ನವದೆಹಲಿ: ಸರಕಾರಿ ಸಾಲ ಯೋಜನೆಗಳನ್ನು ಒಂದೇ ವೇದಿಕೆಯಲ್ಲಿ ತಂದಿಟ್ಟು ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡುವ ವಿಶಿಷ್ಟ ಜನ ಸಮರ್ಥ್ ಪೋರ್ಟಲ್ ನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಲೋಕಾರ್ಪಣೆ ಮಾಡಿದರು. ಫಲಾನುಭವಿಗಳು ಮತ್ತು ಸಾಲದಾತರನ್ನು ಪರಸ್ಪರ ಮುಖಾಮುಖಿ ಮಾಡುವ, ಯಾವ ವಿಭಾಗದಲ್ಲಿ ಸಾಲ ದೊರೆಯಬಹುದು ಎನ್ನುವುದನ್ನು ನಿಖರವಾಗಿ ತಿಳಿಸುವ ವೇದಿಕೆ ಇದಾಗಿದೆ. ಅಂದರೆ, ಎಲ್ಲ ಸರಕಾರಿ ಸಾಲ ಯೋಜನೆಗಳ ಒಂದು ನಿಲ್ದಾಣವಾಗಿ ಕೆಲಸ ಮಾಡುವ ತಾಣ ಇದಾಗಿದೆ.
ಪೋರ್ಟಲನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಪ್ರಧಾನಿ ಮೋದಿ, ಹಿಂದೆ ಎಲ್ಲ ಯೋಜನೆಗಳು ಸರಕಾರ ಕೇಂದ್ರಿತವಾಗಿದ್ದವು. ಆದರೆ, ಈಗ 21ನೇ ಶತಮಾನದಲ್ಲಿ ಇದು ಜನಕೇಂದ್ರಿತವಾಗುವತ್ತ ಸಾಗುತ್ತಿದೆ. ಹಿಂದೆ ಒಂದು ಯೋಜನೆಯ ಸೌಲಭ್ಯವನ್ನು ಪಡೆಯಲು ಸರಕಾರದ ಬಳಿಗೆ ಹೋಗುವುದು ಜನರ ಜವಾಬ್ದಾರಿಯಾಗಿತ್ತು. ಆದರೆ, ಈಗ ಸರಕಾರವೇ ಸೌಲಭ್ಯಗಳನ್ನು ಜನರಿಗೆ ನೇರವಾಗಿ ತಲುಪಿಸುತ್ತಿದೆ,ʼʼ ಎಂದರು.
ಜನರಿಗೆ ಸೌಲಭ್ಯಗಳನ್ನು ನೇರವಾಗಿ ಒದಗಿಸುವ ನಿಟ್ಟಿನಲ್ಲಿ ಕ್ರೆಡಿಟ್ ಲಿಂಕ್ಡ್ ಸರಕಾರಿ ಯೋಜನೆಗಳ ರಾಷ್ಟ್ರೀಯ ಪೋರ್ಟಲ್ ಜನ ಸಮರ್ಥ್‌ನ ಅನಾವರಣ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದ ಮೋದಿ, ಇದು ವಿದ್ಯಾರ್ಥಿಗಳು, ರೈತರು, ಉದ್ಯಮಿಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳಿಗೆ ಭಾರಿ ಅನುಕೂಲವಾಗಲಿದ್ದು, ಅವರ ಕನಸುಗಳನ್ನು ನನಸುಗೊಳಿಸಲು ಸಹಕಾರ ನೀಡಲಿದೆ ಎಂದರು.
ಅಮೃತ ಮಹೋತ್ಸವ ನಾಣ್ಯ ಬಿಡುಗಡೆ
ಪ್ರಧಾನಿ ನರೇಂದ್ರ ಮೋದಿ ಅವರು ಆಜಾದಿ ಕಾ ಅಮೃತ ಮಹೋತ್ಸವದ ವಿನ್ಯಾಸವನ್ನು ಹೊಂದಿರುವ 1, 2, 5, 10 ಮತ್ತು 20 ರೂ. ನಾಣ್ಯಗಳ ವಿಶೇಷ ಸರಣಿಯನ್ನು ಕೂಡಾ ಬಿಡುಗಡೆ ಮಾಡಿದರು. ಇವು ಅಂಧರಿಗೂ ಅನುಕೂಲವಾಗುವಂತೆ ವಿನ್ಯಾಸಗೊಳಿಸಿದ ನಾಣ್ಯಗಳಾಗಿದ್ದು, ಮಾರುಕಟ್ಟೆಯಲ್ಲೂ ಚಲಾವಣೆಯಲ್ಲಿ ಇರಲಿವೆ.
