Site icon Vistara News

ಜನರಿಂದ ನಕಾರಾತ್ಮಕತೆಯ ತಿರಸ್ಕಾರ, ಸಂಸತ್ತಲ್ಲಿ ಹತಾಶೆ ಪ್ರದರ್ಶಿಸದಿರಿ; ಪ್ರತಿಪಕ್ಷಗಳಿಗೆ ಮೋದಿ ಮನವಿ

Narendra Modi

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸದಸ್ಯರು ನರೇಂದ್ರ ಮೋದಿ ಅವರ ಪರವಾಗಿ ಘೋಷಣೆ ಕೂಗಿದ್ದಾರೆ. ಇನ್ನು ಅಧಿವೇಶನ ಆರಂಭಕ್ಕೂ ಮುನ್ನ ನರೇಂದ್ರ ಮೋದಿ (Narendra Modi) ಅವರು ವಿಧಾನಸಭೆ ಚುನಾವಣೆ ಫಲಿತಾಂಶದ (Assembly Election Results 2023) ಕುರಿತು ಮಾತನಾಡಿದರು. “ದೇಶದ ಜನ ನಕಾರಾತ್ಮಕತೆಯನ್ನು ತಿರಸ್ಕಾರ ಮಾಡಿದ್ದಾರೆ. ಇದರ ಹತಾಶೆಯನ್ನು ಪ್ರತಿಪಕ್ಷಗಳು ಸಂಸತ್ತಿನಲ್ಲಿ ಪ್ರದರ್ಶಿಸಬಾರದು. ಸುಗಮವಾಗಿ ಕಲಾಪಗಳು ನಡೆಯಲು ಅನುವು ಮಾಡಿಕೊಡಬೇಕು” ಎಂದು ಮನವಿ ಮಾಡಿದರು.

“ಸಂಸತ್ತಿನ ಎಲ್ಲ ಸದಸ್ಯರು ಪೂರ್ವ ತಯಾರಿ ಮಾಡಿಕೊಂಡು ಸಂಸತ್‌ ಕಲಾಪಗಳಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡುತ್ತೇನೆ. ಇನ್ನು ದೇಶದ ಜನ ಪ್ರತಿಪಕ್ಷಗಳ ನಕಾರಾತ್ಮಕತೆಯನ್ನು ತಿರಸ್ಕರಿಸಿದ್ದಾರೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬದಲಾವಣೆಯಾಗಲು ಪ್ರತಿಪಕ್ಷಗಳಿಗೆ ಸಕಾಲ. ಪ್ರತಿಪಕ್ಷಗಳು ಕಳೆದ ಒಂಬತ್ತು ವರ್ಷಗಳಿಂದ ಹರಡುತ್ತಿರುವ ನಕಾರಾತ್ಮಕತೆಯನ್ನು ಬಿಟ್ಟು, ಸಕಾರಾತ್ಮಕ ಮನೋಭಾವ ಪ್ರದರ್ಶಿಸಲು ಇದು ಉತ್ತಮ ಅವಕಾಶ. ನೀವು ಸಂಸತ್ತಿನಲ್ಲಿ ಸೋಲಿನ ಹತಾಶೆಯನ್ನು ಪ್ರದರ್ಶಿಸಬಾರದು” ಎಂದು ಕೋರಿದರು.

“ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳ ಪಾತ್ರವು ದೊಡ್ಡದಿದೆ. ಪ್ರತಿಪಕ್ಷಗಳು ಸಂಸತ್‌ ಅಧಿವೇಶನ ಯಶಸ್ವಿಯಾಗಲು ಸಹಕರಿಸಬೇಕು. ಜನರ ಕಲ್ಯಾಣಕ್ಕಾಗಿ ಪ್ರತಿಪಕ್ಷಗಳು ಹೊಂದಿರುವ ಮಹತ್ವವನ್ನು ಅರಿಯಬೇಕು. ಸುಗಮ ಕಲಾಪಗಳಿಗೆ ಅವಕಾಶ ಮಾಡಿಕೊಡುವ ಮೂಲಕ ದೇಶದ ಅಭಿವೃದ್ಧಿಗೆ ಹಾದಿ ಮಾಡಿಕೊಡಬೇಕು. ಅಷ್ಟಕ್ಕೂ, ದೇಶವು ಅಭಿವೃದ್ಧಿಗೆ ಯಾವುದೇ ಅಡ್ಡಿಯನ್ನು ಬಯಸುವುದಿಲ್ಲ. ಪ್ರತಿಪಕ್ಷಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು” ಎಂದು ಮನವಿ ಮಾಡಿದರು.

ಸಂಸತ್ತಲ್ಲಿ ಮೋದಿ ಪರ ಘೋಷಣೆ

ನಾಲ್ಕು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಂಸತ್‌ನಲ್ಲಿ ಬಿಜೆಪಿ ಸದಸ್ಯರು ನರೇಂದ್ರ ಮೋದಿ ಪರವಾಗಿ ಘೋಷಣೆ ಕೂಗಿದರು. “ಮೂರನೇ ಬಾರಿಯೂ ಮೋದಿ ಸರ್ಕಾರ”, “ಪ್ರತಿ ಬಾರಿಯೂ ಮೋದಿ ಸರ್ಕಾರ” ಎಂಬ ಘೋಷಣೆಗಳನ್ನು ಕೂಗಿದರು. ಇನ್ನು ದೇಶದ ಸಮಸ್ಯೆಗಳನ್ನು ಇಟ್ಟುಕೊಂಡು ಆಡಳಿತ ಪಕ್ಷಕ್ಕೆ ಚಾಟಿ ಬೀಸಲು ಪ್ರತಿಪಕ್ಷಗಳು ಸಜ್ಜಾಗಿವೆ.

ಇದನ್ನೂ ಓದಿ: PM Narendra Modi: 3 ರಾಜ್ಯದ ಗೆಲುವು 2024ರ ಹ್ಯಾಟ್ರಿಕ್ ಜಯದ ಮುನ್ಸೂಚನೆ; ಮೋದಿ ಬಣ್ಣನೆ

ವಸಾಹತು ಕಾಲದ ಕ್ರಿಮಿನಲ್‌ ಕೋಡ್‌, ಜಸ್ಟಿಸ್‌ ಕೋಡ್‌ಗಳ ಬದಲಾವಣೆಗೆ ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಮೋದಿ ಸರ್ಕಾರ ಮುಂದಾಗಿರುವ ʼಅವಸಾಹತೀಕರಣ ಪ್ರಕ್ರಿಯೆʼಯಲ್ಲಿ ಕ್ರಿಮಿನಲ್ ಕೋಡ್‌ಗಳ ಬದಲಾವಣೆ ನಿರ್ಣಾಯಕ ಹೆಜ್ಜೆಯಾಗಿದೆ. ಭಾರತೀಯ ದಂಡ ಸಂಹಿತೆಯ (Indian Penal Code – IPC) ಬದಲಿಗೆ ಭಾರತೀಯ ನ್ಯಾಯ ಸಂಹಿತಾ (BNS) ವಿಧೇಯಕ- 2023 ಹಾಗೂ ಅಪರಾಧ ಪ್ರಕ್ರಿಯಾ ಸಂಹಿತೆ (Criminal procedure Code – CrPC) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ವಿಧೇಯಕ- 2023 ಮಂಡನೆಯಾಗಲಿವೆ. ಜತೆಗೆ ಭಾರತೀಯ ಸಾಕ್ಷಿ ಮಸೂದೆ (Bharatiya Sakshi Bill – BSB) ಕೂಡ ಮಂಡನೆಯಾಗಲಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version