ಹೈದರಾಬಾದ್: ‘ಹಣ ಕಂಡರೆ ಹೆಣ ಕೂಡ ಬಾಯಿಬಿಡುತ್ತದೆ’ ಎಂಬ ಮಾತನ್ನು ಆಧುನಿಕ ಕಾಲದಲ್ಲಿ ‘ಎಣ್ಣೆ (ಮದ್ಯ) ಕಂಡರೆ ಹೆಣ ಕೂಡ ಬಾಯಿಬಿಡುತ್ತದೆ’ ಎಂಬುದಾಗಿ ಬದಲಿಸಿಕೊಳ್ಳಬಹುದು. ಅಷ್ಟರಮಟ್ಟಿಗೆ ದೇಶದಲ್ಲಿ ಮದ್ಯಪ್ರಿಯರ ಸಂಖ್ಯೆ ಜಾಸ್ತಿಯಾಗಿದೆ. ಹೀಗೆ ಮದ್ಯಪ್ರಿಯರು ಜಾಸ್ತಿಯಾದ ಕಾಲಘಟ್ಟದಲ್ಲಿಯೇ ಆಂಧ್ರಪ್ರದೇಶದಲ್ಲಿ ಬಿಯರ್ ಬಾಟಲಿ ತುಂಬಿದ ಟ್ರಕ್‌ವೊಂದು ಪಲ್ಟಿಯಾಗಿದ್ದು, ಜನ ಮುಗಿಬಿದ್ದು ಕೈಗೆ ಸಿಕ್ಕಷ್ಟು ಬಿಯರ್ ಬಾಟಲಿ (Viral News) ಎತ್ತಿಕೊಂಡು ಪರಾರಿಯಾಗಿದ್ದಾರೆ.
ಹೌದು, ಸುಮಾರು 200 ಕೇಸ್‌ಗಳಿರುವ ಟ್ರಕ್ ಆಂಧ್ರಪ್ರದೇಶದ ಕಾಸಿಂಕೋಟಾ ಮಂಡಲ್ ಜಿಲ್ಲೆಯ ಬಯಾವರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಪಲ್ಟಿಯಾಗಿದೆ. ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಟ್ರಕ್ ಮಗುಚಿ ಬೀಳುತ್ತಲೇ ಬಿಯರ್ ಬಾಟಲಿಗಳು ರಸ್ತೆ ತುಂಬ ಬಿದ್ದಿವೆ. ಈ ಸುದ್ದಿ ತಿಳಿದ ಸುತ್ತಮುತ್ತಲಿನ ಜನ ಓಡಿಬಂದಿದ್ದಾರೆ. ಮುಗಿಬಿದ್ದು ಬಿಯರ್ ಬಾಟಲಿಗಳನ್ನು ಎತ್ತಿಕೊಂಡು ಓಡಿದ್ದಾರೆ.
ಟ್ರಕ್ ಮಗುಚಿ ಬೀಳುತ್ತಲೇ ಒಂದಷ್ಟು ಬಾಟಲಿಗಳು ಒಡೆದಿವೆ. ಆದರೂ, ಹೆಚ್ಚಿನ ಪ್ರಮಾಣದ ಬಾಟಲಿಗಳು ಇದ್ದ ಕಾರಣ ಬಾಟಲ್‌ಗಳು ಒಡೆದಿಲ್ಲ. ಹಾಗಾಗಿ, ನೂರಾರು ಮದ್ಯಪ್ರಿಯರು ಓಡೋಡಿ ಬಂದು ಕೈಗೆ ಸಿಕ್ಕಷ್ಟು ಬಿಯರ್ ಬಾಟಲಿಗಳನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ. ಇದಕ್ಕಾಗಿ ನೂಕುನುಗ್ಗಲು ಕೂಡ ಉಂಟಾಗಿದೆ ಎಂದು ತಿಳಿದುಬಂದಿದೆ. ಆದರೆ, ಲಕ್ಷಾಂತರ ರೂಪಾಯಿ ಮೌಲ್ಯದ ಬಿಯರ್ ರಸ್ತೆಪಾಲು ಆಗಿರುವುದಕ್ಕೆ, ಜನ ತೆಗೆದುಕೊಂಡು ಓಡಿಹೋಗಿರುವುದಕ್ಕೆ ಮಾಲೀಕ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Actor Sharwanand: ವೈವಾಹಿಕ ಜೀವನಕ್ಕೆ ಕಾಲಿಟ್ಟ ಟಾಲಿವುಡ್ ಖ್ಯಾತ ನಟ; ಮದುವೆಯ ಆನಂದದ ಫೋಟೊಗಳು ವೈರಲ್!
ಬಿಯರ್ ತುಂಬಿದ ಟ್ರಕ್ ಪಲ್ಟಿಯಾಗಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಮದ್ಯ ಸೇವಿಸುವವರು, ಸೇವಿಸದವರು ಕೂಡ ಟ್ರಕ್ ಬಿದ್ದ ಜಾಗಕ್ಕೆ ಓಡೋಡಿ ಬಂದಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾದ ಟ್ರಕ್ ಚಾಲಕ ಎಷ್ಟು ಬೇಡಿಕೊಂಡರೂ ಕೇಳದೆ ಜನ ಬಿಯರ್ ಬಾಟಲಿ ತೆಗೆದುಕೊಂಡು ಹೋಗಿದ್ದಾರೆ. ಇನ್ನು ಬಿಯರ್ ಬಾಟಲಿ ಖಾಲಿಯಾದ ಬಳಿಕ ಬಂದವರಿಗೆ ನಿರಾಸೆಯಾಗಿದೆ ಎಂದು ತಿಳಿದುಬಂದಿದೆ. ಫ್ರೀ ಆಗಿ ಬಿಯರ್ ಬಾಟಲಿ ಸಿಕ್ಕವರು ಮಾತ್ರ ಮಜಾ ಮಾಡುತ್ತಿದ್ದಾರೆ.