ಲಖನೌ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರುವುದು (Live In Relationship) ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. 19 ವರ್ಷದ ಯುವತಿಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ 17 ವರ್ಷದ ಬಾಲಕನ ವಿರುದ್ಧ ದಾಖಲಾದ ಪ್ರಕರಣದಲ್ಲಿ ಭದ್ರತೆ ನೀಡಬೇಕು ಎಂದು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರಲು 18 ವರ್ಷ ವಯಸ್ಸಾಗಿರಲೇಬೇಕು ಎಂದು ಸ್ಪಷ್ಟಪಡಿಸಿದೆ.
“ಲಿವ್ ಇನ್ ರಿಲೇಷನ್‌ಶಿಪ್ ಕೂಡ ಮದುವೆಯ ರೀತಿಯ ಸಂಬಂಧವಾಗಿದೆ. ಹಾಗಾಗಿ, ಯಾರೇ ಆಗಲಿ, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರಲು 18 ವರ್ಷ ಆಗಿರಬೇಕು. ಇದು ನೈತಿಕ ದೃಷ್ಟಿಯಿಂದ ಮಾತ್ರವಲ್ಲ, ಕಾನೂನು ದೃಷ್ಟಿಯಲ್ಲಿ ಕೂಡ ಅಪರಾಧವಾಗಿದೆ. ಹಾಗಾಗಿ, 17 ವರ್ಷದ ಬಾಲಕನು 19 ವರ್ಷದ ಯುವತಿ ಜತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರುವುದು ಅಕ್ರಮ. ಹಾಗಾಗಿ, ಆತನಿಗೆ ರಕ್ಷಣೆ ನೀಡಲು ಆಗುವುದಿಲ್ಲ” ಎಂದು ನ್ಯಾಯಮೂರ್ತಿಗಳಾದ ವಿವೇಕ್ ಕುಮಾರ್ ಬಿರ್ಲಾ ಹಾಗೂ ರಾಜೇಂದ್ರ ಕುಮಾರ್ -IV ನೇತೃತ್ವದ ನ್ಯಾಯಪೀಠ ತಿಳಿಸಿತು.
ಏನಿದು ಪ್ರಕರಣ?
17 ವರ್ಷದ ಅಲಿ ಅಬ್ಬಾಸ್ ಎಂಬ ಬಾಲಕನು 19 ವರ್ಷದ ಸಲೋನಿ ಯಾದವ್ ಎಂಬ ಯುವತಿ ಜತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ. ಆದರೆ, ಈತನು ಕೆಲ ದಿನಗಳ ಹಿಂದೆ ಸಲೋನಿ ಯಾದವ್ ಅವರನ್ನು ಅಪಹರಣ ಮಾಡಿದ್ದಾನೆ ಎಂದು ಯುವತಿಯ ಕುಟುಂಬಸ್ಥರು ಬಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ, ಸಲೋನಿ ಯಾದವ್ ಸಮ್ಮತಿಯಿಂದಲೇ ಅಲಿ ಅಬ್ಬಾಸ್ ಜತೆ ಬಂದಿದ್ದಾಳೆ ಎಂಬುದು ಬಾಲಕನ ಪರ ವಕೀಲರ ವಾದವಾಗಿದೆ. ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರುವುದು ಅಕ್ರಮ ಎಂದು ತಿಳಿಸಿದೆ.
ಇದನ್ನೂ ಓದಿ: ಲಿವ್ ಇನ್ ರಿಲೇಶನ್ಶಿಪ್ನಲ್ಲಿ ಇದ್ದವರಿಗೆ ಡಿವೋರ್ಸ್ ಕೊಡಲು ಸಾಧ್ಯವೇ ಇಲ್ಲ ಎಂದ ಕೇರಳ ಹೈಕೋರ್ಟ್
ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ಲಿವ್ ಇನ್ ರಿಲೇಷನ್‌ಶಿಪ್ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿತು. ʼಕಿರಣ್ ರಾವತ್ ವರ್ಸಸ್ ಸ್ಟೇಟ್ ಆಫ್ ಉತ್ತರ ಪ್ರದೇಶ 2023ʼ ಪ್ರಕರಣದಲ್ಲಿ 18 ವರ್ಷ ತುಂಬದ ಲಿವ್ ಇನ್ ರಿಲೇಷನ್‌ಶಿಪ್ ಅಮಾನ್ಯ ಎಂದು ಅಲಹಾಬಾದ್ ಹೈಕೋರ್ಟ್ ಆದೇಶಿಸಿತ್ತು. ಇದೇ ತೀರ್ಪನ್ನು ಅಲಿ ಅಬ್ಬಾಸ್ ಹಾಗೂ ಸಲೋನಿ ಯಾದವ್ ಪ್ರಕರಣದಲ್ಲೂ ಉಲ್ಲೇಖಿಸಿತು.