Site icon Vistara News

Copyright Infringement: ಮದುವೆಗಳಲ್ಲಿ ಬಾಲಿವುಡ್‌ ಹಾಡು ಹಾಕುತ್ತೀರಾ? ಕೇಂದ್ರದ ಈ ಆದೇಶ ತಿಳಿಯಿರಿ

Bollywood Songs Copyright

Playing Film Songs At Weddings Is Not Violation Of Copyright: Says Centre

ನವದೆಹಲಿ: ಬಾಲಿವುಡ್‌ ಹಾಡುಗಳಿಲ್ಲದೆ, ಬಾಲಿವುಡ್‌ ಹಾಡುಗಳಿಗೆ ಮನಸ್ಸು ಬಿಚ್ಚಿ ಕುಣಿಯದಿದ್ದರೆ ಭಾರತದ ಬಹುತೇಕ ಮದುವೆಗಳು ಪೂರ್ಣಗೊಳ್ಳುವುದಿಲ್ಲ. ಹೀಗೆ ಮದುವೆ (Marriage) ವೇಳೆ ಬಾಲಿವುಡ್‌ ಹಾಡುಗಳನ್ನು ಪ್ಲೇ ಮಾಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮದುವೆಗಳಲ್ಲಿ ಬಾಲಿವುಡ್‌ ಸೇರಿ ಯಾವುದೇ ಹಾಡುಗಳನ್ನು ಪ್ಲೇ ಮಾಡುವುದು ಕಾಪಿರೈಟ್‌ (ಹಕ್ಕುಸ್ವಾಮ್ಯ) ಉಲ್ಲಂಘನೆ ಆಗುವುದಿಲ್ಲ (Copyright Infringement), ಇದು ಕೃತಿಚೌರ್ಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

“ಮದುವೆ ಮಾತ್ರವಲ್ಲ ಹಲವು ಕಾರ್ಯಕ್ರಮಗಳಲ್ಲಿ ಬಾಲಿವುಡ್‌ ಸೇರಿ ಯಾವುದೇ ಹಾಡುಗಳನ್ನು ಹಾಕಿದರೆ ಅದು ಕಾಪಿರೈಟ್‌ ಉಲ್ಲಂಘನೆ ಅಲ್ಲ. ಮದುವೆ ವೇಳೆ ಮೆರವಣಿಗೆ, ಸಾಮಾಜಿಕ ಹಬ್ಬಗಳು ಸೇರಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಯಾವುದೇ ರೀತಿಯ ಹಾಡುಗಳನ್ನು ಹಾಕಬಹುದು. ಇದಕ್ಕೆ ಯಾವುದೇ ರೀತಿಯ ಸಂಭಾವನೆ ನೀಡಬೇಕಿಲ್ಲ” ಎಂದು ಕೇಂದ್ರ ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

“ಮದುವೆ ಸೇರಿ ಹಲವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಬಾಲಿವುಡ್‌ ಸೇರಿ ಯಾವುದೇ ಸಿನಿಮಾ ಇಂಡಸ್ಟ್ರಿಯ ಹಾಡು ಹಾಕಿದರೆ ಇಂತಿಷ್ಟು ಗೌರವ ಧನ ನೀಡಬೇಕು ಎಂಬುದಾಗಿ ಕಾಪಿರೈಟ್‌ ಸಂಘಟನೆಗಳು ಒತ್ತಾಯಿಸುತ್ತಿವೆ ಎಂಬ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಮದುವೆಗಳಲ್ಲಿ ಬಾಲಿವುಡ್‌ ಹಾಡು ಹಾಕುವುದು ಕಾಪಿರೈಟ್‌ ಕಾಯ್ದೆಯ ಸೆಕ್ಷನ್‌ 52 (1) (za) ಅಡಿಯಲ್ಲಿ ನಿಯಮ ಉಲ್ಲಂಘನೆ ಎಂದು ನೋಟಿಸ್‌ ನೀಡುತ್ತಿದ್ದಾರೆ ಎಂಬ ದೂರುಗಳೂ ಕೇಳಿಬಂದಿವೆ” ಎಂದು ಉತ್ತೇಜನ, ಉದ್ಯಮ ಹಾಗೂ ಆಂತರಿಕ ವ್ಯಾಪಾರ ಇಲಾಖೆ (DPIIT) ತಿಳಿಸಿದೆ.

ಇದನ್ನೂ ಓದಿ: Actress Ramya | ರಮ್ಯಾ ನಿರ್ಮಾಣದ ಸಿನಿಮಾಗೆ ಸಂಕಷ್ಟ: ಟೈಟಲ್‌ ಕುರಿತಾಗಿ ರಾಜೇಂದ್ರ ಸಿಂಗ್‌ ಬಾಬು ನೀಡಿದ ಪತ್ರವೇನು?

“ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಸಮಾರಂಭಗಳಲ್ಲಿ ಸಾಹಿತ್ಯಕ, ನಾಟಕ ಹಾಗೂ ಹಾಡುಗಳನ್ನು ಹಾಕುವುದು ಕಾಪಿರೈಟ್‌ ಕಾಯ್ದೆಯ ಸೆಕ್ಷನ್‌ 52 (1) (za) ಉಲ್ಲಂಘನೆ ಆಗುವುದಿಲ್ಲ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೂಡ ಇಂತಹ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ. ಹಾಗಾಗಿ, ಬಾಲಿವುಡ್‌ ಹಾಡುಗಳನ್ನು ಮದುವೆಗಳಲ್ಲಿ ಪ್ಲೇ ಮಾಡುವುದು ಕಾಪಿರೈಟ್‌ ಕಾಯ್ದೆಯ ಉಲ್ಲಂಘನೆ ಆಗುವುದಿಲ್ಲ” ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರದ ಹೊಸ ಆದೇಶದಿಂದ ಇನ್ನು ಮುಂದೆ ಮದುವೆ ಸೇರಿ ಯಾವುದೇ ಸಮಾರಂಭಗಳಲ್ಲಿ ಯಾವುದೇ ಹಾಡುಗಳನ್ನು ಪ್ಲೇ ಮಾಡಬಹುದಾಗಿದೆ.

Exit mobile version