ಪಿಟ್ಬುಲ್ ನಾಯಿಗಳ ಹಾವಳಿ-ದಾಳಿ ದಿನೇದಿನೇ ಹೆಚ್ಚುತ್ತಿದೆ. ಈ ನಾಯಿಗಳು ಮನುಷ್ಯರ ಪಾಲಿಗೆ ಮಾರಣಾಂತಿಕವಾಗುತ್ತಿದೆ. ಕಳೆದ ತಿಂಗಳು ಉತ್ತರ ಪ್ರದೇಶದ ಅಮ್ರೋಹದಲ್ಲಿ ಕಾನೂನು ವಿದ್ಯಾರ್ಥಿಯೊಬ್ಬನ ಮೇಲೆ ಪಿಟ್ಬುಲ್ ನಾಯಿಯೊಂದು ದಾಳಿ ಮಾಡಿ, ಆತನನ್ನು ತೀವ್ರವಾಗಿ ಗಾಯಗೊಳಿಸಿತ್ತು. ಈಗ ಇನ್ನೊಂದು ಅಂಥದ್ದೇ ಘಟನೆ ಹರ್ಯಾಣದಿಂದ ವರದಿಯಾಗಿದೆ. ಇಲ್ಲಿನ ಕರ್ನಾಲ್ನ ಬಿಜ್ನಾ ಎಂಬ ಗ್ರಾಮದಲ್ಲಿ 30ವರ್ಷದ ಯುವಕನ ಖಾಸಗಿ ಅಂಗವನ್ನೇ ಪಿಟ್ಬುಲ್ ನಾಯಿ ಕಚ್ಚಿ ಗಾಯಗೊಳಿಸಿದೆ.
ಈ ಯುವಕ ಗುರುವಾರ ಬೆಳಗ್ಗೆ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಪಿಟ್ಬುಲ್ ನಾಯಿ ದಾಳಿ ಮಾಡಿದೆ. ಅಲ್ಲಿಗೆ ಬಂದು ಅವನ ಮೈಮೇಲೆ ಎರಗಿ ಖಾಸಗಿ ಅಂಗವನ್ನೇ ಕಚ್ಚಿ ಹಿಡಿದಿತ್ತು. ಆತ ಎಷ್ಟೇ ತಪ್ಪಿಸಿಕೊಳ್ಳಲು ಯತ್ನಿಸಿದರೂ ಅದು ಬಿಡಲಿಲ್ಲ. ಇವನ ಅರಚಾಟ ಕೇಳಿ ಸುತ್ತಲೂ ಇದ್ದವರೆಲ್ಲ ಅಲ್ಲಿಗೆ ಬಂದಿದ್ದಾರೆ. ಆ ನಾಯಿಯ ಬಾಯಿಗೆ ಬಟ್ಟೆಯನ್ನು ತುರುಕಿದ ನಂತರವೇ ಅದು ಯುವಕನ ಖಾಸಗಿ ಅಂಗವನ್ನು ಬಿಟ್ಟಿದೆ. ಗಂಭೀರವಾಗಿ ಗಾಯಗೊಂಡ ಆತನನ್ನು ಅದೇ ಹಳ್ಳಿಯ ಸಮೀಪವಿದ್ದ ಘರೌಂಡಾದಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಸಾಧ್ಯವಾಗದೆ ಕರ್ನಾಲ್ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿ: ಆಂಧ್ರ ಮುಖ್ಯಮಂತ್ರಿ ಜಗನ್ ರೆಡ್ಡಿ ಪೋಸ್ಟರ್ ಹರಿದ ನಾಯಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಪ್ರತಿಪಕ್ಷ ಟಿಡಿಪಿ ಕಾರ್ಯಕರ್ತೆ!
ಇನ್ನು ನಾಯಿಯ ದುಷ್ಕೃತ್ಯದಿಂದ ಸಿಟ್ಟಿಗೆದ್ದ ಸ್ಥಳೀಯರೆಲ್ಲ ಸೇರಿ ಆ ನಾಯಿಗೆ ಬಡಿಗೆಗಳಿಂದ ಸರಿಯಾಗಿ ಥಳಿಸಿ ಕೊಂದಿದ್ದಾರೆ. ಈ ಪುಟ್ಬಿಲ್ ಕೆಲ ದಿನಗಳಿಂದಲೂ ಹಳ್ಳಿಯಲ್ಲಿ ಸುತ್ತಾಡುತ್ತಿತ್ತು. ಈಗೆರಡು ದಿನಗಳ ಹಿಂದೆ ಕೂಡ ಯುವಕನೊಬ್ಬನ ಮೇಲೆ ದಾಳಿ ಮಾಡಿತ್ತು. ಯಾರನ್ನೇ ಕಂಡರೂ ಆಕ್ರಮಣಕಾರಿಯಾಗಿಯೇ ವರ್ತಿಸುತ್ತಿತ್ತು. ಮನೆಯಿಂದ ಹೊರಬರಲೂ ಹೆದರಿಕೆಯಾಗುತ್ತಿತ್ತು ಎಂದು ಹಳ್ಳಿಗರು ಪೊಲೀಸರಿಗೆ ತಿಳಿಸಿದ್ದಾರೆ. ಹಾಗೇ, ಗಾಯಗೊಂಡ ಯುವಕನ ಹೇಳಿಕೆಯನ್ನು ಪೊಲೀಸರು ಪಡೆದಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಪಿಟ್ಬುಲ್ ಅಟ್ಯಾಕ್ ಒಂದು ಆತಂಕಕಾರಿ ವಿಚಾರವಾಗಿದೆ. 2022ರ ಅಕ್ಟೋಬರ್ನಲ್ಲಿ ಹರ್ಯಾಣದ ರೇವಾರಿಯಲ್ಲಿನ ಬಲಿಯಾರ್ ಖುರ್ಡ್ ಗ್ರಾಮದಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳಿಗೆ ಪಿಟ್ಬುಲ್ ನಾಯಿ ಕಚ್ಚಿತ್ತು. ಆಕೆಗೆ ಗಂಭೀರವಾಗಿ ಗಾಯವಾಗಿತ್ತು. ತಲೆ, ಕೈ, ಕಾಲು ಎಲ್ಲ ಸೇರಿ ಸುಮಾರು 50 ಹೊಲಿಗೆ ಹಾಕಲಾಗಿತ್ತು.