ನವದೆಹಲಿ: ಕೌಟುಂಬಿಕ ಹಿಂಸೆ ಎಂದರೆ ಪುರುಷ ಮಾತ್ರ ತನ್ನ ಹೆಂಡತಿ ಮೇಲೆ ದೌರ್ಜನ್ಯ, ಹಿಂಸೆ ಮಾಡುವುದಲ್ಲ. ಪುರುಷರು ಕೂಡ ಪತ್ನಿಯರಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ಹಾಗಾಗಿ, ಪತ್ನಿಯಿಂದ ಪತಿಗೆ ರಕ್ಷಣೆ ಸಿಗಬೇಕು ಎಂಬ ಕಾರಣಕ್ಕಾಗಿ ಪುರುಷರಿಗೂ ಒಂದು ಆಯೋಗ (National Commission For Men) ರಚಿಸಬೇಕು ಎಂದು ವಕೀಲ ಮಹೇಶ್ ಕುಮಾರ್ ತಿವಾರಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (NCRB) ವರದಿಯ ಅಂಕಿ-ಅಂಶಗಳನ್ನು ಉಲ್ಲೇಖಿಸಿ ಮಹೇಶ್ ಕುಮಾರ್ ಅವರು ಅರ್ಜಿ ಸಲ್ಲಿಸಿದ್ದಾರೆ. ಪುರುಷರು ಕೂಡ ಪತ್ನಿಯರಿಂದ ರಕ್ಷಣೆ ಪಡೆಯಲು ರಾಷ್ಟ್ರೀಯ ಪುರುಷರ ಆಯೋಗ ರಚಿಸಬೇಕು ಎಂಬುದಾಗಿ ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
“2021ರಲ್ಲಿ 1,64,033 ಜನ ದೇಶಾದ್ಯಂತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ 81,063 ಪುರುಷರಿದ್ದರೆ, 28,680 ಮಹಿಳೆಯರು ಇದ್ದಾರೆ. ಪುರುಷರಲ್ಲಿ ಶೇ.33.2ರಷ್ಟು ಜನ ಕೌಟುಂಬಿಕ ಸಮಸ್ಯಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಶೇ.4.8ರಷ್ಟು ಮಂದಿ ಮದುವೆ ಸಂಬಂಧಿತ ಕಾರಣಗಳಿಂದಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿ ಹೇಳುತ್ತದೆ. ಹಾಗಾಗಿ, ಪುರುಷರಿಗೂ ಆಯೋಗ ರಚಿಸಲು ಮಾನವ ಹಕ್ಕುಗಳ ಆಯೋಗಕ್ಕೆ ಸೂಚಿಸಬೇಕು” ಎಂಬುದಾಗಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Swati Maliwal: ತಂದೆಯಿಂದಲೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಹೇಳಿಕೆ