ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ (Ram Mandir) ನಿರ್ಮಾಣ ಕಾಮಗಾರಿಯು ಕೊನೆಯ ಹಂತಕ್ಕೆ ಬಂದು ನಿಂತಿದ್ದು. 2024ರ ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ ಮಾಡಲಾಗುತ್ತದೆ. ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠಾನೆ (Pran Pratishta) ನೆರವೇರಿಸಿ, ಗರ್ಭಗುಡಿಯಲ್ಲಿ ಇರಿಸಿ ಪೂಜೆ ಮಾಡಲಾಗುತ್ತದೆ. ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದರ ಬೆನ್ನಲ್ಲೇ, ಭಾರತೀಯ ರೈಲ್ವೆಯು ಭಕ್ತರಿಗಾಗಿ ದೇಶದ ವಿವಿಧ ಭಾಗಗಳಿಂದ 1,000 ವಿಶೇಷ ರೈಲುಗಳನ್ನು ಓಡಿಸಲು ಮುಂದಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಭಕ್ತರಿಗಾಗಿ ದೇಶದ ವಿವಿಧ ಭಾಗಗಳಿಂದ 1,000 ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಮುಂದಾಗಿದ್ದು ಈ ರೈಲುಗಳ ಕಾರ್ಯಾಚರಣೆಯು ಜನವರಿ 19 ರಂದು ಪ್ರಾರಂಭವಾಗುತ್ತದೆ. ಎಂದು ತಿಳಿಸಿದೆ. ಜತೆಗೆ ರಾಮಮಂದಿರ ಲೋಕಾರ್ಪಣೆಯಾದ ಬಳಿಕ ಮೊದಲ 100 ದಿನಗಳವರೆಗೆ ಈ ಸೇವೆ ಮುಂದುವರಿಯುತ್ತದೆ ಇದರಿಂದ ಭಕ್ತರು ಪವಿತ್ರ ನಗರಕ್ಕೆ ಭೇಟಿ ನೀಡಬಹುದಾಗಿದೆ ಎಂದು ಈ ವರದಿಯಲ್ಲಿ ತಿಳಿಸಿದೆ.
ಈ ವಿಶೇಷ ರೈಲುಗಳು ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಪುಣೆ, ಕೋಲ್ಕತ್ತಾ, ನಾಗ್ಪುರ, ಲಕ್ನೋ ಮತ್ತು ಜಮ್ಮು ಸೇರಿದಂತೆ ಪ್ರಮುಖ ನಗರಗಳಿಂದ ಅಯೋಧ್ಯೆಗೆ ಯಾತ್ರಾರ್ಥಿಗಳಿಗಾಗಿ ಚಲಿಸುತ್ತವೆ. “ಈ ಉದ್ದೇಶಿತ ರೈಲುಗಳ ಸಂಖ್ಯೆಯನ್ನು ಬೇಡಿಕೆಯನ್ನು ಪರಿಗಣಿಸಿ ನಿಯೋಜಿಸಬಹುದು. ಅಯೋಧ್ಯೆಯಲ್ಲಿನ ರೇಲ್ವೆ ನಿಲ್ದಾಣವನ್ನು ಸಹ ನವೀಕರಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ವಿಶೇಷ ರೈಲುಗಳ ಹೊರತಾಗಿ, ಹೆಚ್ಚಿನ ಸಂಖ್ಯೆಯ ಭಕ್ತರು ಅಯೋಧ್ಯೆಗೆ ಸೇರುವ ನಿರೀಕ್ಷೆಯಿರುವುದರಿಂದ ಉದ್ಘಾಟನೆಗೂ ಮುನ್ನ 10-15 ದಿನಗಳಲ್ಲಿ ಯಾತ್ರಾರ್ಥಿಗಳಿಗೆ ಅಡುಗೆ ಸೇವೆಗಳನ್ನು ಒದಗಿಸಲು ರೈಲ್ವೆಯ ಅಡುಗೆ ಮತ್ತು ಟಿಕೆಟ್ ವಿಭಾಗವು ವ್ಯವಸ್ಥೆಗಳನ್ನು ಮಾಡುತ್ತಿದೆ. ಈಗ ಪುನರಾಭಿವೃದ್ಧಿ ಮಾಡಲಾದ ಅಯೋಧ್ಯೆ ರೈಲು ನಿಲ್ದಾಣವು ಪ್ರತಿದಿನ ಸುಮಾರು 50,000 ಜನರ ಕಾಲ್ನಡಿಗೆಯನ್ನು ನಿಭಾಯಿಸಬಲ್ಲದು ಮತ್ತು ಜನವರಿ 15 ರ ವೇಳೆಗೆ ಸಂಪೂರ್ಣವಾಗಿ ಸಿದ್ಧವಾಗಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ Ram Mandir: ಮೋದಿ, ಯೋಗಿ ಹೋದ್ಮೇಲೆ ರಾಮ ಮಂದಿರ ಒಡೆದೇ ಒಡೆಯುತ್ತೇವೆ! ವೈರಲ್ ಆಯ್ತು ಹೇಳಿಕೆ
ಆರ್‌ಎಸ್‌ಎಸ್‌ಗೆ ಕಾರ್ಯಕ್ರಮಗಳ ಆಯೋಜನೆ ಹೊಣೆ
ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್‌ಎಸ್‌ಎಸ್ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ. “ರಾಮಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಕರೆ ನೀಡಿದ್ದಾರೆ.
ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್ 9ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿ, ರಾಮಜನ್ಮಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ. 2020ರ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.