ನವ ದೆಹಲಿ: 6 ತಿಂಗಳ ಅವಧಿಯಲ್ಲಿ ದೇಶದ ಸುಮಾರು 64 ಲಕ್ಷ ಅನಧಿಕೃತ ಫೋನ್ ಸಂಪರ್ಕವನ್ನು (Phone Connections) ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಫೇಸ್ ರೆಕಗ್ನಿಶನ್‌ನ(Facial recognition) ಸಹಾಯದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ದೂರ ಸಂಪರ್ಕ ಇಲಾಖೆ(DoT)ಯ ಸೆಂಟರ್ ಆಫ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (C-DoT) ಇದಕ್ಕಾಗಿ ASTR ಅಥವಾ Artificial Intelligence and Facial Recognition powered Solution for Telecom SIM Subscriber Verification ಉಪಕರಣವನ್ನು ಅಭಿವೃದ್ಧಿಪಡಿಸಿದೆ. ಈ ಉಪಕರಣ ಒಬ್ಬ ವ್ಯಕ್ತಿ ಅನುಮತಿಸಲಾದ ಸಂಖ್ಯೆಗಿಂತ ಹೆಚ್ಚಿನ ಸಿಮ್ ಕಾರ್ಡ್ ಖರೀದಿಸಲು ತನ್ನ ಫೋಟೊ ಬಳಸಿದ್ದರೆ ಅದನ್ನು ಪತ್ತೆ ಹಚ್ಚುತ್ತದೆ.
ದೂರ ಸಂಪರ್ಕ ಇಲಾಖೆಯ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ತನ್ನ ಆಧಾರ್ ಕಾರ್ಡ್ ಬಳಸಿ 9 ಬಾರಿ ಮಾತ್ರ ಸಿಮ್ ಕಾರ್ಡ್ ಖರೀದಿಸಬಹುದು. ಇದೀಗ ASTAR ಒಬ್ಬ ವ್ಯಕ್ತಿ ನೂರಾರು ಬಾರಿಯಲ್ಲ, ಸಾವಿರಾರು ಬಾರಿ ತನ್ನ ಹೆಸರಿನಲ್ಲಿ ದೂರವಾಣಿ ಸಂಪರ್ಕ ಹೊಂದಿರುವುದನ್ನು ಪತ್ತೆ ಹಚ್ಚಿದೆ.
ಕೋವಿಡ್-19 ವ್ಯಾಪಕವಾಗಿ ಕಾಣಿಸಿಕೊಂಡ ಸಮಯದಲ್ಲಿ ಸರ್ಕಾರಿ ಮತ್ತು ವಿವಿಧ ವಾಣಿಜ್ಯ ಸಂಸ್ಥೆಗಳು ಸ್ಪರ್ಶರಹಿತ ವ್ಯವಸ್ಥೆಗಾಗಿ ಮುಖ ಗುರುತಿಸುವಿಕೆಯಂತಹ ಪರ್ಯಾಯ ವಿಧಾನಗಳನ್ನು ಅಳವಡಿಸಿಕೊಂಡಿದ್ದವು. ಅಂದಿನಿಂದ ಈ ದೊಡ್ಡ ಡೇಟಾಬೇಸ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಭಾರತದ ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆ್ಯಕ್ಟ್ (Digital Personal Data Protection Act) ಅನ್ನು 2023ರ ಆಗಸ್ಟ್‌ನಲ್ಲಿ ಅಂಗೀಕರಿಸಲಾಯಿತಾದರೂ ಇನ್ನೂ ಜಾರಿಗೆ ಬಂದಿಲ್ಲ.
ಹೇಗೆ ಕೆಲಸ ಮಾಡುತ್ತದೆ?
ಫೋನ್ ನೋಂದಣಿ ಡೇಟಾಬೇಸ್‌ನಲ್ಲಿರುವ ವ್ಯಕ್ತಿಯ ಮುಖದ ವೈಶಿಷ್ಟ್ಯಗಳ ಹೋಲಿಕೆಯನ್ನು ಫೇಸ್ ರೆಕಗ್ನಿಶನ್ ಪತ್ತೆ ಮಾಡುತ್ತದೆ. ಯಾವುದೇ ವ್ಯಕ್ತಿ ಅನುಮತಿಸಲಾದ ಸಂಖ್ಯೆಯನ್ನು ಮೀರಿ ಫೋನ್ ಸಂಪರ್ಕವನ್ನು ಪಡೆದುಕೊಂಡಿದ್ದಾರೆಯೇ ಎಂದು ಕಂಡುಹಿಡಿಯಲು ಇದನ್ನು ಬಳಸಲಾಗುತ್ತದೆ.
