ನವದೆಹಲಿ: ವಿದೇಶಿ ಮಹಿಳೆಗೆ ಜನಿಸಿದ ವ್ಯಕ್ತಿ ಎಂದಿಗೂ ದೇಶಭಕ್ತನಾಗಲಾರ ಎಂದು ಬಿಜೆಪಿಯ ಸಂಸದ ಸಂಜಯ್ ಜೈಸ್ವಾಲ್ ಅವರು ರಾಹುಲ್ ಗಾಂಧಿ (Rahul Gandhi) ವಿರುದ್ಧ ವೈಯಕ್ತಿಕ ದಾಳಿ ಮಾಡಿದ್ದಾರೆ. ಈ ಮಾತುಗಳನ್ನು 2000 ವರ್ಷಗಳ ಹಿಂದೆ ಚಾಣಕ್ಯ ಹೇಳಿದ್ದಾನೆಂದು ತಮ್ಮ ನಿಂದನಾತ್ಮಕ ಹೇಳಿಕೆಯನ್ನು ಜೈಸ್ವಾಲ್ ಅವರು ಸಮರ್ಥಿಸಿಕೊಂಡಿದ್ದಾರೆ(BJP MPs Protest).
ರಾಹುಲ್ ಗಾಂಧಿ ಅವರು ದೇಶವನ್ನು ಅವಮಾನಿಸಿದ್ದಾರೆ. ಅವರಿಗೆ ನಮ್ಮ ಪ್ರಜಾಪ್ರಭುತ್ವ, ನ್ಯಾಯಾಲಯಗಳು ಮತ್ತು ಪತ್ರಕರ್ತರು ತಪ್ಪಾಗಿ ಕಾಣುತ್ತಾರೆ. ಅದರರ್ಥ ಅವರಿಗೆ ಭಾರತದ ಮೇಲೆ ನಂಬಿಕೆ ಇಲ್ಲ ಎಂದರ್ಥ ಎಂದು ಜೈಸ್ವಾಲ್ ಹೇಳಿದ್ದಾರೆ. ರಾಹುಲ್ ಅವರಿಗೆ ಅಪರಾಧದ ಚಾಳಿ ಇದೆ ಎಂದು ಅವರು ಹೇಳಿದ್ದಾರೆ.
ಮಾರ್ಚ್ 11ರಂದು, ಬಿಜೆಪಿಯ ಮ್ತತೊಬ್ಬ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಇದೇ ರೀತಿ ಹೇಳಿದ್ದರು. ನೀನು(ರಾಹುಲ್ ಗಾಂಧಿ) ಭಾರತದಿಂದ ಬಂದವನಲ್ಲ ಎಂದು ನಮಗೆ ಗೊತ್ತು. ವಿದೇಶಿ ಮಹಿಳೆಗೆ ಹುಟ್ಟಿದ ಮಗ ದೇಶಭಕ್ತನಾಗಲು ಸಾಧ್ಯವೇ ಇಲ್ಲ ಎಂದ ಚಾಣಕ್ಯ ಅವರ ಮಾತನ್ನು ರಾಹುಲ್ ಗಾಂಧಿ ಸಾಬೀತು ಮಾಡಿದ್ದಾರೆ ಎಂದು ಅವರು ಹೇಳಿದ್ದರು.
ಬಿಜೆಪಿ (BJP) ಸಂಸದರಿಂದ ಪ್ರತಿಭಟನೆ
ಮೋದಿ ಸರ್‌ನೇಮ್ ಮಾನಹಾನಿ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ, ಲೋಕಸಭೆಯಿಂದ ಅನರ್ಹವಾಗಿರುವ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದರು, ಸಂಸತ್ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ನಾಯಕ ಹಿಂದುಳಿದ ವರ್ಗದ ಜನರನ್ನು ಕಳ್ಳರು ಎಂದು ಕರೆಯುವ ಮೂಲಕ ಅವಮಾನಿಸಿದ್ದಾರೆ. ಅವರು ಇಡೀ ದೇಶಕ್ಕೆ ಕ್ಷಮೆ ಕೇಳಬೇಕು ಎಂದು ಬಿಜೆಪಿ ಸಂಸದರು ಆಗ್ರಹಿಸಿದ್ದಾರೆ.
ಬಿಜೆಪಿಯಿಂದ ಒಬಿಸಿ ಕ್ಯಾಂಪೇನ್
ಏಪ್ರಿಲ್ 6ರಿಂದ ಬಿಜೆಪಿ ದೇಶಾದ್ಯಂತ ಒಬಿಸಿ ಕ್ಯಾಂಪೇನ್ ಆರಂಭಿಸಲಿದೆ. ಅದಕ್ಕೆಸಂಬಂಧಿಸಿದ ಪೋಸ್ಟರ್ ಮತ್ತು ಪಾಂಪ್ಲೆಟ್ಸ್‌ಗಳನ್ನು ಬಿಜೆಪಿ ಮಂಗಳವಾರ ರಿಲೀಸ್ ಮಾಡಿತು. ಹರ್ಯಾಣ ಮನೇಸರ್ ಮೂಲಕ ಒಬಿಸಿ ಕ್ಯಾಂಪೇನ್‌ಗೆ ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಅವರು ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ: ಸತ್ಯ, ಧೈರ್ಯ, ಬಲಿದಾನವೇ ನಮ್ಮ ಕುಟುಂಬದ ಶಕ್ತಿ; ರಾಜೀವ್ ಗಾಂಧಿ ಶವಯಾತ್ರೆ ವಿಡಿಯೊ ಶೇರ್ ಮಾಡಿಕೊಂಡ ರಾಹುಲ್ ಗಾಂಧಿ
ಘರ್ ಘರ್ ಚಲೋ, ಗಾಂವ್ ಗಾಂವ್ ಚಲೋ ಒಬಿಸಿ ಅಭಿಯಾನಕ್ಕೆ ಜೆ ಪಿ ನಡ್ಡಾ ಚಾಲನೆ ನೀಡಲಿದ್ದಾರೆ. ಇದು ಬಿಜೆಪಿ ಸಂಸ್ಥಾಪನಾ ದಿನವಾದ ಏಪ್ರಿಲ್ 6 ರಿಂದ ಬಿಆರ್ ಅಂಬೇಡ್ಕರ್ ಜಯಂತಿಯ ಏಪ್ರಿಲ್ 14 ರವರೆಗೆ 1 ಕೋಟಿ ಹಳ್ಳಿಗಳನ್ನು ತಲುಪಲಿದೆ. ಪ್ರಧಾನಿ ಮೋದಿ ಒಬಿಸಿಗಳಿಗೆ ಏನು ಮಾಡಿದ್ದಾರೆ. ಯುಪಿಎ ಅವರಿಗಾಗಿ ಏನು ಮಾಡಿದೆ, ಕಾಂಗ್ರೆಸ್ ಅವರ ಹಿತಾಸಕ್ತಿಗಳನ್ನು ಹೇಗೆ ಹಾಳುಮಾಡಿದೆ ಎಂಬ ಸಂಗತಿಯನ್ನು ಜನರಿಗೆ ಮನವರಿಕೆ ಮಾಡಿಕೊಡಲಿದ್ದೇವೆ ಎಂದು ಬಿಜೆಪಿ ಒಬಿಸಿ ಮೋರ್ಚಾ ಮುಖ್ಯಸ್ಥ, ಸಂಸದ ಕೆ ಲಕ್ಷ್ಮಣ್ ಅವರು ಹೇಳಿದ್ದಾರೆ.