ರಾಂಚಿ: ಸಾಮಾನ್ಯವಾಗಿ ಅಪರಾಧಿಗಳು, ಕ್ರಿಮಿನಲ್‌ಗಳು, ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ಎಸಗಿದವರು ಪೊಲೀಸರಿಂದ, ಇ.ಡಿ ಅಧಿಕಾರಿಗಳಿಂದ ತಲೆಮರೆಸಿಕೊಂಡು ತಿರುಗಾಡುತ್ತಾರೆ. ಆದರೆ, ಭೂ ಹಗರಣ, ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವ ಜಾರ್ಖಂಡ್ (Jharkhand) ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren) ಅವರು ಇ.ಡಿ ಅಧಿಕಾರಿಗಳಿಂದ (ED Officials) ಕಣ್ಣುತಪ್ಪಿಸಿಕೊಂಡು ತಿರುಗಾಡುತ್ತಿದ್ದಾರೆ. ಬಂಧನ ಭೀತಿಯಲ್ಲಿರುವ ಹೇಮಂತ್ ಸೊರೆನ್ ಅವರೀಗ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ಇ.ಡಿ ಅಧಿಕಾರಿಗಳು 7 ಸಮನ್ಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಕಾರಣ ಅಧಿಕಾರಿಗಳು ಸೋಮವಾರ (ಜನವರಿ 29) ಜಾರ್ಖಂಡ್ ಭವನ, ಮೋತಿಲಾಲ್ ನೆಹರು ಮಾರ್ಗದಲ್ಲಿರುವ ಹೇಮಂತ್ ಸೊರೆನ್ ಅವರ ನಿವಾಸದಲ್ಲಿ ತಪಾಸಣೆ ನಡೆಸಿದ್ದಾರೆ. ಆದರೆ, ಹೇಮಂತ್ ಸೊರೆನ್ ಅವರು ಇ.ಡಿ ಅಧಿಕಾರಿಗಳಿಗೆ ಸಿಕ್ಕಿಲ್ಲ. ಮುಖ್ಯಮಂತ್ರಿಯ ಕುರಿತು ಅವರ ಕುಟುಂಬಸ್ಥರು ಯಾವುದೇ ಮಾಹಿತಿ ನೀಡಿಲ್ಲ. ಇದರಿಂದಾಗಿ ಮನೆಯಲ್ಲಿ ತಪಾಸಣೆ ನಡೆಸಿದ ಇ.ಡಿ ಅಧಿಕಾರಿಗಳು ವಾಪಸ್ ಆಗಿದ್ದಾರೆ. ಹಾಗೆಯೇ, ಅವರ ಮನೆಯಲ್ಲಿ ಒಂದು ಬಿಎಂಡಬ್ಲ್ಯೂ ಕಾರು ಹಾಗೂ 36 ಲಕ್ಷ ರೂ. ಜಪ್ತಿ ಮಾಡಿದ್ದಾರೆ.
#WATCH | Delhi: ED team leaves from Jharkhand Chief Minister Hemant Soren's residence pic.twitter.com/2MGnBFKl5O
— ANI (@ANI) January 29, 2024
ಇದನ್ನೂ ಓದಿ: ಜಾರ್ಖಂಡ ಶಾಸಕರು, ಸಚಿವರನ್ನೆಲ್ಲ ಕರೆದುಕೊಂಡು ಜಲಾಶಯಕ್ಕೆ ಹೋದ ಸಿಎಂ ಹೇಮಂತ್ ಸೊರೆನ್
ಸಿಎಂ ಮೊಬೈಲ್ ಸ್ವಿಚ್ಡ್‌ಆಫ್
ಹೇಮಂತ್ ಸೊರೆನ್ ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಅವರ ರಕ್ಷಣೆಗಾಗಿ ನಿಯೋಜನೆಗೊಂಡಿರುವ ಸಿಬ್ಬಂದಿಯ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿವೆ. ಏತನ್ಮಧ್ಯೆಯೇ, ಹೇಮಂತ್ ಸೊರೆನ್ ಅವರ ಚಾರ್ಟರ್ಡ್ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಅವರು ದೆಹಲಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಲ್ಲ ಮೂಲಗಳ ಪ್ರಕಾರ, ಹೇಮಂತ್ ಸೊರೆನ್ ಅವರು ಬಂಧನ ಭೀತಿಯಿಂದಾಗಿ ಕಾನೂನು ಸಲಹೆ ಪಡೆಯಲು ದೆಹಲಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಇ.ಡಿ ಅಧಿಕಾರಿಗಳ ವಿರುದ್ಧ ಅವರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಪ್ರಕರಣ?
ಭೂಮಿ ಹಗರಣ ಹಾಗೂ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಹೇಮಂತ್ ಸೊರೆನ್ ಅವರು ಇ.ಡಿ ಅಧಿಕಾರಿಗಳ ತನಿಖೆ ಎದುರಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಇ.ಡಿ ಅಧಿಕಾರಿಗಳು ಇದುವರೆಗೆ 7 ಬಾರಿ ಸಮನ್ಸ್ ನೀಡಿದರೂ ಸೊರೆನ್ ಅವರು ವಿಚಾರಣೆಗೆ ಹಾಜರಾಗಿಲ್ಲ. ಜನವರಿ 29 ಅಥವಾ 31ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಇ.ಡಿ ಸೂಚಿಸಿತ್ತು. ಇಲ್ಲದಿದ್ದರೆ, ವಶಕ್ಕೆ ಪಡೆದು ವಿಚಾರಣೆ ನಡೆಸುವುದಾಗಿ ಎಚ್ಚರಿಸಿತ್ತು. ಇದರಿಂದಾಗಿಯೇ ಸೊರೆನ್ ಅವರು ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮೊದಲು ಕೂಡ ಹೇಮತ್ ಸೊರೆನ್ ಅವರ ಒಡೆತನದ ಕಲ್ಲಿನ ಗಣಿಯ ಗುತ್ತಿಗೆಯ ಅವಧಿಯನ್ನು ಸೊರೆನ್ ಅವರೇ ವಿಸ್ತರಿಸಿಕೊಂಡಿದ್ದಾರೆ. ಇದು ಅಧಿಕಾರ ದುರುಪಯೋಗದ ಪರಮಾವಧಿಯಾಗಿದ್ದು, ಸ್ವಜನ ಪಕ್ಷಪಾತ ಎದ್ದು ಕಾಣುತ್ತಿದೆ. ಹಾಗಾಗಿ ಅವರನ್ನು ಅನರ್ಹಗೊಳಿಸಬೇಕು ಎಂದು ಬಿಜೆಪಿಯು ಚುನಾವಣೆ ಆಯೋಗಕ್ಕೆ ದೂರು ನೀಡಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