ʼʼಭಾರತದಲ್ಲಿನ ಡೇಟಾಬೇಸ್ ಬಹಳ ಸಂಕೀರ್ಣವಾದ ಪ್ರಕ್ರಿಯೆ. ವಿಶ್ವದ ಯಾವ ದೇಶವೂ ಇಷ್ಟು ದೊಡ್ಡ ಡೇಟಾಬೇಸ್ ಅನ್ನು ಏಕಕಾಲದಲ್ಲಿ ಹೊಂದಿಲ್ಲ” ಎಂದು ಸಿ-ಡಾಟ್ ಸಿಇಒ ರಾಜ್‌ಕುಮಾರ್ ಉಪಾಧ್ಯಾಯ ತಿಳಿಸಿದ್ದಾರೆ. ʼʼತಮ್ಮ ಗುರುತು ಮರೆಮಾಚಿ ಕೆಲವರು ಸಿಮ್ ನೋಂದಣಿ ಮಾಡಿಕೊಂಡ ಉದಾಹರಣೆಯೂ ಇದೆ. ಒಬ್ಬ ವ್ಯಕ್ತಿ ವೇಷ ಧರಿಸಿ ಅನೇಕ ಸಿಮ್ ತೆಗೆದುಕೊಂಡಾಗಲೂ ಡೇಟಾಬೇಸ್ ಈ ಫೋಟೊಗಳಲ್ಲಿ ಹೋಲಿಕೆಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತದೆ. ನಾವು ಇದನ್ನು ಫೇಶಿಯಲ್ ವೆಕ್ಟರ್ (facial vector) ಎಂದು ಕರೆಯುತ್ತೇವೆ. ಪ್ರತಿಯೊಬ್ಬ ವ್ಯಕ್ತಿ ವಿಶಿಷ್ಟ ಫೇಶಿಯಲ್ ವೆಕ್ಟರ್ ಹೊಂದಿದ್ದಾರೆ. ವ್ಯಕ್ತಿಯ ತುಟಿ, ಕಣ್ಣುಗಳನ್ನು ಮರೆಮಾಚಲು ಸಾಧ್ಯವಿಲ್ಲ” ಎಂದು ಉಪಾಧ್ಯಾಯ ಹೇಳಿದ್ದಾರೆ.
ಪತ್ತೆಯಾದ ಬಳಿಕ ಮುಂದೇನು?
ʼʼಅಂತಹ ಪ್ರಕರಣಗಳನ್ನು ಪತ್ತೆ ಮಾಡಿದ ನಂತರ ಸಿ-ಡಾಟ್ ಸಂಬಂಧಪಟ್ಟ ಟೆಲಿಕಾಂ ಸೇವಾ ಪೂರೈಕೆದಾರರಿಗೆ ತಿಳಿಸುತ್ತದೆ. ಬಳಿಕ ಆ ವ್ಯಕ್ತಿಗೆ ನೋಟಿಸ್ ಕಳುಹಿಸಿ ಕೆವೈಸಿ ಪುರಾವೆ ಕೇಳಲಾಗುತ್ತದೆ. 60 ದಿನಗಳ ನಂತರ ಸರಿಯಾದ ಪುರಾವೆ ಒದಗಿಸದಿದ್ದರೆ ಸಂಪರ್ಕವನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಅಂತಹ ಸಿಮ್ ಕಾರ್ಡ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡುವ ಮಳಿಗೆಗಳ ವಿರುದ್ಧ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆʼʼ ಎಂದು ಉಪಾಧ್ಯಾಯ ತಿಳಿಸಿದ್ದಾರೆ.
ಇದನ್ನೂ ಓದಿ: Cyber Crime: ದೇಶದ 81.5 ಕೋಟಿ ನಾಗರಿಕರ ಕೋವಿಡ್ ಪರೀಕ್ಷಾ ಮಾಹಿತಿ ರಹಸ್ಯ ಮಾರಾಟ! ನಿಮ್ಮದೂ ಇರಬಹುದು!
ವ್ಯಾಟ್ಸ್‌ಆ್ಯಪ್ ಕನೆಕ್ಷನ್
”ವಂಚನೆಯ ಮೂಲಕ ಸಂಪರ್ಕ ಸಾಧಿಸಿದವರ ವ್ಯಾಟ್ಸ್‌ಆ್ಯಪ್ ಅನ್ನು ಕೂಡ ಗಮನಿಸಲಾಗುತ್ತದೆ. ಸಾಮಾನ್ಯವಾಗಿ ಸೈಬರ್ ಅಪರಾಧಗಳನ್ನು ಎಸಗಲು ಅಂತಹ ಸಂಪರ್ಕಗಳನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಂಡು ಬಳಿಕ ಸಿಮ್ ಕಾರ್ಡ್‌ಗಳನ್ನು ನಿಷ್ಕ್ರೀಯಗೊಳಿಸಲಾಗುತ್ತದೆ. ಆದರೆ ಈ ಅಪರಾಧಿಗಳು ತಮ್ಮ ವ್ಯಾಟ್ಸ್‌ಆ್ಯಪ್ ಪ್ರೊಫೈಲ್ ಅನ್ನು ನಿಷ್ಕ್ರಿಯಗೊಳಿಸುವುದಿಲ್ಲ. ಹೀಗಾಗಿ ನಾವು ಅಂತಹ ಅಪರಾಧಿಗಳ ವ್ಯಾಟ್ಸ್‌ಆ್ಯಪ್ ಪ್ರೊಫೈಲ್‌ಗಳನ್ನು ನಿಷ್ಕ್ರಿಯಗೊಳಿಸುತ್ತಿದ್ದೇವೆ” ಎಂದು ಉಪಾಧ್ಯಾಯ ವಿವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