Site icon Vistara News

ಆಗ್ರಾ ಜಾಮಾ ಮಸೀದಿಯಲ್ಲೂ ದೇವರ ಮೂರ್ತಿ ಇರಬಹುದಾ? ಉತ್ಖನನ ಕೋರಿ ಹೈಕೋರ್ಟ್‌ಗೆ ಅರ್ಜಿ

Agra jama masjid

ಅಲಹಾಬಾದ್‌: ದೇಶದ ಕೆಲವೇ ವಿವಾದಾತ್ಮಕ ಸ್ಥಳಗಳಲ್ಲಿ ಉತ್ಖನನ ಮಾಡಿ ಸತ್ಯಶೋಧನೆ ಮಾಡಿದರೆ ಸಾಕು, ಇರುವ ಎಲ್ಲ ಹಳೆ ಮಸೀದಿಗಳನ್ನು ಒಡೆದು ಶಿವಲಿಂಗಕ್ಕಾಗಿ ಹುಡುಕಾಟ ನಡೆಸುವುದು ಬೇಡ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಮೋಹನ್‌ ಭಾಗವತ್‌ ಅವರು ಸಲಹೆ ನೀಡಿದ ನಡುವೆಯೇ ಇನ್ನೂ ಕೆಲವೊಂದು ಕಡೆ ವಿವಾದಗಳನ್ನು ಕೆಣಕುವ ಪ್ರಯತ್ನ ನಡೆಯುತ್ತಿದೆ.

ಉತ್ತರ ಪ್ರದೇಶದ ಆಗ್ರಾದ ಜಾಮಾ ಮಸೀದಿಯ ಮೆಟ್ಟಿಲುಗಳನ್ನು ಹಿಂದೂ ದೇವರ ಮೂರ್ತಿಯ ಮೇಲೆ ನಿರ್ಮಿಸಲಾಗಿದೆ. ಹೀಗಾಗಿ ಈ ಭಾಗದಲ್ಲಿ ಉತ್ಖನನ ನಡೆಸುವಂತೆ ಪ್ರಾಚ್ಯವಸ್ತು ಇಲಾಖೆಗೆ ಆದೇಶ ನೀಡಬೇಕು ಎಂದು ಕೋರಿ ಅಲಹಾಬಾದ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ನ್ಯಾಯವಾದಿಯಾಗಿರುವ ವರುಣ್‌ ಕುಮಾರ್‌ ಎಂಬವರು ಸಲ್ಲಿಸಿರುವ ದಾವೆಯಲ್ಲಿ, ಮೆಟ್ಟಿಲುಗಳ ಅಡಿಯಲ್ಲಿ ಠಾಕೂರ್‌ ಕೇಶವ್‌ ದೇವ್‌ ಜಿ ಅವರ ವಿಗ್ರಹವನ್ನು ಅಡಗಿಸಿಟ್ಟಿರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಕುಮಾರ್‌ ಇದೇ ರೀತಿಯ ಇನ್ನೊಂದು ಅರ್ಜಿಯನ್ನು ಮಥುರಾದ ಸಿವಿಲ್‌ ನ್ಯಾಯಾಧೀಶರ ಕೋರ್ಟ್‌ನಲ್ಲಿ ಸಲ್ಲಿಸಿದ್ದರು. ಅದರ ವಿಚಾರಣೆ ಇನ್ನೂ ನಡೆದಿಲ್ಲ.

ಆಗ್ರಾದ ಶಾಹಿ ಜಾಮಾ ಮಸೀದಿಯಲ್ಲಿ ಉತ್ಖನನ ನಡೆಸಲು ಪ್ರಾಚ್ಯ ವಸ್ತು ಇಲಾಖೆಗೆ ಆದೇಶ ನೀಡಬೇಕು ಎಂದು ಕೋರಿ ೨೦೨೧ರ ಏಪ್ರಿಲ್‌ ೧೪ರಂದು ಮಥುರಾ ಸಿವಿಲ್‌ ಕೋರ್ಟ್‌ನಲ್ಲಿ ದಾವೆ ಸಲ್ಲಿಸಿದ್ದೆವು. ಆದರೆ, ಕೋರ್ಟ್‌ ಇನ್ನೂ ವಿಚಾರಣೆ ನಡೆಸಿಲ್ಲ ಎಂದು ನ್ಯಾಯವಾದಿ ಶೈಲೇಂದ್ರ ಸಿಂಗ್‌ ಹೇಳಿದ್ದಾರೆ.

