Site icon Vistara News

Rahul Gandhi Disqualified: ರಾಹುಲ್‌ ಗಾಂಧಿ ಅನರ್ಹತೆ ಬೆನ್ನಲ್ಲೇ ಜನಪ್ರತಿನಿಧಿ ಕಾಯ್ದೆ ಮಾನ್ಯತೆ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

Plea filed in Supreme Court challenging Representation of the People Act that took away Rahul Gandhi's MP status

Plea filed in Supreme Court challenging Representation of the People Act that took away Rahul Gandhi's MP status

ನವದೆಹಲಿ: ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಲೋಕಸಭೆಯಿಂದ (Rahul Gandhi Disqualified) ಅನರ್ಹರಾಗಿದ್ದಾರೆ. ಸೂರತ್‌ ನ್ಯಾಯಾಲಯವು ರಾಹುಲ್‌ ಗಾಂಧಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸುತ್ತಲೇ ಲೋಕಸಭೆ ಸಚಿವಾಲಯವು ಅವರನ್ನು ಅನರ್ಹಗೊಳಿಸಿದೆ. ಇದರ ಬೆನ್ನಲ್ಲೇ, ರಾಹುಲ್‌ ಗಾಂಧಿ ಅವರ ಅನರ್ಹತೆಗೆ ಕಾರಣವಾದ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 8 (3)ರ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 8 (3) ಅಡಿಯಲ್ಲಿ ಯಾವುದೇ ಸಂಸದ ಅಥವಾ ಶಾಸಕನಿಗೆ ನ್ಯಾಯಾಲಯವು ಎರಡು ಅಥವಾ ಅದಕ್ಕಿಂತ ಹೆಚ್ಚಿನ ವರ್ಷ ಶಿಕ್ಷೆ ನೀಡಿದರೆ, ಶಿಕ್ಷೆಯ ದಿನದಿಂದಲೇ ಆತ ಅನರ್ಹನಾಗುತ್ತಾನೆ. ಈ ಸೆಕ್ಷನ್‌ನ ಮಾನ್ಯತೆ ಪ್ರಶ್ನಿಸಿ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಶ್ರೀರಾಮ್‌ ಪಿ. ಎಂಬುವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹಾಗೆಯೇ, ಸೆಕ್ಷನ್‌ 8 (4)ಅನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ್ದನ್ನು ಕೂಡ ರಾಜಕೀಯ ವಿರೋಧಿಗಳನ್ನು ದುರ್ಬಲಗೊಳಿಸಲು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅರ್ಜಿದಾರರು ಪ್ರಸ್ತಾಪಿಸಿದ್ದಾರೆ.

ಮೋದಿ ಎಂಬ ಉಪನಾಮ ಉಳ್ಳವರೆಲ್ಲ ಕಳ್ಳರು ಎಂಬ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಾಗಿತ್ತು. ಅದರಂತೆ, ರಾಹುಲ್‌ ಗಾಂಧಿ ಅವರಿಗೆ ಸೂರತ್‌ ನ್ಯಾಯಾಲಯವು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹಾಗಾಗಿ, ಕಾಂಗ್ರೆಸ್‌ ನಾಯಕ ಲೋಕಸಭೆಯಿಂದ ಅನರ್ಹಗೊಂಡಿದ್ದಾರೆ. ಇದರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಈಗಾಗಲೇ ಕಾಂಗ್ರೆಸ್‌ ತಿಳಿಸಿದೆ.

ಸುಗ್ರೀವಾಜ್ಞೆ ಜಾರಿಗೆ ತರಲು ಹೊರಟಿದ್ದ ಕಾಂಗ್ರೆಸ್

2013ರಲ್ಲಿ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 8 (4) ಅನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿತ್ತು. ಶಾಸಕ ಅಥವಾ ಸಂಸದರಿಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಯಾದರೆ, ತಕ್ಷಣವೇ ಅವರು ಅನರ್ಹರಾಗುತ್ತಾರೆ ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಆದರೆ, ಡಾ.ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರವು ಸುಗ್ರೀವಾಜ್ಞೆಯೊಂದನ್ನು ಜಾರಿಗೆ ತರಲು ಮುಂದಾಗಿತ್ತು. ಜನಪ್ರತಿನಿಧಿಯು ಶಿಕ್ಷೆಗೆ ಗುರಿಯಾದರೆ ತಕ್ಷಣವೇ ಅವರು ಅನರ್ಹರಾಗುವುದನ್ನು ಮೂರು ತಿಂಗಳು ತಡೆಯಲು ಸುಗ್ರೀವಾಜ್ಞೆ ತರಲಾಗಿತ್ತು. ಆದರೆ, ಅದು ಜಾರಿಯಾಗಲಿಲ್ಲ.

ರಾಹುಲ್‌ ಗಾಂಧಿಯಿಂದಲೇ ವಿರೋಧ

2013ರ ಸೆಪ್ಟೆಂಬರ್‌ 28ರಂದು ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ಸುದ್ದಿಗೋಷ್ಠಿಗೆ ಆಗಮಿಸಿದ ರಾಹುಲ್‌ ಗಾಂಧಿ, ಸುಗ್ರೀವಾಜ್ಞೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. “ಸರ್ಕಾರವು ಸುಗ್ರೀವಾಜ್ಞೆ ಜಾರಿಗೆ ತರಲು ಹೊರಟಿರುವುದು ಸರಿಯಲ್ಲ. ಇದು ರಾಜಕೀಯ ಪ್ರೇರಿತ ನಿರ್ಧಾರ. ಇಂತಹ ಅಪಸವ್ಯಗಳನ್ನು ನಿಲ್ಲಿಸುವ ಸಮಯ ಬಂದಿದೆ. ನಾವು ಭ್ರಷ್ಟಾಚಾರವನ್ನು ತಡೆಯಬೇಕೆಂದರೆ, ಇಂತಹ ರಾಜಿ ಮಾಡಿಕೊಳ್ಳಬಾರದು. ಇಂತಹ ಸುಗ್ರೀವಾಜ್ಞೆಯನ್ನು ಹರಿದು, ಬಿಸಾಡಬೇಕು” ಎಂದು ಹೇಳಿದರು. ಹಾಗೆಯೇ, ಸುಗ್ರೀವಾಜ್ಞೆ ಪ್ರತಿಯನ್ನು ಹರಿದುಹಾಕಿ, ಸುದ್ದಿಗೋಷ್ಠಿಯಿಂದ ಎದ್ದು ನಡೆದರು. ಇದರಿಂದಾಗಿ ಸುಗ್ರೀವಾಜ್ಞೆ ಜಾರಿಗೆ ತರಲು ಆಗಿರಲಿಲ್ಲ.

ಇದನ್ನೂ ಓದಿ: 2013ರಲ್ಲಿ ರಾಹುಲ್‌ ಗಾಂಧಿ ಸುಗ್ರೀವಾಜ್ಞೆ ಹರಿಯದಿದ್ದರೆ ಈಗ ಅನರ್ಹರಾಗುತ್ತಿರಲಿಲ್ಲ, ಏನದು ಸುಗ್ರೀವಾಜ್ಞೆ?

Exit mobile version