ನವ ದೆಹಲಿ: ನೇಮಕಾತಿ ಕಂಪನಿಯೊಂದರ ವೇತನ ವಿಭಾಗದ (payroll services) ನೌಕರನೊಬ್ಬ ತನ್ನ ನಿರೋದ್ಯೋಗಿ ಪತ್ನಿಯನ್ನು ಉದ್ಯೋಗಿಗಳ ವೇತನ ಪಟ್ಟಿಗೆ ಸೇರಿಸಿಕೊಂಡು 10 ವರ್ಷಗಳ ಕಾಲ ಕಂಪನಿ ಖಾತೆಯಿಂದ 4.2 ಕೋಟಿ ದೋಚಿದ ಪ್ರಕರಣ ನಡೆದಿದೆ. ಈ ಕುರಿತು ಪೊಲೀಸ್ ದೂರು ದಾಖಲಾಗಿದೆ. ದೆಹಲಿ ಮೂಲದ ಕಂಪನಿಯು ನಡೆಸಿದ ಆಂತರಿಕ ತನಿಖೆಯಲ್ಲಿ ವಂಚನೆ ಕಂಡುಬಂದಿದೆ. ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮ್ಯಾನ್ ಪವರ್ ಗ್ರೂಪ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಎಂದು ಗುರುತಿಸಲ್ಪಟ್ಟಿರುವ ಈ ಸಂಸ್ಥೆಗೆ 2002 ಡಿಸೆಂಬರ್ನಲ್ಲಿ ತನ್ನ ದಾಖಲೆಗಳನ್ನು ತಿರುಚಲಾಗುತ್ತಿದೆ ಎಂಬ ಅನುಮಾನ ಬಂದಿತ್ತು. ಈ ವೇಳೆ ಮೇಲ್ಮಟ್ಟದ ತನಿಖೆ ನಡೆಸಿದಾಗ 2008ರಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ರಾಧಾಬಲ್ಲವ್ ನಾಥ್ ಎಂಬವ ಕಂಪನಿಯ ಸಂಪನ್ಮೂಲಗಳನ್ನು ಬಳಸಿಕೊಂಡು ತನ್ನ ಹೆಂಡತಿಯ ಖಾತೆಗೆ ಹಣ ರವಾನೆ ಮಾಡುತ್ತಿರುವುದು ಗೊತ್ತಾಯಿತು. ನಾಥ್ ತಪ್ಪೆಸಗಿದ ಸಮಯದಲ್ಲಿ ಕಂಪನಿಯಲ್ಲಿ ವ್ಯವಸ್ಥಾಪಕ (ಹಣಕಾಸು) ಹುದ್ದೆ ಹೊಂದಿದ್ದ.
ವೇತನಪಟ್ಟಿ ಮತ್ತು ಮರುಪಾವತಿಗೆ ಸಂಬಂಧಿಸಿದ ವಿವರಗಳು ಹೊಂದಿರುವ ಮೂವರಲ್ಲಿ ಆರೋಪಿಯೂ ಒಬ್ಬನಾಗಿದದ್ದ. ಅವರ ಜವಾಬ್ದಾರಿಗಳಲ್ಲಿ ಹೊಸ ಉದ್ಯೋಗಿಗಳು, ಉದ್ಯೋಗಿಗಳ ಹಾಜರಾತಿ ಮತ್ತು ಇತರ ಸಂಬಂಧಿತ ಕಾರ್ಯಗಳಿಗೆ ಸಂಬಂಧಿಸಿದ ಡೇಟಾವನ್ನು ನಿರ್ವಹಿಸುವುದಾಗಿತ್ತು. ಮಾಸಿಕ ವೇತನ ರಿಜಿಸ್ಟರ್ ತಯಾರಿಸಲು ವೇತನದಾರರಿಗೆ ಕಳುಹಿಸುತ್ತಿದ್ದರು.
