ನವದೆಹಲಿ: ಅಮಾನತುಗೊಂಡಿರುವ ದಿಲ್ಲಿ ಸರ್ಕಾರದ ಹಿರಿಯ ಅಧಿಕಾರಿ, ಆರೋಪಿ ಪ್ರೇಮೋದಯ್ ಖಾಖಾ (Accused Premoday Khakha) ಪ್ರತಿ ಬಾರಿಯು ಬಾಲಕಿ ಮೇಲೆ ಅತ್ಯಾಚಾರ (Physical Abuse) ಮಾಡುವ ಮುಂಚೆ ಆಕೆಗೆ ಮಾದಕ ವಸ್ತು (Drugged Friend’s Teen Daughter) ನೀಡುತ್ತಿದ್ದ. ಆಕೆಗೆ ಎಚ್ಚವಾದಾಗ ಆಕೆಯ ದೇಹದ ಮೇಲೆ ಗಾಯಗಳಿರುತ್ತಿದ್ದವು ಎಂದು ದಿಲ್ಲಿ ಪೊಲೀಸರು (Delhi Police) ತಿಳಿಸಿದ್ದಾರೆ. ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಮ್ಮ ಸ್ನೇಹಿತನ ಮಗಳ ಮೇಲೆ ನಡೆಸಿದ ಈ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದಷ್ಟೂ ಆಘಾತಕಾರಿ ಸಂಗತಿಗಳು ಬಯಲಾಗುತ್ತಿವೆ. ಹಲವು ಬಾರಿ ಅತ್ಯಾಚಾರಕ್ಕೊಳಗಾಗಿರುವ 14 ವರ್ಷದ ಬಾಲಕಿಯ ತಂದೆ ಕೊರೊನಾ ಸಂಕ್ರಾಮಿಕದ ವೇಳೆ 2020ರಲ್ಲಿ ನಿಧನರಾಗಿದ್ದರು. ತಂದೆ ನಿಧನದ ಬಳಿಕ ಬಾಲಕಿ ಖಿನ್ನತೆಗೆ ಜಾರಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ದೆಹಲಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ.
ಆರೋಪಿ ಅಧಿಕಾರಿಯು 2020 ಅಕ್ಟೋಬರ್ 31ರಂದು ಬಾಲಕಿ ಮೇಲೆ ಮೊದಲ ಬಾರಿಗೆ ರೇಪ್ ಮಾಡಿದ್ದಾನೆ. ಅಂದರೆ, ತಂದೆ ಸತ್ತ ಮಾರನೇ ದಿನವೇ ಈ ಅತ್ಯಾಚಾರ ನಡೆದಿದೆ. ಬಾಲಕಿಯು ತಂದೆಯ ನಿಧನದಿಂದ ಆಘಾತಕ್ಕೊಳಗಾಗಿದ್ದಳು. ಅದೇ ಸಂದರ್ಭವನ್ನು ಆರೋಪಿ ಬಳಸಿಕೊಂಡಿದ್ದಾನೆ. ಈಶಾನ್ಯ ದಿಲ್ಲಿಯ ಬುರಾರಿಯಲ್ಲಿರುವ ಆರೋಪಿ ಖಾಖಾ ಮನೆಯಲ್ಲೇ ಇದು ನಡೆದಿದೆ. ಇದೇ ವೇಳೆ, ತಮ್ಮ ಆರೈಕೆಯಲ್ಲಿ ಮಗಳು ಸುರಕ್ಷಿತವಾಗಿದ್ದಾಳೆ ಎಂಬುದನ್ನು ತಾಯಿಗೆ ಮನವರಿಕೆ ಮಾಡಿಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುರಾರಿಯ ಆರೋಪಿಯ ಮನೆಯಲ್ಲಿ ವಾಸವಾಗಿದ್ದಾಗ ಕನಿಷ್ಠ ಒಂದುಕ್ಕಿಂತ ಹೆಚ್ಚು ಬಾರಿ ಅಧಿಕಾರಿಯಿಂದ ಬಾಲಕಿ ಅತ್ಯಾಚಾರಕ್ಕೊಳಗಾಗಿದ್ದಾಳೆ. ಬಳಿಕ ಬಾಲಕಿ ಜಾರ್ಖಂಡ್‌ನಲ್ಲಿರುವ ತನ್ನ ಮನೆಗೆ ಹೋಗಿದ್ದಾಳೆ. ಕುಟುಂಬ ಕಾರ್ಯಕ್ರಮಕ್ಕಾಗಿ ಬಾಲಕಿ ಹೋಗಿದ್ದಳು. ಬಳಿಕ ಮತ್ತೆ ಖಾಖಾ ಮನೆಗೆ ಹಿಂದಿರುಗಲಿಲ್ಲ. ಮನೆ ಮತ್ತು ಚರ್ಚ್‌ನಲ್ಲೂ ಆರೋಪಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಬಾಲಕಿ ತಿಳಿಸಿದ್ದಾಳೆ.
