Site icon Vistara News

Annamalai Watch: ವಿವಾದದ ಬೆನ್ನಲ್ಲೇ 4.5 ಲಕ್ಷ ರೂ. ಮೌಲ್ಯದ ವಾಚ್‌ ಬಿಲ್‌ ಬಿಡುಗಡೆ ಮಾಡಿದ ಅಣ್ಣಾಮಲೈ

Pic of his ₹4.5 lakh Rafale watch bill released by BJP's Annamalai amid controversy

Pic of his ₹4.5 lakh Rafale watch bill released by BJP's Annamalai amid controversy

ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಧರಿಸುವ 5 ಲಕ್ಷ ರೂಪಾಯಿ ಮೌಲ್ಯದ ಬೆಲ್ ಆ್ಯಂಡ್ ರಾಸ್ ಕಂಪನಿಯ ರಫೇಲ್‌ ವಾಚ್‌ (Annamalai Watch) ಕುರಿತು ಟೀಕೆ, ವಾಕ್ಸಮರ, ಆರೋಪಗಳು ಕೇಳಿಬಂದ ಬೆನ್ನಲ್ಲೇ ಅಣ್ಣಾಮಲೈ ಅವರು ಕೈಗಡಿಯಾರದ ಬಿಲ್‌ಅನ್ನು ಬಹಿರಂಗಪಡಿಸಿದ್ದಾರೆ. ಆ ಮೂಲಕ ಕಳೆದ ಡಿಸೆಂಬರ್‌ನಲ್ಲಿ ತಮ್ಮ ವಿರುದ್ಧ ಟೀಕೆ ಮಾಡಿದ್ದ ಡಿಎಂಕೆ ಸಚಿವ ಸೇಂಥಿಲ್ ಬಾಲಾಜಿ ಅವರಿಗೆ ತಿರುಗೇಟು ನೀಡಿದ್ದಾರೆ. ಗಡಿಯಾರದ ಬಿಲ್‌ ಬಿಡುಗಡೆ ಮಾಡುವ ಜತೆಗೆ, ಡಿಎಂಕೆ ಸರ್ಕಾರವು ಲಕ್ಷಾಂತರ ಕೋಟಿ ರೂ. ಭ್ರಷ್ಟಾಚಾರ ಎಸಗಿದೆ ಎಂದು ಕೂಡ ಆರೋಪ ಮಾಡಿದ್ದಾರೆ.

ತಮಿಳುನಾಡಿನ ಚೆರಳದನ್‌ ರಾಮಕೃಷ್ಣನ್‌ ಎಂಬುವರಿ 4.5 ಲಕ್ಷ ರೂಪಾಯಿ ಮೌಲ್ಯದ ವಾಚ್‌ಅನ್ನು ಅಣ್ಣಾಮಲೈ ಅವರು 3 ಲಕ್ಷ ರೂ. ಪಾವತಿಸಿ ಖರೀದಿ ಮಾಡಿದ್ದಾರೆ ಎಂಬುದಾಗಿ ಅವರು ಬಿಡುಗಡೆ ಮಾಡಿರುವ ಬಿಲ್‌ನಲ್ಲಿ ಉಲ್ಲೇಖಿಸಲಾಗಿದೆ. “ಬೆಲ್‌ & ರಾಸ್‌ ಕಂಪನಿಯ ಕೈಗಡಿಯಾರವನ್ನು ಮಾರಾಟ ಮಾಡಿದ್ದಕ್ಕಾಗಿ ನಾನು ಅಣ್ಣಾಮಲೈ ಕುಪ್ಪುಸ್ವಾಮಿ ಅವರಿಂದ 3 ಲಕ್ಷ ರೂಪಾಯಿ ಪಡೆದಿದ್ದೇನೆ” ಎಂಬುದಾಗಿ ರಶೀದಿಯಲ್ಲಿ ಉಲ್ಲೇಖಿಸಲಾಗಿದೆ. ಡೆಲಿವರಿ ಚಲನ್‌, ಬ್ಯಾಂಕ್‌ ಮಾಹಿತಿ ಸೇರಿ ಹಲವು ದಾಖಲೆಗಳನ್ನು ಅಣ್ಣಾಮಲೈ ಬಿಡುಗಡೆ ಮಾಡಿದ್ದಾರೆ. ಚೆರಳದನ್‌ ರಾಮಕೃಷ್ಣನ್‌ ನನ್ನ ಗೆಳೆಯ ಎಂದು ಅಣ್ಣಾಮಲೈ ಸ್ಪಷ್ಟನೆ ನೀಡಿದ್ದಾರೆ.

