ವಾರಾಣಸಿ: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ (Petrol Diesel Price) ಏರಿಕೆ ಕುರಿತು ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ತೈಲ ಕಂಪನಿಗಳಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ. “ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ನಿಯಂತ್ರಣದಲ್ಲಿದ್ದರೆ ಭಾರತದ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ಮಾಡಬೇಕು” ಎಂದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸೂಚಿಸಿದ್ದಾರೆ. ಹಾಗಾಗಿ, ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದರೆ ಭಾರತದಲ್ಲೂ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಧನ ಬೆಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಹಾಗೂ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ತೈಲ ಕಂಪನಿಗಳನ್ನು ಪ್ರಸ್ತಾಪಿಸಿದರು. “ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ನಿಯಂತ್ರಣವಾದರೆ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಸಬೇಕು ಎಂಬುದಾಗಿ ತೈಲ ಕಂಪನಿಗಳಿಗೆ ವಿಶೇಷ ಕೋರಿಕೆ” ಎಂದರು.
“ರಷ್ಯಾ ಹಾಗೂ ಉಕ್ರೇನ್ ಬಿಕ್ಕಟ್ಟಿನಿಂದಾಗಿ ಜಾಗತಿಕ ತೈಲ ಮಾರುಕಟ್ಟೆಗೆ ಹೊಡೆತ ಬಿತ್ತು. ಆದರೆ, 15 ತಿಂಗಳಿನಿಂದ ನಷ್ಟವಾದರೂ ತೈಲ ಕಂಪನಿಗಳು ಬೆಲೆಯೇರಿಕೆ ಮಾಡಿಲ್ಲ. ಕೇಂದ್ರ ಸರ್ಕಾರದ ಸೂಚನೆಯೇ ಇಲ್ಲದೆ ತೈಲ ಕಂಪನಿಗಳು ಬೆಲೆ ನಿಯಂತ್ರಣ ಮಾಡಿವೆ. 2022ರ ಏಪ್ರಿಲ್‌ನಿಂದಲೂ ತೈಲ ಕಂಪನಿಗಳು ಬೆಲೆಯಲ್ಲಿ ಬದಲಾವಣೆ ಮಾಡಿಲ್ಲ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ | Profit on petrol | ತೈಲ ಕಂಪನಿಗಳಿಗೆ ಪೆಟ್ರೋಲ್ ಮಾರಾಟದಲ್ಲಿ ಲೀಟರ್‌ಗೆ 10 ರೂ. ಲಾಭ, ಡೀಸೆಲ್‌ನಲ್ಲಿ 6.50 ರೂ. ನಷ್ಟ