ಸಂತ್ರಸ್ತ ಬಾಲಕಿಯು ತನ್ನ ತಂದೆಯ ಮರಣದ ನಂತರ ಆಗಾಗ ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗುತ್ತಿದ್ದಳು. ಹಾಗಾಗಿ ಆಕೆ 9ನೇ ತರಗತಿಯ ನಂತರ ಶಾಲೆಯನ್ನು ಬಿಟ್ಟು, ಮುಕ್ತ ಕಲಿಕಾ ಸಂಸ್ಥೆಗೆ ಸೇರುವುದು ಅನಿವಾರ್ಯವಾಯಿತು. ತಂದೆಯ ನಿಧನ ಹಾಗೂ ಅತ್ಯಾಚಾರದ ಘಟನೆಗಳಿಂದಾಗಿ ಆಕೆ, ಪ್ರೇಮೋದಯ್ ಖಾಖಾ ನಡೆಸುತ್ತಿದ್ದ ಲೈಂಗಿಕ ದೌರ್ಜನ್ಯ ಬಗ್ಗೆ ಅಧಿಕಾರಿಗಳಿಗೆ ತಿಳಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಈ ಸಂತ್ರಸ್ತ ಬಾಲಕಿಗೆ ಈಗ ಕೌನ್ಸಿಲಿಂಗ್ ಮಾಡಲಾಗುತ್ತಿದೆ.
ಪ್ರಕರಣ ಬಯಲಿಗೆ ಬಂದಿದ್ದು ಹೇಗೆ?
12ನೇ ತರಗತಿ ಓದುತ್ತಿರುವ ಬಾಲಕಿಯು ಅಧಿಕಾರಿಯ ಕುಟುಂಬಸ್ಥರಿಗೆ ಪರಿಚಯ ಇರುವ ವ್ಯಕ್ತಿಯೊಬ್ಬರ (ಫ್ಯಾಮಿಲಿ ಫ್ರೆಂಡ್) ಮಗಳಾಗಿದ್ದಾಳೆ. ಬಾಲಕಿಯ ತಂದೆಯು 2020ರಲ್ಲಿ ತೀರಿಕೊಂಡಿದ್ದು, ಅದಾದ ಬಳಿಕ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಆದರೆ, ಹಾಗೆ ಕರೆದುಕೊಂಡು ಮನೆಗೆ ಬಂದವನೇ ಆಕೆಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದಕ್ಕೆ ಆತನ ಪತ್ನಿಯೂ ಸಹಕಾರ ನೀಡಿರುವುದು ಜನರನ್ನು ಬೆಚ್ಚಿಬೀಳಿಸಿದೆ.