ಗಡಿಯಾರದ ಬಿಲ್‌ ತೋರಿಸಿದ ಅಣ್ಣಾಮಲೈ

ಏನಿದು ಪ್ರಕರಣ?

ಫ್ರೆಂಚ್ ಕಂಪನಿಯಾಗಿರುವ ಬೆಲ್ ಆ್ಯಂಡ್ ರಾಸ್ ಕೇವಲ 500 ರಫೇಲ್ ವಾಚ್‌ಗಳನ್ನು ತಯಾರಿಸಿದ್ದು, ಒಂದು ವಾಚಿನ ಬೆಲೆ 5 ಲಕ್ಷ ರೂಪಾಯಿ ಇದೆ. ಡಸಾಲ್ಟ್ ಫೈಟರ್ ಏರ್‌ಕ್ರಾಫ್ಟ್ ರಫೇಲ್ ‌ಸ್ಮರಣೆಗಾಗಿ ಬೆಲ್ ಆ್ಯಂಡ್ ರಾಸ್ ಕಂಪನಿಯು ರಫೇಲ್ ಲಿಮಿಟೆಡ್ ಎಡಿಷನ್ ವಾಚ್ ತಯಾರಿಸಿದೆ. ಇದನ್ನು ಅಣ್ಣಾಮಲೈ ಅವರು ಧರಿಸುತ್ತಿದ್ದು, ಸಚಿವ ಸೇಂಥಿಲ್‌ ಬಾಲಾಜಿ ಅವರು ಅಣ್ಣಾಮಲೈ ವಿರುದ್ಧ ಕಳೆದ ಡಿಸೆಂಬರ್‌ನಲ್ಲಿ ಟೀಕೆ ಮಾಡಿದ್ದರು. ನಾಲ್ಕು ಮೇಕೆಗಳನ್ನು ಹೊಂದಿದ್ದೇನೆ ಎಂದು ಹೇಳಿಕೊಳ್ಳುವ ಅಣ್ಣಾಮಲೈ ಅವರು ದುಬಾರಿ ಗಡಿಯಾರವನ್ನು ಧರಿಸುತ್ತಾರೆ. ಅವರು ವಾಚ್ ಖರೀದಿಸಿದ ರಶೀದಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಹುದೇ ಎಂದು ಸಚಿವ ಸೆಂಥಿಲ್ ಬಾಲಾಜಿ ಅವರು ಅಣ್ಣಾಮಲೈಗೆ ಪ್ರಶ್ನಿಸಿದ್ದರು.

ಲಿಮಿಟೆಡ್‌ ಎಡಿಷನ್‌ ವಾಚ್‌ ಆಗಿರುವುದರಿಂದ ಚೆರಳದನ್‌ ರಾಮಕೃಷ್ಣನ್‌ ಅವರಿಗೆ ಇದು ಹೇಗೆ ಸಿಕ್ಕಿತು ಎಂಬುದರ ಕುರಿತು ಅವರು ಮಾಹಿತಿ ನೀಡಿಲ್ಲ. ಹಾಗೆಯೇ, ಅಣ್ಣಾಮಲೈ ಬಿಡುಗಡೆ ಮಾಡಿರುವ ಬಿಲ್‌ನಲ್ಲಿ ಸಂಪೂರ್ಣ ಮಾಹಿತಿ ಇಲ್ಲ ಎಂದು ಡಿಎಂಕೆ ಆರೋಪಿಸಿದೆ. ಡಸಾಲ್ಟ್‌ ವಿಮಾನಯಾನ ಸಂಸ್ಥೆಯು ಬೆಲ್ ಆ್ಯಂಡ್ ರಾಸ್ ಸಹಯೋಗದಲ್ಲಿ 500 ಗಡಿಯಾರಗಳನ್ನು ತಯಾರಿಸಿದ್ದು, ಭಾರತಕ್ಕೆ ಕೇವಲ ಎರಡು ಗಡಿಯಾರಗಳನ್ನು ಮಾರಾಟ ಮಾಡಲಾಗಿದೆ. ಒಂದು ವಾಚ್‌ ಮುಂಬೈ ವ್ಯಕ್ತಿಗೆ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Bell & Ross Watch | ನೀವು ಧರಿಸುವ ದುಬಾರಿ ವಾಚ್ ಖರೀದಿಯ ರಶೀದಿ ತೋರಿಸಿ: ಬಿಜೆಪಿ ನಾಯಕ ಅಣ್ಣಾಮಲೈಗೆ ಡಿಎಂಕೆ ಸವಾಲು

Exit mobile version