Site icon Vistara News

Narendra Modi: ಮುಸ್ಲಿಮರ ವೋಟಿಗಾಗಿ ಮಮತಾ ಬ್ಯಾನರ್ಜಿ ಹಿಂದು ಸಂಘಟನೆಗಳ ವಿರುದ್ಧ ಆರೋಪ; ಮೋದಿ ಟೀಕೆ

CAA Certificate

Centre grants citizenship certificates under CAA to people from West Bengal

ಕೋಲ್ಕೊತಾ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಜಾತಿ, ಧರ್ಮ, ಮೀಸಲಾತಿ ಸೇರಿ ಹಲವು ವಿಷಯಗಳು ಚರ್ಚೆಯ ಮುನ್ನೆಲೆಗೆ ಬರುತ್ತಿವೆ. ರಾಜಕೀಯ ನಾಯಕರ ಹೇಳಿಕೆಗಳು ತೀಕ್ಷ್ಣತೆ ಪಡೆದುಕೊಂಡಿವೆ. ಇನ್ನು, ಹಿಂದು ಸಂಘ-ಸಂಸ್ಥೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ವಿರುದ್ಧ ಹರಿಹಾಯ್ದಿದ್ದಾರೆ. “ಮುಸ್ಲಿಮರ ಮತಗಳಿಗಾಗಿ ಮಮತಾ ಬ್ಯಾನರ್ಜಿ ಅವರು ಹಿಂದು ಸಂಘ-ಸಂಸ್ಥೆಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ” ಎಂದು ಕುಟುಕಿದ್ದಾರೆ.

“ಚುನಾವಣೆ ಸಂದರ್ಭದಲ್ಲಿ ಟಿಎಂಸಿಯು ಜನರಿಗೆ ಬೆದರಿಕೆ ಒಡ್ಡಿತ್ತು. ಈಗ ಅದು ತನ್ನ ಮಿತಿಯನ್ನು ಮೀರಿದೆ. ಇಸ್ಕಾನ್‌, ರಾಮಕೃಷ್ಣ ಮಿಷನ್‌ ಹಾಗೂ ಭಾರತ್‌ ಸೇವಾಶ್ರಮ ಸಂಘವು ಜಗತ್ತಿನಾದ್ಯಂತ ಜನರಿಗೆ ಸೇವೆ ಮಾಡುತ್ತಿವೆ. ನೈತಿಕ ಬೆಂಬಲ, ಮಾರ್ಗದರ್ಶನ ನೀಡುತ್ತಿವೆ. ಆದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯು ಇಂತಹ ಹಿಂದು ಸಂಘ-ಸಂಸ್ಥೆಗಳ ವಿರುದ್ಧ ಬಹಿರಂಗವಾಗಿಯೇ ಮಾತನಾಡುತ್ತಿದ್ದಾರೆ, ಬೆದರಿಕೆ ಒಡ್ಡುತ್ತಿದ್ದಾರೆ. ಮುಸ್ಲಿಮರ ಮತಗಳ ಓಲೈಕೆಗಾಗಿ ಮಮತಾ ಬ್ಯಾನರ್ಜಿ ಅವರು ಹೀಗೆ ಮಾಡುತ್ತಿದ್ದಾರೆ” ಎಂದು ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

“ಮಮತಾ ಬ್ಯಾನರ್ಜಿ ಅವರು ಓಲೈಕೆ ರಾಜಕಾರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮೂಲಭೂತವಾದಿಗಳನ್ನು ಓಲೈಸುವ ದೃಷ್ಟಿಯಿಂದ ಅವರು ಸಾಧು-ಸಂತರ ವಿರುದ್ಧ ಮಾತನಾಡುತ್ತಿದ್ದಾರೆ. ಆದರೆ, ಜನರು ಅಭಿವೃದ್ಧಿಯನ್ನು ನೋಡುತ್ತಾರೆಯೇ ಹೊರತು ಓಲೈಕೆ ರಾಜಕಾರಣಕ್ಕೆ ಮಣೆ ಹಾಕುವುದಿಲ್ಲ. ಪಶ್ಚಿಮ ಬಂಗಾಳದ ಜನರು ಬಿಜೆಪಿಯ ಆಡಳಿತವನ್ನು ಬಯಸುತ್ತಿದ್ದಾರೆ. ಇದು ಮಮತಾ ಬ್ಯಾನರ್ಜಿ ಅವರ ನಿದ್ದೆಗೆಡಿಸಲು ಕಾರಣವಾಗಿದೆ” ಎಂದು ಟೀಕಿಸಿದರು.

ಮಮತಾ ಬ್ಯಾನರ್ಜಿ ಹೇಳಿದ್ದೇನು?

