ನವ ದೆಹಲಿ: 26/11 ಮುಂಬೈ ದಾಳಿಯನ್ನು ಸಂಘಟಿಸಿದವರು, ಸಂಚುಕೋರರನ್ನು ಈಗಲೂ ರಕ್ಷಣೆ ಮಾಡಲಾಗುತ್ತಿದೆ ಮತ್ತು ಅವರನ್ನು ಶಿಕ್ಷೆಗೊಳಪಡಿಸುತ್ತಿಲ್ಲ. ಇದರಿಂದ ಸಾಮೂಹಿಕ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಅವರು ಹೇಳಿದ್ದಾರೆ. ಇದೇ ವೇಳೆ, ಉಗ್ರರನ್ನು ನಿಷೇಧಿಸುವ ವಿಷಯ ಬಂದಾಗ ವಿಶ್ವಸಂಸ್ಥೆಯ ಭದ್ರತಾ ಸಮಿತಿ(ಯುಎನ್ಎಸ್‌ಸಿ), ಕೆಲವು ರಾಜಕೀಯ ಕಾರಣಗಳಿಂದಾಗಿ ಕ್ರಮಕೈಗೊಳ್ಳಲು ಮುಂದಾಗದಿರುವುದು ದುರದೃಷ್ಟಕರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮುಂಬೈನಲ್ಲಿ Countering the Use of New and Emerging Technologies for Terrorist Purposes ವಿಷಯ ಕುರಿತು ಆಯೋಜಿಸಲಾಗಿದ್ದ ವಿಶೇಷ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮದ ಮೊದಲ ಹಂತವು, 26/11 ದಾಳಿಯ ಕೇಂದ್ರ ಬಿಂದುವಾಗಿದ್ದ ಮುಂಬೈನ ತಾಜ್ ಮಹಲ್ ಹೊಟೇಲ್‌ನಲ್ಲಿ ನಡೆಯುತ್ತಿದೆ.
ಮುಂಬೈ ಮೇಲೆ ನಡೆದ ಉಗ್ರ ದಾಳಿ ಕೇವಲ ಮುಂಬೈ ನಗರದ ಮೇಲೆ ನಡೆದ ದಾಳಿಯಲ್ಲ. ಅದು ಅಂತಾರಾಷ್ಟ್ರೀಯ ಸಮುದಾಯದ ಮೇಲಾದ ದಾಳಿಯಾಗಿತ್ತು. ಅಸಲಿಗೆ, ನೆರೆ ರಾಷ್ಟ್ರದಿಂದ ದೇಶದೊಳಕ್ಕೆ ನುಗ್ಗಿದ್ದ ಉಗ್ರರು ಇಡೀ ನಗರವನ್ನೇ ಒತ್ತೆಯಾಗಿಟ್ಟುಕೊಂಡಿದ್ದರು ಎಂದು ಜೈಶಂಕರ್ ಅವರು ಅಭಿಪ್ರಾಯಪಟ್ಟರು. ಈ ವೇಳೆ, ಅವರು ಪಾಕಿಸ್ತಾನದ ಹೆಸರು ಹೇಳದೇ ಕಟುವಾಗಿ ಟೀಕಿಸಿದರು. ಮುಂಬೈ ದಾಳಿಯಲ್ಲಿ ಉಗ್ರರು 140 ಭಾರತೀಯರು, 23 ದೇಶಗಳ 26 ಪ್ರಜೆಗಳನ್ನು ಹತ್ಯೆ ಮಾಡಿದ್ದರು ಎಂದು ಅವರು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ Omar Sultan Al Olama | ವಿದೇಶಾಂಗ ಸಚಿವ ಜೈಶಂಕರ್‌ಗೆ ಯುಎಇ ಸಚಿವ ಮೆಚ್ಚುಗೆ, ಶ್ಲಾಘನೆಗೆ ಕಾರಣವೇನು?