ಈ ನಾಣ್ಯಗಳು ಜನರಿಗೆ ಅಮೃತ ಮಹೋತ್ಸವದ ಗುರಿಯನ್ನು ನೆನಪಿಸಲಿದೆ ಹಾಗೂ ಭಾರತದ ಅಭಿವೃದ್ಧಿಗೆ ಕಡೆಗೆ ಜನರನ್ನು ಪ್ರೇರೇಪಿಸಲಿವೆ ಎಂದರು ಮೋದಿ.
ಏನಿದು ಜನ ಸಮರ್ಥ್ ಪೋರ್ಟಲ್?
ಜನ ಸಮರ್ಥ್ ಪೋರ್ಟಲ್ ಎನ್ನುವುದು ಸರಕಾರಿ ಸಾಲ ಯೋಜನೆಗಳಿಗೆ ನಾವು ಅರ್ಹರೇ ಎಂದು ಪರಿಶೀಲಿಸಲು ಮತ್ತು ಸಾಲ ನೀಡುವ ಬ್ಯಾಂಕ್‌ಗಳಿಗೆ ಸಂಪರ್ಕ ಕಲ್ಪಿಸುವ ಒಂದು ವೇದಿಕೆ. ಇದರಲ್ಲಿ ಶೈಕ್ಷಣಿಕ ಸಾಲ, ಕೃಷಿ ಮೂಲ ಸೌಕರ್ಯ ಸಾಲ, ವ್ಯವಹಾರ ಸಂಬಂಧಿತ ಸಾಲ, ಜೀವನೋಪಾಯ ಸಾಲ ಹೀಗೆ ನಾಲ್ಕು ವಿಭಾಗಗಳಲ್ಲಿ ಸಾಲ ಪಡೆಯಲು ನಮ್ಮ ಅರ್ಹತೆಯನ್ನು ಸ್ವಷ್ಟಪಡಿಸಲಿದೆ. ಇದರಲ್ಲಿ ಪ್ರಮುಖವಾಗಿ ಸರಕಾರದ ಸಬ್ಸಿಡಿ ಇರುವ ಹದಿಮೂರು ಸಾಲ ಯೋಜನೆಗಳ ಬಗ್ಗೆ ನಿಖರವಾದ ಮಾಹಿತಿ ಇರಲಿದೆ.
ಮೊದಲು ನಾವು ಈ ಸಾಲಕ್ಕೆ ಅರ್ಹರೇ ಎಂದು ನೋಡಬಹುದು. ಅರ್ಹತೆ ಇದ್ದರೆ ಇದೇ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಒಂದು ಬಾರಿ ವೈಯಕ್ತಿಕ ಮಾಹಿತಿಗಳನ್ನು ತುಂಬಿದರೆ ಮುಂದೆ ಅದೇ ಸ್ವಯಂ ತುಂಬಿಕೊಳ್ಳುವ ಸ್ಮಾರ್ಟ್ ತಂತ್ರವನ್ನು ಇಲ್ಲಿ ಅಳವಡಿಸಲಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಸಾಲದಾತರು ಡಿಜಿಟಲ್ ಆಗಿಯೇ ಪರಿಶೀಲನೆ ಮಾಡಿ ನಿರ್ದಿಷ್ಟ ಬ್ಯಾಂಕ್‌ನವರು ಸಾಲ ನೀಡಲು ಮುಂದಾಗುವ ವ್ಯವಸ್ಥೆ ಇದೆ. ಇದರಲ್ಲಿ ನಾವು ಸಲ್ಲಿಸಿದ ಅರ್ಜಿಯ ಈಗಿನ ಸ್ಥಿತಿ ಏನು ಎನ್ನುವುದನ್ನು ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗಲಿದೆ.
ಇದನ್ನೂ ಓದಿ| ವಿಶ್ವ ಪರಿಸರ ದಿನಾಚರಣೆ; ಮಣ್ಣಿನ ರಕ್ಷಣೆಯ ಪಂಚಸೂತ್ರಗಳನ್ನು ವಿವರಿಸಿದ ಪ್ರಧಾನಿ ಮೋದಿ