ಕೋಲ್ಕತ್ತ: ಪಶ್ಚಿಮ ಬಂಗಾಳ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅಕ್ರಮದಲ್ಲಿ ಟಿಎಂಸಿ ಮಾಜಿ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ ಚಟರ್ಜಿ ಹೆಸರು ಕೇಳಿಬಂದಾಗಿನಿಂದಲೂ ಪಕ್ಷ ಇವರಿಬ್ಬರಿಂದಲೂ ಅಂತರ ಕಾಯ್ದುಕೊಂಡಿದೆ. ಅದರಲ್ಲೂ ಅರ್ಪಿತಾ ಮುಖರ್ಜಿಗೂ ಪಕ್ಷಕ್ಕೂ ಸಂಬಂಧವಿಲ್ಲ. ಆಕೆ ಟಿಎಂಸಿಯವಳೂ ಅಲ್ಲ ಎಂದೇ ಹೇಳಿಕೊಂಡು ಬರುತ್ತಿದೆ. ಆದರೆ ತೃಣಮೂಲ ಕಾಂಗ್ರೆಸ್ನ ಈ ಹೇಳಿಕೆಗಳಿಗೆ ತದ್ವಿರುದ್ಧವಾದ ಫೋಟೋಗಳು ಇದೀಗ ವೈರಲ್ ಆಗುತ್ತಿದ್ದು, ಸಹಜವಾಗಿಯೇ ಪಕ್ಷಕ್ಕೆ ಮುಜುಗರ ಉಂಟಾಗಿದೆ. ಟಿಎಂಸಿಯ ಚುನಾವಣಾ ಪ್ರಚಾರ ಸಭೆಗಳಲ್ಲಿ ಅರ್ಪಿತಾ ಮುಖರ್ಜಿ ಕೂಡ ಇರುವ ಫೋಟೋಗಳು ಇವಾಗಿದ್ದು, ಪಾರ್ಥ ಚಟರ್ಜಿಯೊಂದಿಗೆ ಅರ್ಪಿತಾ ವೇದಿಕೆ ಮೇಲೆ ಕುಳಿತುಕೊಂಡಿರುವುದನ್ನು , ಆಕೆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವುದನ್ನು ಫೋಟೋಗಳಲ್ಲಿ ನೋಡಬಹುದು. ಅಂದಹಾಗೇ, ಇದು ತೀರ ಹಳೆಯ ಫೋಟೋ ಕೂಡ ಅಲ್ಲ, 2021ರ ವಿಧಾನಸಭಾ ಚುನಾವಣೆಯ ವೇಳೆಯದ್ದು ಎಂದೂ ಹೇಳಲಾಗಿದೆ.
ಪಶ್ಚಿಮ ಬಂಗಾಳ ಶಾಲಾ ನೇಮಕಾತಿ ಹಗರಣ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿದೆ. ಅದರಲ್ಲೂ ಪಾರ್ಥ ಚಟರ್ಜಿ ಅರ್ಪಿತಾ ಮನೆಯಲ್ಲಿ ಸಿಕ್ಕ ನಗದು, ಚಿನ್ನಾಭರಣಗಳು ಎಲ್ಲರ ಹುಬ್ಬೇರಿಸುವಂತೆ ಮಾಡಿವೆ. ಜುಲೈ 23ರಂದು ರೇಡ್ ಶುರು ಮಾಡಿದ ಇಡಿ ಅಧಿಕಾರಿಗಳು ಅರ್ಪಿತಾ ಮುಖರ್ಜಿಗೆ ಸೇರಿದ ಮನೆಗಳಿಂದ ಇಲ್ಲಿಯವರೆಗೆ ವಶಪಡಿಸಿಕೊಂಡಿದ್ದು 50 ಕೋಟಿ ರೂ.ಗೂ ಅಧಿಕ ನಗದು. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳು. ಅಷ್ಟಲ್ಲದೆ, ರಾಶಿರಾಶಿ ಸೆಕ್ಸ್ ಟಾಯ್ಸ್ಗಳು ಕೂಡ ಸಿಕ್ಕಿವೆ.
ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಇಬ್ಬರನ್ನೂ ಇಡಿ ಬಂಧಿಸಿದೆ. ಇತ್ತ ಪಾರ್ಥ ಚಟರ್ಜಿಯನ್ನು ತೃಣಮೂಲ ಕಾಂಗ್ರೆಸ್ ಅಮಾನತು ಮಾಡಿದೆ. ಇಷ್ಟಾದರೂ ಅವರು, ಹಗರಣದಲ್ಲಿ ನನ್ನ ತಪ್ಪೇನೂ ಇಲ್ಲ. ನನ್ನ ವಿರುದ್ಧದ ಸಂಚು ಇದು ಎಂದಿದ್ದಾರೆ. ಆದರೆ ಅರ್ಪಿತಾ ಮುಖರ್ಜಿ ಇಡಿ ಅಧಿಕಾರಿಗಳ ಎದುರು ‘ನನಗೇನೂ ಗೊತ್ತಿಲ್ಲ. ಈ ಹಣವೆಲ್ಲ ಪಾರ್ಥನಿಗೇ ಸೇರಿದ್ದು’ ಎಂದಿದ್ದಾಳೆ.
ಇದನ್ನೂ ಓದಿ: ಅರ್ಪಿತಾ ಮುಖರ್ಜಿ ಬಗ್ಗೆ ಆಕೆಯ ಕಾರು ಚಾಲಕ ಹೇಳಿದ ಗುಟ್ಟು ಇದು; 4 ವಾಹನಗಳು ಏನಾದವು?