ರಿಜಿಸ್ಟರ್ ಅನ್ನು ಬಲ್ಲವ್ ನಾಥ್ ಅವರಿಗೆ ಕಳುಹಿಸಿದ ನಂತರ, ಅದನ್ನು ನಿರ್ದೇಶಕರು (ಮಾನವ ಸಂಪನ್ಮೂಲ), ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (ಸಿಎಚ್ಆರ್ಒ ) ಮತ್ತು ಕರ್ತವ್ಯಕ್ಕೆ ನಿಯೋಜಿಸಲಾದ ಇತರ ಇಬ್ಬರು ಉದ್ಯೋಗಿಗಳ ಅನುಮೋದನೆಗಾಗಿ ಒತ್ತಾಯಿಸಲಾಗುತ್ತದೆ. ಅನುಮೋದನೆ ಪಡೆದ ನಂತರ ನಾಥ್ ಮಾಡಬೇಕಾದ ಕಾರ್ಯವೆಂದರೆ ಅಂತಿಮ ಪಟ್ಟಿಯನ್ನು ಪಾವತಿ ಪ್ರಕ್ರಿಯೆಗಾಗಿ ಬ್ಯಾಂಕಿಗೆ ಕಳುಹಿಸುವುದು. ಆದರೆ, ಪಟ್ಟಿಯನ್ನು ಬ್ಯಾಂಕಿಗೆ ಕಳುಹಿಸುವ ಮೊದಲು ಅದರಲ್ಲಿ ಪತ್ನಿಯ ಹೆಸರನ್ನು ಸೇರಿಸುವ ಮೂಲಕ ಕೋಟ್ಯಾಂತರ ರೂಪಾಯಿ ದೋಚಿದ್ದ.
ಒಂದು ಹೆಚ್ಚುವರಿ ಸಾಲು ಸೇರ್ಪಡೆ
ಸಿಎಚ್ಆರ್ಒ ಕಚೇರಿಯಿಂದ ವೇತನದಾರರ ಡೇಟಾವನ್ನು ಒಳಗೊಂಡ ಅನುಮೋದಿತ ಎಕ್ಸೆಲ್ ಫೈಲ್ ಅನ್ನು ಸ್ವೀಕರಿಸಿದ ನಂತರ, ರಾಧಾಬಲ್ಲವ್ ನಾಥ್ ಅವರು ಶೀಟ್ನಲ್ಲಿ ತನ್ನ ಪತ್ನಿ ಸಸ್ಮಿತಾ ರೌಲ್ ಹೆಸರನ್ನು ಸೇರಿಸುತ್ತಿದ್ದರು” ಎಂದು ಕಂಪನಿಯು ದೂರಿದೆ.
ಇದನ್ನೂ ಓದಿ : RBI interest rate : ಆಗಸ್ಟ್ 8-10ಕ್ಕೆ ಆರ್‌ಬಿಐ ಸಭೆ, ಸಾಲದ ಬಡ್ಡಿ ದರ ಏನಾಗಲಿದೆ?
ತಮ್ಮ ಪತ್ನಿಯ ಹೆಸರಿನಲ್ಲಿ ಸಂಬಳದ ಮೊತ್ತವನ್ನು ಸೇರಿಸುತ್ತಿದ್ದರು. ಸ್ವಂತ ಸಂಬಳದ ಅಂಕಿಅಂಶವನ್ನು ತಿರುಚುತ್ತಿದ್ದರು ಎಂದು ಕಂಪನಿ ಆರೋಪಿಸಿದೆ. ಇನ್ನೊಬ್ಬ ಉದ್ಯೋಗಿಯ ಕಂಪ್ಯೂಟರ್ ವ್ಯವಸ್ಥೆಯನ್ನು ಬಳಸಿಕೊಂಡು ಬ್ಯಾಂಕಿನ ಪೋರ್ಟಲ್ನಲ್ಲಿ ವೇತನದಾರರ ಫೈಲ್ ಅನ್ನು ನಿರ್ವಹಿಸುತ್ತಿದ್ದ ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಫೈಲ್ ಅನ್ನು ಅಪ್ಲೋಡ್ ಮಾಡಿದ ನಂತರ, ಅವರು ಅದನ್ನು ಸಿಸ್ಟಮ್ನಿಂದ ಅಳಿಸುತ್ತಿದ್ದ ಎಂದು ದೂರಲಾಗಿದೆ.
ವಿಚಾರಣೆ ವೇಳೆ ನಾಥ್ ಅವರು ತಮ್ಮ ಪತ್ನಿಯ ಖಾತೆಗೆ 3.6 ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾಯಿಸಿದ್ದು ಗೊತ್ತಾಗಿದೆ. ಸ್ವಂತ ಸಂಬಳವನ್ನೂ ಹೆಚ್ಚಿಸಿದ್ದಾರೆ. ಇದರಿಂದಾಗಿ ಕಂಪನಿಗೆ ಒಟ್ಟು 4.2 ಕೋಟಿ ರೂ.ಗಳ ನಷ್ಟವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.