದರಾಬಾದ್:‌ ಬಿಜೆಪಿ (BJP) ನೇತೃತ್ವದ ಎನ್‌ಡಿಎಯಿಂದ (NDA) ಜನಸೇನೆ ಪಕ್ಷ (Janasena party) ಹೊರಬಂದಿದ್ದು, ತೆಲುಗು ದೇಶಂ ಪಾರ್ಟಿಯನ್ನು (telugu desam party – TDP) ಬೆಂಬಲಿಸಲಿದ್ದೇನೆ ಎಂದು ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ (Pawan Kalyan) ಗುರುವಾರ ಹೇಳಿದ್ದಾರೆ.

ಈ ಕಷ್ಟದ ಸಮಯದಲ್ಲಿ ಟಿಡಿಪಿಯನ್ನು ಬೆಂಬಲಿಸುತ್ತೇನೆ. ಆಂಧ್ರಪ್ರದೇಶದ (Andhra pradesh) ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ಜನಸೇನಾ- ಟಿಡಿಪಿ ಮೈತ್ರಿ ಅಗತ್ಯವಿದೆ ಎಂದು ಪವನ್‌ ಕಲ್ಯಾಣ್‌ ಹೇಳಿದರು. “ಟಿಡಿಪಿ ಬಲಿಷ್ಠ ಪಕ್ಷವಾಗಿದ್ದು, ಆಂಧ್ರಪ್ರದೇಶಕ್ಕೆ ಉತ್ತಮ ಆಡಳಿತ ನೀಡಲಿದೆ. ರಾಜ್ಯದ ಅಭಿವೃದ್ಧಿಗಾಗಿ ತೆಲುಗು ದೇಶಂ ಪಕ್ಷದ ಅಗತ್ಯವಿದೆ. ಇಂದು ಟಿಡಿಪಿ ಸಂಕಷ್ಟದಲ್ಲಿದ್ದು, ನಾವು ಅವರನ್ನು ಬೆಂಬಲಿಸುತ್ತೇವೆ. ಈ ಪರಿಸ್ಥಿತಿಯಲ್ಲಿ ಟಿಡಿಪಿಗೆ ಜನಸೈನ್ಯದ ಯುವ ರಕ್ತದ ಬೆಂಬಲ ಬೇಕು. ಟಿಡಿಪಿ ಮತ್ತು ಜನಸೇನೆ ಕೈಜೋಡಿಸಿದರೆ ರಾಜ್ಯದಲ್ಲಿ ವೈಎಸ್‌ಆರ್‌ಸಿಪಿ ಮುಳುಗಲಿದೆʼʼ ಎಂದು ಕೃಷ್ಣಾ ಜಿಲ್ಲೆಯ ಪೆಡನಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪವನ್ ಕಲ್ಯಾಣ್ ಹೇಳಿದ್ದಾರೆ.

ಜುಲೈ 18ರಂದು ದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಭಾಗವಹಿಸಿದ್ದರು. ಸಭೆಯ ನಂತರ ಮಾತನಾಡಿದ ನಟ, ತಮ್ಮ ಪಕ್ಷವು ಪಿಎಂ ಮೋದಿ ಅವರ ದೃಷ್ಟಿಕೋನವನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದರು. ಆದರೆ ನಂತರ “ಕೌಶಲ್ಯ ಅಭಿವೃದ್ಧಿ ಹಗರಣ”ದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಚಂದ್ರಬಾಬು ನಾಯ್ಡು (Chandrababu naidu) ಅವರನ್ನು ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ ಪವನ್ ಕಲ್ಯಾಣ್ ಸೆಪ್ಟೆಂಬರ್ 14ರಂದು ಭೇಟಿ ಮಾಡಿದ್ದರು.

ಆಂಧ್ರಪ್ರದೇಶದಲ್ಲಿ ವೈಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಅವರ ವೈಎಸ್‌ಆರ್‌ಸಿಪಿ ವಿರುದ್ಧ ಹೋರಾಡಲು ಟಿಡಿಪಿ, ಬಿಜೆಪಿ ಮತ್ತು ಜನಸೇನೆಯ ಮೈತ್ರಿಯನ್ನು ಪವನ್ ಕಲ್ಯಾಣ್ ಪ್ರಸ್ತಾಪಿಸಿದ್ದರು. ಈ ಬಗ್ಗೆ ಬಿಜೆಪಿ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಇದೀಗ ಪವನ್ ಕಲ್ಯಾಣ್ ತಮ್ಮ ಪಕ್ಷ ಇನ್ನು ಮುಂದೆ ಎನ್‌ಡಿಎ ಭಾಗವಾಗುವುದಿಲ್ಲ ಎಂದಿದ್ದಾರೆ.

2019ರಲ್ಲಿ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ, ಪವನ್ ಕಲ್ಯಾಣ್ ಅವರ ಜನಸೇನಾ 5.6% ಮತ ಹಂಚಿಕೆಯೊಂದಿಗೆ ಕೇವಲ ಒಂದು ಸ್ಥಾನವನ್ನು ಗೆದ್ದಿತ್ತು. ಟಿಡಿಪಿ 39.7% ಮತ ಹಂಚಿಕೆಯೊಂದಿಗೆ 23 ಸ್ಥಾನಗಳನ್ನು ಗೆದ್ದಿತ್ತು. ವೈಎಸ್‌ಆರ್‌ಸಿಪಿ 50.6% ಮತ ಹಂಚಿಕೆಯೊಂದಿಗೆ 151 ಸ್ಥಾನಗಳನ್ನು ಗೆದ್ದುಕೊಂಡಿದೆ.

ಈ ನಡುವೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೌಶಲ ಅಭಿವೃದ್ಧಿ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಅವರ ಜಾಮೀನು ಮತ್ತು ಕಸ್ಟಡಿ ಅರ್ಜಿಗಳ ವಿಚಾರಣೆಯನ್ನು ಎಸಿಬಿ ನ್ಯಾಯಾಲಯ ಅಕ್ಟೋಬರ್ 5ಕ್ಕೆ ಮುಂದೂಡಿದೆ. ಬಹುಕೋಟಿ ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯ್ಡು ಅವರನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಸೆಪ್ಟೆಂಬರ್ 9ರಂದು ಬಂಧಿಸಿತ್ತು.

ಇದನ್ನೂ ಓದಿ: Koppala News: ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಅ.1ರಂದು ಬೃಹತ್ ವಾಹನ ರ‍್ಯಾಲಿ

Exit mobile version