ಜಾಮಾ ಮಸೀದಿ ಭಕ್ತರು ಹೇಳೋದೇನು?
ಈ ದಾವೆಗೆ ಪ್ರತಿಕ್ರಿಯಿಸಿರುವ ಶಾಹಿ ಜಾಮಾ ಮಸೀದಿಯ ಭಕ್ತರಾಗಿರುವ ಇಮಾನುದ್ದೀನ್‌ ಎಂಬವರು, ʻʻಜಾಮಾ ಮಸೀದಿಯ ಮೆಟ್ಟಿಲುಗಳ ಅಡಿಯಲ್ಲಿ ಯಾವುದೋ ಮೂರ್ತಿಯನ್ನು ಅಡಗಿಸಿಡಲಾಗಿದೆ ಎಂಬುದಕ್ಕೆ ಯಾವ ದಾಖಲೆಗಳೂ ಇದ್ದಂತಿಲ್ಲ. ಯಾರೋ ಹೇಳುತ್ತಾರೆ ಎಂದು ಯಾವ ಆಧಾರವೂ ಇಲ್ಲದೆ ಉತ್ಖನನ ನಡೆಸುವುದು ಸರಿಯಲ್ಲʼʼ ಎಂದಿದ್ದಾರೆ.

ಶಾಹಿ ಇಮಾಮ್‌ ಮಸೀದಿ ಹಿನ್ನೆಲೆ
ಜಹಾನ್‌ ಆರಾ ಮಸೀದಿ ಎಂದೂ ಕರೆಯಲಾಗುವ ಶಾಹಿ ಜಾಮಾ ಮಸೀದಿಯನ್ನು ಷಹಜಹಾನ್‌ನ ಮಗಳು ಜಹಾನ್‌ ಆಹಾ ಕಟ್ಟಿಸಿದಳು ಎಂದು ಹೇಳಲಾಗುತ್ತಿದೆ. ತನ್ನ ಮದುವೆಗೆಂದು ತೆಗೆದಿಟ್ಟಿದ್ದ ಹಣವನ್ನು ಆಕೆ ಮಸೀದಿ ಕಟ್ಟಲು ವಿನಿಯೋಗಿಸಿದ್ದಳು ಎನ್ನಲಾಗಿದೆ.

ಪ್ರಚಾರ ಪಡೆಯಲು ಪ್ರಯತ್ನ
ಸ್ಥಳೀಯರಾಗಿರುವ, ಹಿಂದೂಸ್ತಾನಿ ಬಿರಾದಾರಿ ಸಂಸ್ಥೆಯ ಉಪಾಧ್ಯಕ್ಷ ವಿಶಾಲ್‌ ಶರ್ಮ ಅವರ ಪ್ರಕಾರ, ಕೆಲವರು ಸಮಾಜದಲ್ಲಿರುವ ಸಾಮರಸ್ಯವನ್ನು ಕೆಡಿಸಲು ಈ ರೀತಿಯ ದಾವೆಗಳನ್ನು ಹೂಡುತ್ತಾರೆ. ಅಂಥವರಿಗೆ ಹೆಚ್ಚು ಪ್ರಚಾರ ಕೊಡಬಾರದು. ʻʻಐತಿಹಾಸಿಕವಾಗಿ ಕೆಲವೊಂದು ತಪ್ಪುಗಳು ಆಗಿರಲೂಬಹುದು. ಕೆಲವರಿಗೆ ಇದನ್ನೆಲ್ಲ ಸರಿ ಮಾಡಬೇಕು ಅಂತ ಅನಿಸಲೂ ಬಹುದು. ಆದರೆ, ಇದು ಸರಿಯಾದ ನಡೆಯಲ್ಲ. ಇದರಿಂದ ಹಿಂದೂ-ಮುಸ್ಲಿಮರ ನಡುವೆ ದ್ವೇಷ, ಅಸಹನೆಗಳನ್ನು ಸೃಷ್ಟಿಸುತ್ತದೆಯೇ ಹೊರತು ಬೇರೆ ಲಾಭವೇನೂ ಇಲ್ಲ ಎಂದಿದ್ದಾರೆ.

ಉತ್ಖನನದ ಬದಲು ಬೇರೆ ಮಾರ್ಗ ಬಳಸಿ
ಇಂಥ ವಿವಾದಗಳು ಎದುರಾದಾಗ ಪ್ರತಿ ಬಾರಿಯೂ ಕಟ್ಟಡಗಳನ್ನು ಒಡೆದು ಶೋಧ ನಡೆಸುವುದಕ್ಕಿಂತ ವೈಜ್ಞಾನಿಕವಾದ ಬೇರೆ ದಾರಿಗಳನ್ನು ಹುಡುಕಿಕೊಳ್ಳಬೇಕು. ಎರಡೂ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂದು ಶರ್ಮಾ ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ| ಕುತುಬ್‌ ಮಿನಾರ್‌ ಸಂಕೀರ್ಣದಲ್ಲಿ ಮತ್ತೆ ನಮಾಜ್‌ಗೆ ಅವಕಾಶ ಕೋರಿದ ವಕ್ಫ್‌ ಅಧ್ಯಕ್ಷ

Exit mobile version