Site icon Vistara News

PhonePe: ಬೊಮ್ಮಾಯಿ ವಿರುದ್ಧದ ಪೇಸಿಎಂ ರೀತಿ ಮಧ್ಯಪ್ರದೇಶದಲ್ಲಿ ತಂತ್ರ ಬಳಸಿದ ಕಾಂಗ್ರೆಸ್‌ಗೆ ಫೋನ್‌ಪೇ ವಾರ್ನಿಂಗ್‌

PhonePe Warns Madhya Pradesh Congress Over Poster

PhonePay warns Congress of action over posters of CM in Madhya Pradesh

ಭೋಪಾಲ್‌: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್‌ ʼಪೇಸಿಎಂʼ ಅಭಿಯಾನ ಆರಂಭಿಸಿತ್ತು. ಪೇಟಿಎಂ ಕ್ಯೂಆರ್‌ ಕೋಡ್‌ಗೆ ಬೊಮ್ಮಾಯಿ ಫೋಟೊ ಲಗತ್ತಿಸಿ ಶೇ.40ರಷ್ಟು ಕಮಿಷನ್‌ ಸರ್ಕಾರ ಎಂದು ಟೀಕಿಸಿತ್ತು. ಆದರೆ, ಇದೇ ರೀತಿ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ ಮಾಡಿದ ರಣತಂತ್ರಕ್ಕೆ ಪೇಮೆಂಟ್‌ ಡಿಜಿಟಲ್‌ ಕಂಪನಿಯಾದ ಫೋನ್‌ಪೇ (PhonePe) ಖಡಕ್‌ ವಾರ್ನಿಂಗ್‌ ನೀಡಿದೆ.

ಮಧ್ಯಪ್ರದೇಶದಲ್ಲಿರುವ ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಸಮರ ಸಾರಿದೆ. ಫೋನ್‌ಪೆ ಜಾಹೀರಾತನ್ನು ಬಳಸಿಕೊಂಡು ಸಿಎಂ ವಿರುದ್ಧ ಅಭಿಯಾನ ಆರಂಭಿಸಿದೆ. ಫೋನ್‌ಪೇ ಲೋಗೊ, ಕ್ಯೂಆರ್ ಕೋಡ್‌ ಬಳಸಿಕೊಂಡು, ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಫೋಟೊ ಲಗತ್ತಿಸಿದೆ. ಅಲ್ಲದೆ, “ಶೇ.50ರಷ್ಟು ಕಮಿಷನ್‌ ಫೋನ್‌ಪೇ ಮಾಡಿ, ನಿಮ್ಮ ಕೆಲಸ ಮಾಡಿಕೊಳ್ಳಿ” ಎಂಬ ಘೋಷಣೆಯೂ ಪೋಸ್ಟರ್‌ನಲ್ಲಿದೆ. ಹಾಗಾಗಿ, ಫೋನ್‌ಪೇ ಕಂಪನಿಯು ಕಾಂಗ್ರೆಸ್‌ಗೆ ವಾರ್ನಿಂಗ್‌ ನೀಡಿದೆ.

ಫೋನ್‌ಪೇ ನೀಡಿದ ಎಚ್ಚರಿಕೆ ಏನು?

ಡಿಜಿಟಲ್‌ ಪೇಮೆಂಟ್ಸ್‌ ಕಂಪನಿಯಾದ ಫೋನ್‌ಪೇ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದೆ. “ಯಾವುದೇ ರಾಜಕೀಯ ಪಕ್ಷ ಅಥವಾ ಸಂಸ್ಥೆಗಳು ಅನಧಿಕೃತವಾಗಿ ಫೋನ್‌ಪೇ ಬ್ರ್ಯಾಂಡ್‌ ಲೋಗೊವನ್ನು ಬಳಸುವಂತಿಲ್ಲ. ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಹಭಾಗಿತ್ವ ಹೊಂದಿಲ್ಲ. ಫೋನ್‌ಪೇ ಲೋಗೊ ನಮ್ಮ ಕಂಪನಿಯ ಟ್ರೇಡ್‌ ಮಾರ್ಕ್‌ ಆಗಿದೆ. ಫೋನ್‌ಪೇ ಬೌದ್ಧಿಕ ಸಂಪತ್ತಿನ ಅನಧಿಕೃತ ಬಳಕೆಯ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತೇವೆ. ಮಧ್ಯಪ್ರದೇಶ ಕಾಂಗ್ರೆಸ್‌ ಘಟಕವು ಕೂಡಲೇ ನಮ್ಮ ಬ್ರ್ಯಾಂಡ್‌ ಲೋಗೊ ಇರುವ ಪೋಸ್ಟರ್‌ಗಳನ್ನು ತೆರವುಗೊಳಿಸಬೇಕು” ಎಂದು ಟ್ವೀಟ್‌ ಮೂಲಕ ಕಾಂಗ್ರೆಸ್‌ಗೆ ಕೋರಿದೆ.

ಕಾಂಗ್ರೆಸ್‌ ಪೋಸ್ಟರ್‌ಗಳು

ಇದನ್ನೂ ಓದಿ: PhonePe : ಫೋನ್‌ಪೇ ಬಳಕೆದಾರರು ಈಗ ವಿದೇಶಗಳಲ್ಲೂ ಯುಪಿಐ ಮೂಲಕ ಪೇಮೆಂಟ್‌ ಮಾಡಬಹುದು: ಕಂಪನಿ ಘೋಷಣೆ

ಮಧ್ಯಪ್ರದೇಶದಲ್ಲಿ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕಾಗಿ ಕಾಂಗ್ರೆಸ್‌ ರಣತಂತ್ರ ಮಾಡುತ್ತಿದೆ. ಕರ್ನಾಟಕದಲ್ಲಿ ಚುನಾವಣೆಗೂ ಮುನ್ನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಆರಂಭಿಸಿದ್ದ 40 ಪರ್ಸೆಂಟ್‌ ಸರ್ಕಾರ ಎಂಬ ಆರೋಪವು ಕಾಂಗ್ರೆಸ್‌ ಗೆಲುವಿನ ಕಾರಣಗಳಲ್ಲಿ ಒಂದಾಗಿದೆ. ಈಗ ಇದೇ ತಂತ್ರವನ್ನು ಮಧ್ಯಪ್ರದೇಶ ಕಾಂಗ್ರೆಸ್‌ ಅನುಸರಿಸುತ್ತಿದೆ. ಆದರೆ, ಅದಕ್ಕಾಗಿ ಫೋನ್‌ಪೇ ಲೋಗೊ ಬಳಸಿದ ಕಾರಣ ಡಿಜಿಟಲ್‌ ಪೇಮೆಂಟ್‌ ಕಂಪನಿಯು ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version