2021ರಲ್ಲಿ ಬಾಲಕಿಯು ಈತನ ಮನೆಯಿಂದ ಹೊರಗೆ ಹೋಗಿ ಬೇರೆಡೆ ನೆಲೆಸಿದ್ದಾಳೆ. ಆದರೆ, ಇತ್ತೀಚೆಗೆ ಬಾಲಕಿಯು ಆಘಾತಕ್ಕೀಡಾಗುವುದು, ಮಾನಸಿಕವಾಗಿ ಖಿನ್ನತೆಗೊಳಗಾಗುವುದು ಸೇರಿ ಹಲವು ರೀತಿಯ ಸಮಸ್ಯೆ ಎದುರಿಸಿದ ಕಾರಣ ಆಕೆಯನ್ನು ಆಪ್ತ ಸಮಾಲೋಚಕರ ಬಳಿ ಕರೆದುಕೊಂಡು ಹೋಗಲಾಗಿದೆ. ಆಗ, ಆಕೆಯು ಲೈಂಗಿಕ ದೌರ್ಜನ್ಯಕ್ಕೀಡಾಗಿದ್ದಾಳೆ ಎಂಬುದು ಗೊತ್ತಾಗಿದೆ. ಬಾಲಕಿಯು ಆಗ ಅಧಿಕಾರಿಯ ದುಷ್ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾಳೆ. ಪ್ರಕರಣ ಬಯಲಾಗುತ್ತಲೇ ಅಧಿಕಾರಿಯ ವಿರುದ್ಧ ಕೇಸ್ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ: Pocso Case : ಬಾಲಕಿ ಮೇಲೆ ತಿಂಗಳಿನಿಂದ ನಿರಂತರ ಲೈಂಗಿಕ ದೌರ್ಜನ್ಯ; ಶಿರಾಳಕೊಪ್ಪದಲ್ಲಿ ಅಜ್ಮತುಲ್ಲಾ ಅರೆಸ್ಟ್
ಮಾನವೀಯತೆಯ ಪಾಠ ಮಾಡುತ್ತಿದ್ದ ಪ್ರೇಮೋದಯ್
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರೇಮೋದಯ್ ಖಾಖಾ ಗೋಮುಖ ವ್ಯಾಘ್ರನಾಗಿದ್ದ ಎಂದು ತಿಳಿದುಬಂದಿದೆ. ಹೆಣ್ಣುಮಕ್ಕಳು ಹಾಗೂ ಬಾಲಕಿಯರ ಹಕ್ಕುಗಳ ರಕ್ಷಣೆಗಳ ಬಗ್ಗೆ ವಿಡಿಯೊ ಕಾನ್ಫರೆನ್ಸ್‌ಗಳಲ್ಲಿ, ಸಭೆಗಳಲ್ಲಿ ಗಂಟೆಗಟ್ಟಲೆ ಭಾಷಣ ಮಾಡುತ್ತಿದ್ದ. ಹಾಗೆಯೇ, ಆತನ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ “ಮಾನವೀಯತೆ, ಮಾನವತೆಗಾಗಿ ಸಂಬಂಧ ವೃದ್ಧಿ” ಎಂಬುದಾಗಿ ಬರೆದುಕೊಂಡಿದ್ದ ಎಂಬುದಾಗಿಯೂ ತಿಳಿದುಬಂದಿದೆ. ಮಕ್ಕಳು, ಮಹಿಳೆಯರ ಹಕ್ಕುಗಳ ಬಗ್ಗೆ ಇಷ್ಟೆಲ್ಲ ಮಾತನಾಡುತ್ತಿದ್ದ ಈತನು ಮಗಳ ವಯಸ್ಸಿನ ಬಾಲಕಿಯ ಮೇಲೆಯೇ ದೌರ್ಜನ್ಯ ಎಸಗಿದ್ದಾನೆ. ಆತನ ಪತ್ನಿಯೂ ಇಂತಹ ಕೃತ್ಯಕ್ಕೆ ಸಹಕಾರ ನೀಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.