Site icon Vistara News

Pet Dog: ಟ್ರೆಕ್ಕಿಂಗ್ ಹೋದವರು ಶವವಾದರು; ಸ್ಥಳ ಬಿಟ್ಟು ಕದಲದ ಶ್ವಾನ

himachal pradesh

himachal pradesh

ಶಿಮ್ಲಾ: ಶ್ವಾನ ಮತ್ತು ಮಾನವ ನಡುವಿನ ಒಡನಾಟಕ್ಕೆ ಶತಮಾನಗಳ ಇತಿಹಾಸವಿದೆ. ನಂಬಿಕೆಯ ಪ್ರತೀಕವಾಗಿ ಶ್ವಾನವನ್ನು ಪರಿಗಣಿಸಲಾಗುತ್ತದೆ. ಅದಕ್ಕೆ ತಕ್ಕಂತೆ ಶ್ವಾನಗಳು ಕೂಡ ತಮ್ಮ ಯಜಮಾನರಿಗೆ ವಿಧೇಯವಾಗಿರುತ್ತವೆ. ಇದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ಅಂತಹದ್ದೇ ಇನ್ನೊಂದು ಉದಾಹರಣೆ ಇಲ್ಲಿದೆ. ಟ್ರೆಕ್ಕಿಂಗ್ ತೆರಳಿದ್ದ ಇಬ್ಬರು ಆಕಸ್ಮಿಕವಾಗಿ ಮೃತಪಟ್ಟಿದ್ದು, ಸುಮಾರು 48 ಗಂಟೆಗಳ ಕಾಲ ಶವಗಳ ಬಳಿಯೇ ಅವರು ಸಾಕಿದ್ದ ಜರ್ಮನ್‌ ಶೆಫರ್ಡ್‌ (German Shepherd) ನಾಯಿ (Pet Dog) ಕಾದು ಕುಳಿತ್ತಿತ್ತು.

ಹಿಮಾಚಲ ಪ್ರದೇಶದ ಬಿರ್‌ ಬಿಲ್ಲಿಂಗ್‌ನಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಟ್ರೆಕ್ಕಿಂಗ್‌ಗೆ ತೆರಳಿದ್ದ ಓರ್ವ ಮಹಿಳೆ ಮತ್ತು ಓರ್ವ ಪುರುಷ ಮೃತಪಟ್ಟಿದ್ದರು. ಅವರ ಜತೆ ತೆರಳಿದ್ದ ಈ ಸಾಕು ನಾಯಿ ಎರಡು ದಿನಗಳಿಂದ ಎಲ್ಲೂ ತೆರಳದೆ ಶವದ ಬಳಿಯೇ ಕಾವಲು ಕಾಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ

ಪಂಜಾಬ್‌ ಪಥನ್‌ಕೋಟ್‌ನ ಅಭಿನಂದನ್‌ ಗುಪ್ತ (30) ಮತ್ತು ಪುಣೆಯ ಪ್ರಣಿತಾ ವಾಲ (26) ಟ್ರಕ್ಕಿಂಗ್‌ಗೆ ತೆರಳಿ ಮೃತಪಟ್ಟವರು. ಬೆಟ್ಟದ ಮೇಲಿನಿಂದ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಪೋಸ್ಟ್‌ ಮಾರ್ಟಮ್‌ ಬಳಿಕವಷ್ಟೇ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಮುದ್ರ ಮಟ್ಟದಿಂದ ಸುಮಾರು 5,000 ಅಡಿ ಎತ್ತರದಲ್ಲಿರುವ ಬಿರ್‌ ಬಿಲ್ಲಿಂಗ್‌ ಟ್ರೆಕ್ಕಿಂಗ್‌ ಪ್ರಿಯರ ನೆಚ್ಚಿನ ತಾಣ. ʼʼಅಭಿನಂದನ್‌ ಗುಪ್ತ ಸುಮಾರು ನಾಲ್ಕು ವರ್ಷಗಳಿಂದ ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದು, ಟ್ರಕ್ಕಿಂಗ್‌ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಟ್ರೆಕ್ಕಿಂಗ್‌ ಉದ್ದೇಶದಿಂದ ಪುಣೆಯಿಂದ ಪ್ರಣಿತಾ ವಾಲ ಕೆಲವು ದಿನಗಳ ಹಿಂದೆ ಇಲ್ಲಿಗೆ ಆಗಮಿಸಿದ್ದರುʼʼ ಎಂದು ಪೊಲೀಸ್‌ ಅಧಿಕಾರಿ ವೀರ್‌ ಬಹದ್ದೂರ್‌ ತಿಳಿಸಿದ್ದಾರೆ.

