ನವದೆಹಲಿ: ಆಮೀರ್ ಖಾನ್ ನಟನೆಯ 3 ಈಡಿಯಟ್ಸ್ ಸಿನಿಮಾದ ಫುನ್ಸುಕ್ ವಾಂಗ್ಡು ಪಾತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಬೇರೊಬ್ಬರಿಗಾಗಿ ಕಾಲೇಜು ಓದಿ, ಊರಿಗೆ ಊರೇ ಗುಡಿ ಕೈಗಾರಿಕೆ, ಅನ್ವೇಷಣೆಗಳಿಂದ ಸ್ವಾವಲಂಬಿಯಾಗಿ ಮಾಡಿದ ವಿಜ್ಞಾನಿ ಫುನ್ಸುಕ್ ವಾಂಗ್ಡು ಪಾತ್ರವನ್ನು ಆಮೀರ್ ಖಾನ್ ನಿಭಾಯಿಸಿದ ರೀತಿಯೇ ಅಮೋಘ. ಆದರೆ, 3 ಈಡಿಯಟ್ಸ್ ಸಿನಿಮಾದ ಫುನ್ಸುಕ್ ವಾಂಗ್ಡು ನಿಜ ಜೀವನದಲ್ಲೂ ಸಿಕ್ಕಿದ್ದಾರೆ. ಹೌದು, ವ್ಯಕ್ತಿಯೊಬ್ಬ ‘ಮೊಬೈಲ್ ಗಿರಣಿʼಯನ್ನು ತಯಾರಿಸಿ, ಮನೆಮನೆಗೆ ತೆರಳಿ ಅವರಿಗೆ ಚನಾ ಸೇರಿ ಧಾನ್ಯ ಬೀಸಿ ಕೊಡುತ್ತಿರುವ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ (Viral Video) ಆಗಿದೆ.
ಹೌದು, ವ್ಯಕ್ತಿಯೊಬ್ಬ ಬೈಕ್‌ಗೆ ಹಿಟ್ಟಿನ ಗಿರಣಿಯನ್ನು ಅಳವಡಿಸಿ, ಬೈಕ್ ಮೂಲಕ ಜನರ ಮನೆಬಾಗಿಲಿಗೇ ಗಿರಣಿಯನ್ನು ತೆಗೆದುಕೊಂಡು ಹೋಗಿ, ಅವರು ನೀಡುವ ಧಾನ್ಯವನ್ನು ಬೀಸಿ, ಹಿಟ್ಟು ಮಾಡಿಕೊಟ್ಟು, ಅವರಿಂದ ಹಣ ಪಡೆದು ಒಳ್ಳೆಯ ಬ್ಯುಸಿನೆಸ್ ಮಾಡುತ್ತಿದ್ದಾನೆ. ಈ ವಿಡಿಯೊವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ನನ್ನ ತಾಯಿ ಈ ವಿಡಿಯೊವನ್ನು ಕಳುಹಿಸಿದ್ದಾರೆ. ಆಟಾ ಚಕ್ಕಿ ಮಷೀನ್ ತೆಗೆದುಕೊಂಡು ಮನೆಗೆ ಬಂದ ವ್ಯಕ್ತಿಯು ಬೀಸಿ, ಹಿಟ್ಟುಕೊಟ್ಟು ಹೋಗಿದ್ದಾನೆ. ಇದು ಅದ್ಭುತ ಅನ್ವೇಷಣೆ” ಎಂದು ಬರೆದುಕೊಂಡಿದ್ದಾರೆ.
ಇಲ್ಲಿದೆ ನೋಡಿ ವಿಡಿಯೊ
My mom sent me this video. This guy came to my home with this ‘Atta Chakki Machine.’
— Awanish Sharan 🇮🇳 (@AwanishSharan) June 9, 2023
What an innovation. pic.twitter.com/bSnpcawgZR
ಅವನೀಶ್ ಶರಣ್ ಅವರು ವಿಡಿಯೊ ಟ್ವೀಟ್ ಮಾಡುತ್ತಲೇ ಜನ ತರಹೇವಾರಿಯಾಗಿ ಪ್ರತಿಕ್ರಿಯಿಸಿದ್ದಾರೆ. “ಇವರು ನಿಜ ಜೀವನದ ಫುನ್ಸುಕ್ ವಾಂಗ್ಡು” ಎಂದು ಒಬ್ಬರು ಪ್ರತಿಕ್ರಿಯಿಸಿದರೆ, “ಅವಶ್ಯಕತೆಯೇ ಅನ್ವೇಷಣೆಯ ತಾಯಿ. ಈ ವ್ಯಕ್ತಿಗೆ ಇನ್ನಷ್ಟು ಅನ್ವೇಷಣಾ ಶಕ್ತಿ ಸಿಗಲಿ” ಎಂದು ಮತ್ತೊಬ್ಬರು ಆಶಿಸಿದ್ದಾರೆ. “ನಾವು ಇಂತಹ ಅನ್ವೇಷಣೆ ಮಾಡಿದವರು, ಅದ್ಭುತ ಪ್ರತಿಭೆ ಇರುವವರಿಗೆ ಪ್ರೋತ್ಸಾಹ ನೀಡಬೇಕು. ಮಾರುಕಟ್ಟೆಯಲ್ಲಿ ಇಂತಹ ಉತ್ಪನ್ನಗಳಿಗೆ ಬೆಲೆ ಸಿಗುವಂತಾಗಬೇಕು” ಎಂದು ಇನ್ನೊಬ್ಬರು ಅಭಿಪ್ರಾಯ ತಿಳಿಸಿದ್ದಾರೆ.
ಇದನ್ನೂ ಓದಿ: WTC Final 2023 : ವಿರಾಟ್ ಔಟಾಗುತ್ತಿದ್ದಂತೆ ಆಘಾತಕ್ಕೆ ಒಳಗಾದ ಪತ್ನಿ ಅನುಷ್ಕಾ! ವಿಡಿಯೊ ವೈರಲ್
ಹಿಟ್ಟಿನ ಗಿರಣಿ ಎಂದರೆ ಮಹಿಳೆಯರು ಗಿರಣಿಯತನಕ ನಡೆದುಕೊಂಡು ಹೋಗಿ, ಅಲ್ಲಿ ಬೀಸಿಕೊಂಡು ಬರಬೇಕಿತ್ತು. ಆದರೆ, ಹೀಗೆ ಮನೆಗೇ ಹಿಟ್ಟಿನ ಗಿರಣಿ ಬಂದು, ಬೀಸಿಕೊಟ್ಟು ಹೋದರೆ ಹೆಣ್ಣುಮಕ್ಕಳಿಗೆ ಸಮಯ ಹಾಗೂ ಶ್ರಮ ಉಳಿಯುತ್ತದೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಒಟ್ಟಿನಲ್ಲಿ, ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಹಾಗೂ ಇಂತಹ ಪ್ರತಿಭೆಗಳಿಗೆ ಸರಿಯಾದ ಪ್ರೋತ್ಸಾಹವೂ ಸಿಗುತ್ತಿಲ್ಲ ಎಂಬುದಕ್ಕೆ ಈ ವಿಡಿಯೊ ನಿದರ್ಶನವಾಗಿದೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