ಶನಿವಾರ (ಮೇ 18) ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ್ದ ಮಮತಾ ಬ್ಯಾನರ್ಜಿ ಅವರು ಇಸ್ಕಾನ್‌, ರಾಮಕೃಷ್ಣ ಮಿಷನ್‌ ಹಾಗೂ ಭಾರತ್‌ ಸೇವಾಶ್ರಮ ಸಂಘದ ವಿರುದ್ಧ ಆರೋಪ ಮಾಡಿದ್ದರು. “ಮೂರೂ ಸಂಸ್ಥೆಗಳು ದೆಹಲಿಯಿಂದ ಬರುವ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿವೆ. ರಾಮಕೃಷ್ಣ ಮಿಷನ್‌ ಅನುಯಾಯಿಗಳ ಒಂದು ವಾಟ್ಸ್‌ಆ್ಯಪ್‌ ಗ್ರೂಪ್‌ ಇದೆ. ಇಂತಹ ಚಟುವಟಿಕೆಗಳಲ್ಲಿ ಸನ್ಯಾಸಿಗಳು ಏಕೆ ಭಾಗಿಯಾಗಬೇಕು? ರಾಮಕೃಷ್ಣ ಮಿಷನ್‌ ಬಗ್ಗೆ ಜನರಿಗೆ ಗೌರವವಿದೆ. ರಾಮಕೃಷ್ಣ ಮಿಷನ್‌ನ ಸನ್ಯಾಸಿಗಳು ಮತದಾನ ಮಾಡುವುದಿಲ್ಲ ಎಂಬುದು ನನಗೆ ಗೊತ್ತಿದೆ. ಆದರೆ, ನೀವೇಕೆ ಬಿಜೆಪಿಗೆ ಮತ ನೀಡಿ ಎಂಬುದಾಗಿ ಬೇರೆಯವರಿಗೆ ಕರೆ ನೀಡುತ್ತೀರಿ? ಎಲ್ಲರೂ ಅಲ್ಲ, ಕೆಲವು ಸನ್ಯಾಸಿಗಳು ಹೀಗೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದರು.

“ಭಾರತ ಸೇವಾಶ್ರಮ ಸಂಘದ ಮೇಲೆ ನನಗೆ ಅಪಾರ ಗೌರವ ಇತ್ತು. ಆದರೆ, ತೃಣಮೂಲ ಕಾಂಗ್ರೆಸ್‌ ಏಜೆಂಟ್‌ನನ್ನು ಮತಗಟ್ಟೆ ಒಳಗೆ ಬಿಡುವುದಿಲ್ಲ ಎಂಬುದಗಿ ಒಬ್ಬ ಕಾರ್ತಿಕ ಮಹಾರಾಜ ಹೇಳಿದ್ದಾರೆ ಎಂಬುದಾಗಿ ನಾನು ಕೇಳುತ್ತಲೇ ಇದ್ದೇನೆ. ರಾಜಕೀಯದಲ್ಲ ಹೀಗೆ ಭಾಗಿಯಾದವರನ್ನು ನಾನು ಸನ್ಯಾಸಿ ಎಂಬುದಾಗಿ ಕರೆಯುವುದಿಲ್ಲ. ಹೀಗೆ ರಾಜಕೀಯ ಮಾಡುತ್ತಿರುವವರನ್ನು ನಾನು ಗುರುತಿಸಿದ್ದೇನೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. ಮಮತಾ ಬ್ಯಾನರ್ಜಿ ಹೇಳಿಕೆಗೆ ಬಿಜೆಪಿಯ ಕೆಲ ನಾಯಕರೂ ಟೀಕಿಸಿದ್ದಾರೆ.

ಮಮತಾ ಬ್ಯಾನರ್ಜಿ ಹೇಳಿಕೆ ವಿರುದ್ಧ ನರೇಂದ್ರ ಮೋದಿ ಟೀಕಿಸುತ್ತಲೇ ಬಿಜೆಪಿ ನಾಯಕ ಅಮಿತ್‌ ಮಾಳವಿಯ ಅವರು ಪೋಸ್ಟ್‌ ಮಾಡಿದ್ದಾರೆ. “ಭಾರತ ಸೇವಾಶ್ರಮ ಸಂಘವು ಮಮತಾ ಬ್ಯಾನರ್ಜಿ ಅವರು ಸಂತರ ವಿರುದ್ಧ ನೀಡಿದ ಹೇಳಿಕೆಯನ್ನು ಖಂಡಿಸಿ ಹೈಕೋರ್ಟ್‌ ಮೊರೆ ಹೋಗಲಿದ್ದಾರೆ. ಕಾರ್ತಿಕ್‌ ಮಹಾರಾಜ ಅವರು ಎಂದಿಗೂ ಬೂತ್‌ ಏಜೆಂಟ್‌ಗಳ ವಿರುದ್ಧ ಮಾತನಾಡಿಲ್ಲ” ಎಂದು ಮಮತಾ ಆರೋಪವನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ: Narendra Modi: ಗುರಿ ದೊಡ್ಡದಿದೆ, 3ನೇ ಅವಧಿಯ ಆಡಳಿತಕ್ಕೆ ಪ್ಲಾನ್‌ ರೆಡಿ ಇದೆ; ಮೋದಿ ವಿಶ್ವಾಸ

Exit mobile version