ʼʼಆರಂಭದಲ್ಲಿ ನಾಲ್ಕು ಜನರನ್ನು ಒಳಗೊಂಡ ಗುಂಪು ಕಾರಿನಲ್ಲಿ ಹೊರಟಿತ್ತು. ಬಳಿಕ ಅವರು ನಡಿಗೆಯ ಮೂಲಕ ಬೆಟ್ಟ ಹತ್ತಲು ಪ್ರಾರಂಭಿಸಿದರು. ಆಗ ಇದ್ದಕ್ಕಿದ್ದಂತೆ ಹವಾಮಾನ ವೈಪರೀತ್ಯ ಕಂಡು ಬಂದಿದ್ದು, ಇಬ್ಬರು ಸುರಕ್ಷಿತವಾಗಿ ಮರಳಿದ್ದರು. ಅಭಿನಂದನ್‌ ಗುಪ್ತ, ಪ್ರಣಿತಾ ವಾಲ ಮತ್ತು ಅವರ ಸಾಕು ನಾಯಿ ಬೆಟ್ಟದಲ್ಲಿಯೇ ಬಾಕಿಯಾಗಿದ್ದರುʼʼ ಎಂದು ಘಟನೆಯನ್ನು ವೀರ್‌ ಬಹದ್ದೂರ್‌ ವಿವರಿಸಿದ್ದಾರೆ.

ಅಭಿನಂದನ್‌ ಗುಪ್ತ ಮತ್ತು ಪ್ರಣಿತಾ ವಾಲ ನಾಪತ್ತೆಯಾಗಿರುವ ಕುರಿತು ಇತರರು ದೂರು ದಾಖಲಿಸಿದ್ದರು. ಹುಡುಕಾಟ ಆರಂಭಿಸಿದ ತಂಡಕ್ಕೆ ಸ್ಟಾರ್ಟಿಂಗ್‌ ಪಾಯಿಂಟ್‌ಯಿಂದ ಸುಮಾರು 3 ಕಿ.ಮೀ. ದೂರದಲ್ಲಿ ಇಬ್ಬರ ಶವ ಪತ್ತೆಯಾಗಿತ್ತು. “ಇದು ಕಡಿದಾದ ಪ್ರದೇಶವಾಗಿದ್ದು, ಹಿಮಪಾತದ ಸಮಯದಲ್ಲಿ ಜಾರುತ್ತದೆ. ಹೀಗಾಗಿ ಅವರು ಜಾರಿ ಬಿದ್ದಿರುವ ಸಾಧ್ಯತೆ ಇದೆ. ಶವ ಇರುವ ಜಾಗಕ್ಕೆ ತೆರಳಿದಾಗ ಅಲ್ಲಿ ಜರ್ಮನ್ ಶೆಫರ್ಡ್ ಶ್ವಾನ ಕಾದು ಕುಳಿತಿತ್ತುʼʼ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: Viral News: 22 ವರ್ಷದ ಹಿಂದೆ ಕಾಣೆಯಾಗಿದ್ದ ಮಗ ಸನ್ಯಾಸಿಯಾಗಿ ಮರಳಿದ!

ಎಚ್ಚರಿಕೆಯಿಂದ ಇರಲು ಪ್ರವಾಸಿಗರಿಗೆ ಸೂಚನೆ

“ಕಾಂಗ್ರಾ ಜಿಲ್ಲೆಯಲ್ಲಿ ಭಾರಿ ಹಿಮಪಾತವಾಗುತ್ತಿದೆ ಮತ್ತು ಹವಾಮಾನವು ವೇಗವಾಗಿ ಬದಲಾಗುತ್ತಿದೆ. ಆದ್ದರಿಂದ ಪ್ರವಾಸಿಗರು ಸ್ಥಳೀಯ ನಿವಾಸಿ ಅಥವಾ ಈ ಪ್ರದೇಶದ ಬಗ್ಗೆ ಜ್ಞಾನ ಹೊಂದಿರುವ ಮಾರ್ಗದರ್ಶಿಯೊಂದಿಗೆ ಮಾತ್ರ ತೆರಳಬೇಕು. ಇಲ್ಲಿ ನೆಟ್‌ವರ್ಕ್‌ ಕೂಡ ಸಮರ್ಪಕವಾಗಿ ದೊರೆಯುವುದಿಲ್ಲ. ಹೀಗಾಗಿ ಸಾಕಷ್ಟು ಎಚ್ಚರಿಕೆ ವಹಿಸಬೇಕುʼʼ ಎಂದು ವೀರ್‌ ಬಹದ್ದೂರ್‌ ಕಿವಿ ಮಾತು ಹೇಳುತ್ತಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version